ಮನಸಾಕ್ಷಿ ಇದ್ರೆ ನಾವು ಮಾಡೋ ತಪ್ಪು ಒಳಗಿಂದೊಳಗೆ ಪ್ರತಿಕ್ಷಣವು ನಮ್ಮನ್ನ ಕಾಡುತ್ತದೆ ಎನ್ನುವಂತಹ ಭಾವಾರ್ಥದ ಉಪಕಥೆಯೊಂದಿಗೆ ಮಗಳ ಸಾವಿಗೆ ನ್ಯಾಯ ಹುಡುಕುವ ಭಾವುಕ ತಂದೆಯ ತೊಳಲಾಟದ ರೋಚಕ ಕತೆ ‘ಕಾಣೆಕ್ಕಾಣೆ’. SonyLIV ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಈ ಮಲಯಾಳಂ ಸಿನಿಮಾ.

ನಾವು ಜಗತ್ತಿನ ಕಣ್ಣಿಂದ, ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳಬಹುದು. ಆದರೆ ನಮ್ಮಿಂದ ನಾವು ತಪ್ಪಿಸಿಕೊಳ್ಳುವುದು ಅಸಾಧ್ಯ. ಜಟಿಲ ಸಮಸ್ಯಗಳಿಂದ ಪಾರಾಗಲು ತೆಗೆದುಕೊಳ್ಳುವ ಕಠಿಣ ನಿರ್ಧಾರ ಕ್ಷಣಮಾತ್ರದ್ದೋ ಧೀರ್ಘಾಲೋಚನೆಯದ್ದೋ ಆದರೆ ಎದುರಾಗುವ ಪರಿಣಾಮ ಎಷ್ಟು ಗಾಢವಾಗಿರತ್ತೆ ಅನ್ನೋದನ್ನ ಬಣ್ಣಿಸಲಸಾಧ್ಯ. ಅದೂ ಒಳ್ಳೆಯದು, ಕೆಟ್ಟದ್ದೂ ಅನ್ನೋದಕ್ಕಿಂತ ನಮ್ಮ ಕಲ್ಪನೆಗೂ ಮೀರಿದ್ದು. ಮನಸಾಕ್ಷಿ ಇದ್ರೆ ನಾವು ಮಾಡೋ ತಪ್ಪು ಒಳಗಿಂದೊಳಗೆ ಪ್ರತಿಕ್ಷಣವು ನಮ್ಮನ್ನ ಕಾಡುತ್ತದೆ ಎನ್ನುವಂತಹ ಭಾವಾರ್ಥದ ಉಪಕಥೆಯೊಂದಿಗೆ ಮಗಳ ಸಾವಿಗೆ ನ್ಯಾಯ ಹುಡುಕುವ ಭಾವುಕ ತಂದೆಯ ತೊಳಲಾಟದ ರೋಚಕ ಕತೆ ‘ಕಾಣೆಕ್ಕಾಣೆ’.

ಉಪ ತಹಶೀಲ್ದಾರ್‌ ವೃತ್ತಿಯಲ್ಲಿರುವಂತ ಪೌಲ್‌ ಮಥಾಯ್‌, ಅಪಘಾತದಲ್ಲಿ ಸಾವಿಗೀಡಾಗಿರುವ ತನ್ನ ಮಗಳ ಕೇಸಿಗೆ ಸಂಬಂಧಿಸಿದ ಕೆಲಸದ ನಿಮಿತ್ತ ಪಟ್ಟಣಕ್ಕೆ ಬರುತ್ತಾನೆ. ಮಗಳ ಸ್ಥಾನ ತುಂಬಿರುವಂತ ಅಳಿಯನ ಎರಡನೇ ಪತ್ನಿ ‘ಸ್ನೇಹ’ ಆತನನ್ನು ಪ್ರೀತಿಯಿಂದಲೇ ಸ್ವಾಗತಿಸಿ ಸತ್ಕರಿಸುತ್ತಾಳೆ. ಅಳಿಯ ಎಲೆನ್‌ ಮತ್ತು ಪ್ರೀತಿಯ ಮೊಮ್ಮಗ ಕುಟ್ಟುವನ್ನು ನೋಡಿ ಮಗಳ ಅನುಪಸ್ಥಿತಿಯನ್ನು ಭಾವುಕವಾಗಿ ನೆನೆಯುತ್ತ ಮೊಮ್ಮಗನೊಂದಿಗೆ ಸಮಯ ಕಳೆದು ಹಿಂದಿರುಗುತ್ತಾನೆ. ಅಲ್ಲಿವರೆಗೂ ಸಾಧಾರಣ ಎನ್ನುವಂತಿದ್ದ ಸಿನಿಮಾ ಪೌಲ್ ಹೊರಟು ನಿಂತಾಗ ಕಣ್ಣಿಗೆ ಕಾಣುವ ಪೋಟೋವೊಂದರಿಂದ ಥ್ರಿಲ್ಲರ್‌ ಕಥೆಯಂತಾಗಿ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ಕಥೆಯೊಂದಿಗೆ ಭಾವನಾತ್ಮಕವಾಗಿ ಸಾಗುವ ಪಾತ್ರಗಳು ಕೊನೆಯ ಹಂತದಲ್ಲಿ ನಿಲುವಿನಿಂದಾಚೆ ಬಂದು ಬದಲಾವಣೆಯನ್ನು ಕಾಣುತ್ತವೆ. ಎಲ್ಲರ ವಿರುದ್ದವಾಗಿ ನಿಂತು ರಹಸ್ಯವನ್ನು ಸೂಕ್ಷ್ಮವಾಗಿ ಭೇದಿಸಿ ನ್ಯಾಯಕ್ಕಾಗಿ ಹೊರಾಡುವ ಪಾತ್ರ ಕೊನೆಗೆಲ್ಲವನ್ನೂ ಬದಿಗೊತ್ತಿ ಸಂದರ್ಭಕ್ಕೆ ಶರಣಾಗುತ್ತದೆ. ಅದು ಹೇಗೆ?

ಕವಲು ಪ್ರೀತಿಯ ಭಾವ ಬಂಧಕ್ಕೆ ಸಿಲುಕುವ ಪಾತ್ರವೊಂದು ಒತ್ತಡದಿಂದಲೋ, ಸಂದರ್ಭವೋ ಕ್ಷಣಾರ್ಧದಲ್ಲಿ ಮೈಮರೆತು ತೆಗೆದುಕೊಳ್ಳುವ ನಿರ್ಧಾರದಿಂದ ಪರಿತಪಿಸುವ ಪರಿಯನ್ನು ಎದೆಗೆ ತಟ್ಟುವಂತೆ ಹೇಳಿದ್ದಾರೆ. ಚಿತ್ರದ ಪ್ರತಿಯೊಂದು ಪಾತ್ರವೂ ತಮ್ಮ ತಪ್ಪಿನ ಭಾರದಲ್ಲಿ ನಲುಗಿ ಹೋಗುತ್ತವೆ. ಜೀವನದಲ್ಲಿ ಮಾಡಿದ ಪ್ರತಿಯೊಂದು ನಿರ್ಧಾರದ ಬಗ್ಗೆಯೂ ಆಲೋಚಿಸುತ್ತವೆ. ಆಗಿಹೋದ ತಪ್ಪುಗಳ ಅರಿತುಕೊಳ್ಳುತ್ತವೆ.

ಚಿತ್ರದಲ್ಲಿ ಅನಗತ್ಯ ದೃಶ್ಯಗಳಿಲ್ಲ. ‘ಅಪಘಾತದಂತಹ ಆಕಸ್ಮಿಕಗಳು ಯಾರ ಬದುಕಿನಲ್ಲೂ ಎದುರಾಗಬಹುದು. ಆದರೆ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಅಲ್ಲೇ ಬಿಟ್ಟು ಹೋಗುವುದು ಆ ವ್ಯಕ್ತಿಯ ನಿರ್ಧಾರವೇ ಆಗಿರುತ್ತೆ ಅಲ್ವಾ,?’ ಎನ್ನುವ ಸೂಕ್ಷ್ಮ ಸಂಭಾಷಣೆಯ ಮಾತುಗಳಷ್ಟೆ ಅಲ್ಲದೇ ದೃಶ್ಯದಿಂದ ದೃಶ್ಯಕ್ಕೆ ಬೇಕಾದ ಅರ್ಥಪೂರ್ಣ ಮೌನಕ್ಕೂ ಒತ್ತು ಕೊಟ್ಟಿದ್ದಾರೆ. ಟೊವಿನೊ ಥಾಮಸ್‌ ವಿಶಿಷ್ಟ ಪಾತ್ರ ಪೋಷಣೆಯಲ್ಲಿ ಗಮನ ಸೆಳೆದರೆ, ಐಶ್ವರ್ಯಾ ಲಕ್ಷ್ಮಿಯವರು ತುಂಬು ಗರ್ಭಿಣಿ ಮಹಿಳೆಯ ಪಾತ್ರಕ್ಕೆ ಜೀವತುಂಬಿದ್ದಾರೆ, ಎಂದಿನಂತೆ ಸುರಾಜ್ ವೆಂಜರಮೂಡು ಅತ್ಯುತ್ತಮ ಪಾತ್ರಪೋಷಣೆಯಿದೆ. ಶೃತಿ ರಾಮಚಂದ್ರನ್‌ ಕ್ಯೂಟಾಗಿ ಕಾಣ್ತಾರೆ. ಒಟ್ಟಾರೆಯಾಗಿ ಸಿನಿಮಾ ಒಂದಷ್ಟು ಪ್ರಶ್ನೆ ಮತ್ತು ಉತ್ತರಗಳೊಂದಿಗೆ ಆಲೋಚನಗಳತ್ತ ದೂಡಿ ವಿಶೇಷ ಅನುಭವ ನೀಡುತ್ತದೆ.

LEAVE A REPLY

Connect with

Please enter your comment!
Please enter your name here