ವೈಭವ್ ಮಹದೇವ್ ನಿರ್ದೇಸನದ ‘ಜೂನಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಪೃಥ್ವಿ ಅಂಬಾರ್ ಮತ್ತು ರಿಷಿಕಾ ಮುಖ್ಯಭೂಮಿಕೆಯ ಕಲಾವಿದರು. ಸ್ಪ್ಲಿಟ್ ಪರ್ಸನಾಲಿಟಿ ಕುರಿತು ಹೇಳುವ ಸಿನಿಮಾ ಇದೇ ಫೆಬ್ರವರಿ 9ರಂದು ತೆರೆಕಾಣಲಿದೆ.
ಪೃಥ್ವಿ ಅಂಬಾರ್ ಮತ್ತು ರಿಷಿಕಾ ಮುಖ್ಯಭೂಮಿಕೆಯಲ್ಲಿ ನಟಸಿರುವ ‘ಜೂನಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವನ್ನು ವೈಭವ್ ಮಹದೇವ್ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಮಾತನಾಡುವ ಪೃಥ್ವಿ ಅಂಬಾರ್, ‘ವೈಭವ್ ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ, ಅನುಭವದಲ್ಲಿ ತುಂಬಾ ದೊಡ್ಡವರು. ಈ ಸಿನಿಮಾದಲ್ಲಿ ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕ್ರೋರ್ ಮಾಡುವವರು ವೈಭವ್. ಅವರಷ್ಟೇ ಸ್ಕ್ರೋರ್ ಮಾಡುವವರು ರಿಷಿಕಾ. ರಿಷಿಕಾ ಎರಡೂವರೆ ತಿಂಗಳ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನನ್ನದು 50% ಪರಿಶ್ರಮವಷ್ಟೇ, ಎಲ್ಲರದ್ದೂ 100ರಷ್ಟು ಇದೆ’ ಎನ್ನುತ್ತಾರೆ.
‘ನಾವು 2022ರಲ್ಲಿ ಚಿತ್ರೀಕರಣ ಆರಂಭಿಸಿದೆವು. ಆಗ ನನ್ನದು ಎರಡನೇ ಪ್ರಾಜೆಕ್ಟ್. ನನಗೆ ಈ ರೀತಿ ಪಾತ್ರ ಸಿಕ್ಕಿರುವುದು ಖುಷಿ ಇದೆ. ತುಂಬಾ ಅಭ್ಯಾಸ ಮಾಡಿದ್ದೇವೆ. ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ’ ಎನ್ನುವುದು ನಾಯಕಿ ರಿಷಿಕಾ ಮಾತು. ನಿರ್ದೇಶಕ ವೈಭವ್ ಮಹದೇವ್, ‘ಚಿತ್ರದ ಕಥೆ ಮೇಲೆ ತುಂಬಾ ನಂಬಿಕೆ ಇದೆ. ನಾನೊಂದು ಕಥೆಯನ್ನು ಜನರಿಗೆ ಹೇಳುತ್ತಿದ್ದೇನೆ, ಅದನ್ನು ಕೋಟ್ಯಾಂತರ ಜನ ಕನ್ನಡಿಗರ ಮುಂದೆ ಇಡಬೇಕು ಎಂದರೆ ಅದು ನನ್ನ ಅದೃಷ್ಟ. ಶ್ರಮ ಬೇಕು. ಈ ಚಿತ್ರ ಮಾಡಿರುವುದಕ್ಕೆ ನನಗೂ ತೃಪ್ತಿ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ.
ವೈಭವ್ ಮಹಾದೇವ್ ಅವರು ‘ಜನ್ನಿ’ ಕಿರುಚಿತ್ರ ನಿರ್ದೇಶಿಸಿದ್ದಾರೆ. ಇವರು ಪ್ರಾಗ್‌ಫಿಲ್ಮ್ ಸ್ಕೂಲಿನಲ್ಲಿ ನಿರ್ದೇಶನದ ತರಬೇತಿಯನ್ನು ಪಡೆದಿದ್ದಾರೆ. ಈಗ ‘ಜೂನಿ’ ಸಿನಿಮಾಗೆ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಪ್ರೀತಿ ಯಾರ ಮೇಲೆ ಹುಟ್ಟುತ್ತೋ, ಅವರ ಮೇಲೆ ಪ್ರೀತಿ ಆಗುತ್ತಾ?’ ಇಂತಹದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕರು. Thrishul Creations ಬ್ಯಾನರ್ ಅಡಿಯಲ್ಲಿ ಮೋಹನ್ ಕುಮಾರ್ ಚಿತ್ರ ನಿರ್ಮಿಸಿದ್ದು, ಶ್ರೇಯಸ್ ವೈ ಎಸ್ ಸಹನಿರ್ಮಾಣ ಚಿತ್ರಕ್ಕಿದೆ. ‘ಲವ್ ಮಾಕ್ಟೇಲ್ 2’ ಚಿತ್ರದ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಫೆಬ್ರವರಿ 9ರಂದು ಸಿನಿಮಾ ತೆರೆಕಾಣಲಿದೆ.