ಪವನ್‌ ಕುಮಾರ್‌ ನಿರ್ದೇಶನದ ಯಶಸ್ವೀ ಸಿನಿಮಾ ‘U Turn’ ನೆನಪಿನೊಂದಿಗೆ ಹೊಸಬರ ‘U Turn 2’ ಸಿನಿಮಾ ತೆರೆಗೆ ಬರುತ್ತಿದೆ. ಸಂಗೀತ ನಿರ್ದೇಶಕ, ನಟರಾಗಿ ಸಿನಿಮಾಗೆ ಪರಿಚಯವಾಗಿದ್ದ ಚಂದ್ರು ಓಬಯ್ಯ ಈ ಚಿತ್ರದೊಂದಿಗೆ ನಿರ್ದೇಶಕರಾಗಿದ್ದಾರೆ. ‘ತಿಥಿ’ ಸಿನಿಮಾ ಖ್ಯಾತಿಯ ನಟಿ ಪೂಜಾ ‘U Turn 2’ ಹಿರೋಯಿನ್‌.

ನಟ, ಸಂಗೀತ ನಿರ್ದೇಶಕ ಚಂದ್ರು ಓಬಯ್ಯ ‘U Turn 2’ ಚಿತ್ರದೊಂದಿಗೆ ನಿರ್ದೇಶಕರಾಗಿದ್ದಾರೆ. ಇದೊಂದು ಹಾರರ್‌ ಕಥಾನಕ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರಿಗೆ ಜೋಡಿಯಾಗಿ ‘ತಿಥಿ’ ಸಿನಿಮಾ ಖ್ಯಾತಿಯ ಪೂಜಾ ಇದ್ದಾರೆ. “ಪವನ್‌ಕುಮಾರ್ ನಿರ್ದೇಶನದ ‘ಯು ಟರ್ನ್’ ಯಶಸ್ವೀ ಸಿನಿಮಾ. ಅದೇ ಹೆಸರನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ತುಂಬಾನೇ ಜವಾಬ್ದಾರಿ ಇರುತ್ತದೆ. ಒಬ್ಬ ಪಿಜ್ಜಾ ಹುಡುಗನ ಸುತ್ತ ನಡೆಯುವ ಹಾರರ್ – ಥ್ರಿಲ್ಲರ್ ಕಥೆಯಿದು. ಹಿಂದೆ ನಾನು ‘ಮನೋರಥ’ ಚಿತ್ರದ ಮ್ಯೂಸಿಕ್‌ಗಾಗಿ ಚೆನ್ನೈಗೆ ಹೋಗಿದ್ದಾಗ ಅಲ್ಲಿನ ಹೋಟೆಲ್‌ವೊಂದರಲ್ಲಿ ರೂಮ್ ಮಾಡಿದ್ದೆ. ಆ ಜಾಗದಲ್ಲಿ ನನಗಾದಂಥ ಅತಿ ಕೆಟ್ಟ ಅನುಭವ ಈ ಚಿತ್ರದ ಕಥೆಗೆ ಸ್ಪೂರ್ತಿಯಾಯಿತು. ಅದನ್ನೇ ಚಿತ್ರಕಥೆ ಮಾಡಿದೆ” ಎನ್ನುತ್ತಾರೆ ನಿರ್ದೇಶಕ ಚಂದ್ರು ಓಬಯ್ಯ.

ಕನ್ನಡದ ಮೈಲುಗಲ್ಲಾದ ಸಿನಿಮಾ ‘ತಿಥಿ’ ನಾಯಕನಟಿ ಪೂಜಾ ‘U Turn 2’ ಹಿರೋಯಿನ್‌. “ಚಿತ್ರದ ಶೀರ್ಷಿಕೆ ಬಗ್ಗೆ ಕುತೂಹಲವಿತ್ತು. ಕಥೆ ಕೇಳಿದ ಮೇಲೆ ಇದೇ ಟೈಟಲ್ ಸೂಕ್ತ ಅನಿಸಿತು. ಜೀವನ ಹೇಗೆ ಹೋಗುತ್ತೋ ಹಾಗೆ ಸಾಗುವ ಹುಡುಗಿಯ ಪಾತ್ರ ನನ್ನದು, ಆಕೆಯ ಲೈಫ್ ಹೇಗೆ ಟರ್ನ್ ಆಗುತ್ತೆ ಅನ್ನೋದೇ ಚಿತ್ರದ ಕಥೆ” ಎನ್ನುತ್ತಾರೆ. ಬೆಂಗಳೂರು, ಹೊನ್ನಾವರ, ಬಿಡದಿಯ ಸುತ್ತಮುತ್ತ ಸಿನಿಮಾಗೆ ಚಿತ್ರೀಕರಣ ನಡೆದಿದ್ದು, ಮೊನ್ನೆಯಷ್ಟೇ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಿರ್ಮಾಪಕ ಆನಂದ್‌ ಸಂಪಂಗಿ ಅವರು ಚಿತ್ರದಲ್ಲಿ ರಾಜಕಾರಣಿ ಪಾತ್ರ ನಿರ್ವಹಿಸಿದ್ದಾರೆ. ಸ್ನೇಹಾ ಭಟ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರಿಸುಬ್ಬು, ‘ಬಿಗ್‌ಬಾಸ್’ ಮಂಜು ಪಾವಗಡ, ರಘು ರಾಮನಕೊಪ್ಪ, ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್ ಇತರೆ ಪಾತ್ರಗಳಲ್ಲಿದ್ದಾರೆ. ಇದೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here