ರಂಗಭೂಮಿ ನಟ, ನಿರ್ದೇಶಕ ಗೋಮಾರದಹಳ್ಳಿ ಮಂಜುನಾಥ್‌ ‘ಕಾಟೇರ’ ಸಿನಿಮಾದ ‘ಸಿದ್ದಣ್ಣ’ ಪಾತ್ರದಲ್ಲಿ ನಟಿಸಿದ್ದಾರೆ. ಹೆಚ್ಚು ಮಾತನಾಡದ, ಮೌನದಲ್ಲೇ ಸನ್ನಿವೇಶಕ್ಕೆ ಜೀವ ತುಂಬುವ ಸಹಜಾಭಿನಯದ ಪಾತ್ರವದು. ರೈತರ ಶೋಷಣೆ, ಮರ್ಯಾದಾ ಹತ್ಯೆ ಕುರಿತ ವಸ್ತು ಇರುವ ‘ಕಾಟೇರ’ ಸಮಾಜಕ್ಕೆ ಬಹುಮುಖ್ಯವಾದ ಸಿನಿಮಾ ಎನ್ನುತ್ತಾರವರು.

ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಸದ್ದು ಮಾಡುತ್ತಿದೆ. ವಿಶೇಷವಾಗಿ ಚಿತ್ರದ ಕಥಾವಸ್ತು ಮತ್ತು ಮೇಕಿಂಗ್‌ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 80ರ ದಶಕದ ಕಾಲಘಟ್ಟ, ಆ ಸಂದರ್ಭದ ಸಾಮಾಜಿಕ – ರಾಜಕೀಯ ಸ್ಥಿತಿಗತಿ, ಜಾತಿ – ವರ್ಗ ಸಂಘರ್ಷಗಳ ಕುರಿತು ಹೇಳುವ ಸಿನಿಮಾ ಸಾಕಷ್ಟು ಚರ್ಚೆಯಾಗುತ್ತಿದೆ. ಚಿತ್ರದಲ್ಲಿ ರೈತ ‘ಸಿದ್ದಣ್ಣ’ನಾಗಿ ಅಭಿನಯಿಸಿರುವ ನಟ ಗೋಮಾರದಹಳ್ಳಿ ಮಂಜುನಾಥ್‌ ಅವರು ಸಿನಿಮಾದ ಯಶಸ್ಸಿಗೆ ಸಂತಸ ವ್ಯಕ್ತಪಡಿಸುತ್ತಾರೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿರುವುದು ಅವರಿಗೆ ಹೆಮ್ಮೆ ತಂದಿದೆ.

ಗೋಮಾರದಹಳ್ಳಿ ಮಂಜುನಾಥ್‌ ಮೂಲತಃ ರಂಗಭೂಮಿ ನಟ, ನಿರ್ದೇಶಕ. ‘ನೀನಾಸಂ’ನಲ್ಲಿ ರಂಗ ತರಬೇತಿ ಪಡೆದ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅವರೀಗ ಪೂರ್ಣಪ್ರಮಾಣದ ರಂಗಭೂಮಿ ಮತ್ತು ಸಿನಿಮಾ ನಟ. ‘ಕಾಟೇರ’ ಚಿತ್ರದಲ್ಲಿ ಅವರು ರೈತ ‘ಸಿದ್ದಣ್ಣ’ನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಸನ್ನಿವೇಶಗಳಲ್ಲಿ ರೈತ ಸಮುದಾಯದ ಹಿರೀಕನಾಗಿ ಕಾಣಿಸಿಕೊಳ್ಳುವ ಅವರು ತಮ್ಮ ಸಹಜಾಭಿನಯದಿಂದ ಗಮನ ಸೆಳೆಯುತ್ತಾರೆ. ಒಂದು ಸಿನಿಮಾವನ್ನು ಒಟ್ಟಾರೆಯಾಗಿ ಚೆಂದಗೊಳಿಸುವಲ್ಲಿ ಸಿದ್ದಣ್ಣ, ಹುಲುಗಪ್ಪ (ಬೆನಕ ನಂಜಪ್ಪ ನಟಿಸಿದ್ದಾರೆ) ಸೇರಿದಂತೆ ರೈತಾಪಿ ವರ್ಗದ ಪಾತ್ರಗಳು ನೆರವಾಗಿವೆ.

ಸಮಾಜಕ್ಕಿದು ಕನ್ನಡಿ | ‘ಚಿತ್ರದ ಕತೆ ತುಂಬಾ ವಿಶಿಷ್ಟವಾಗಿದೆ. ಹಾಗಾಗಿ ಜನರು ಚಿತ್ರವನ್ನು ಸ್ವೀಕರಿಸಿದ್ದಾರೆ. ಕುಟುಂಬ ಸಮೇತ ಬಂದು ವೀಕ್ಷಿಸುತ್ತಿದ್ದಾರೆ’ ಎನ್ನುತ್ತಾರೆ ಮಂಜುನಾಥ್‌. ಚಿತ್ರ ಬಿಡುಗಡೆಯಾದ ದಿನದಂದು ತವರೂರು ಶಿರಾದಲ್ಲಿ ಸಿನಿಮಾ, ರಂಗಭೂಮಿ ಆಸಕ್ತರು ಮಂಜುನಾಥ್‌ ಅವರನ್ನು ಸನ್ಮಾನಿಸಿದ್ದರು. ಸಿನಿಮಾದ ಭಾಗವಾಗಿ ಒಳ್ಳೆಯ ಪಾತ್ರ ಮಾಡಿದ್ದೀರಿ ಎಂದು ಮೆಚ್ಚಿಕೊಂಡಿದ್ದರು. ‘ಚಿತ್ರದಲ್ಲಿ 80ರ ದಶಕದ ರೈತರ ಸಂಕಷ್ಟಗಳನ್ನು ಹೇಳಿದ್ದಾರೆ. ಆದರೆ ಈ ಹೊತ್ತಿಗೂ ರೈತರ ಶೋಷಣೆ ತಪ್ಪಿಲ್ಲ. ಹಲವು ರೀತಿಯಲ್ಲಿ ರೈತರು ಉಳ್ಳವರಿಂದ ಶೋಷಣೆಗೊಳಗಾಗುತ್ತಿದ್ದಾರೆ. ಜಾತೀಯತೆ, ಮರ್ಯಾದಾ ಹತ್ಯೆಗಳು ದಿನನಿತ್ಯ ನಡೆಯುತ್ತಲೇ ಇವೆ. ಸಿನಿಮಾ ಈ ಹೊತ್ತಿಗೂ ಅತ್ಯಂತ ಪ್ರಸ್ತುತವಾಗಿದೆ. ಹಾಗಾಗಿ ಜನರಿಗೆ ಸಿನಿಮಾ ಕನೆಕ್ಟ್‌ ಆಗಿದೆ’ ಎನ್ನುತ್ತಾರೆ ಗೋಮಾರದಹಳ್ಳಿ ಮಂಜುನಾಥ್‌.

ಅವಕಾಶ ಸಿಕ್ಕಿದ್ದು ಹೇಗೆ? | ಮಂಜುನಾಥ್‌ ಅವರ ಬೆಳ್ಳಿತೆರೆ ಅಭಿಯಾನ ಶುರುವಾಗಿದ್ದು ‘ಪಲ್ಲಟ’ ಚಿತ್ರದೊಂದಿಗೆ. ಆನಂತರ ಕೆಲವು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದ ಅವರು ಕಳೆದ ವರ್ಷದ ‘ಗುರುಶಿಷ್ಯರು’ ಚಿತ್ರದಲ್ಲಿ ನಟಿಸಿದ್ದರು. ಇದು ತರುಣ್‌ ಸುಧೀರ್‌ ಸಹನಿರ್ಮಾಣದ ಸಿನಿಮಾ. ಅಲ್ಲಿನ ಸಂಪರ್ಕ ‘ಕಾಟೇರ’ ಸಿನಿಮಾಗೆ ಕರೆತಂದಿದೆ. ಚಿತ್ರದ ಹೀರೋ ದರ್ಶನ್‌ ಅವರೂ ‘ನೀನಾಸಂ’ನಲ್ಲಿ ಕಲಿತವರು. ತಾವೂ ನೀನಾಸಂ ವಿದ್ಯಾರ್ಥಿ ಎಂದು ಮಂಜುನಾಥ್‌ ಹೇಳಿದಾಗ ದರ್ಶನ್‌ ಖುಷಿ ಪಟ್ಟಿದ್ದಾರೆ. ‘ನಾನೂ ನೀನಾಸಂನಲ್ಲಿ ಕಲಿತವನು ಎಂದಾಗ ದರ್ಶನ್‌ ಆತ್ಮೀಯವಾಗಿ ಮಾತನಾಡಿದರು. ಚಿತ್ರೀಕರಣದ ಸಂದರ್ಭದಲ್ಲಿ ಅವರೊಂದಿಗೆ ಒಡನಾಟ ನೆನಪಿನಲ್ಲಿ ಉಳಿಯುವಂಥದ್ದು’ ಎನ್ನುತ್ತಾರೆ ಮಂಜುನಾಥ್‌. ಚಿತ್ರದಲ್ಲಿ ನಟಿಸಿರುವ ಅಚ್ಯುತ್‌ ಕುಮಾರ್‌ ಕೂಡ ‘ನೀನಾಸಂ’ನವರು. ಮಂಜುನಾಥ್‌ ಅವರ ಆತ್ಮೀಯ ಸ್ನೇಹಿತ ಕೂಡ.

ಎಲ್ಲೆಲ್ಲಿ ಚಿತ್ರೀಕರಣ? | ಮಂಜುನಾಥ್‌ ಸುಮಾರು 40 ದಿನಗಳ ಕಾಲ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕನಕಪುರದ ಬಳಿ ಹಾಕಿದ್ದ ಹಳ್ಳಿ ಸೆಟ್‌ನಲ್ಲಿ ಹೆಚ್ಚು ದಿನಗಳು ಚಿತ್ರೀಕರಣ ನಡೆದದ್ದು. ಹೈದರಾಬಾದ್‌ನಲ್ಲಿ ಹಾಕಿದ್ದ ಸೆಟ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಒಂದಷ್ಟು ದಿನ ಪಾಲ್ಗೊಂಡಿದ್ದಾರೆ. ‘ರಾಕ್‌ಲೈನ್‌ ಪ್ರೊಡಕ್ಷನ್ಸ್‌ ತುಂಬಾ ವೃತ್ತಿಪರ ನಿರ್ಮಾಣ ಸಂಸ್ಥೆ. ಕಲಾವಿದರು ಹಾಗೂ ತಂತ್ರಜ್ಞರ ಊಟೋಪಚಾರಕ್ಕೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ನೋಡಿಕೊಂಡರು’ ಎನ್ನುತ್ತಾರೆ ಮಂಜುನಾಥ್‌. ‘ಕಾಟೇರ’ದಲ್ಲಿ ಬೆನಕ ನಂಜಪ್ಪ, ರತ್ನ ಸಕಲೇಶಪುರ, ಹರೀಶ್‌ ಛಲವಾದಿ, ಮಂಜು ಸಿರಿಗೆರೆ, ದಯಾ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಹಲವರು ರಂಗಭೂಮಿ ಹಿನ್ನೆಲೆಯ ಕಲಾವಿದರು ಎನ್ನುವುದು ವಿಶೇಷ.

ಗ್ರಾಮಾಯಣ | ಶಿರಾ ಸೀಮೆಯ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮಂಜುನಾಥ್‌ ಇತ್ತೀಚೆಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸತೊಡಗಿದ್ದಾರೆ. ಅವರು ನಟಿಸಿರುವ ‘ಅರಸಯ್ಯನ ಪ್ರೇಮಪ್ರಸಂಗ’, ‘ಧೂಪದ ಮಕ್ಕಳು’ ತೆರೆಗೆ ಸಿದ್ಧವಾಗಿವೆ. ಸದ್ಯ ವಿನಯ್‌ ರಾಜಕುಮಾರ್‌ ಅಭಿನಯದ ‘ಗ್ರಾಮಾಯಣ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್‌ ಅವರ ಮುಂದಿನ ಚಿತ್ರವೂ ಸೇರಿದಂತೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ನಟಿಸಲಿದ್ದಾರೆ. ‘ರಂಗಭೂಮಿಯವರಾದ ನಾವು ಅಭಿನಯಕ್ಕೆ ಸವಾಲಾಗುವಂಥ ವಿಶಿಷ್ಟ ಪಾತ್ರಗಳ ನಿರೀಕ್ಷೆಯಲ್ಲಿರುತ್ತೇವೆ. ಸಮಾಜಕ್ಕೆ ಒಳಿತಾಗುವ, ಸಂದೇಶವಿರುವಂಥ ಕತೆಗಳಾದರೆ ಹೆಚ್ಚು ಖುಷಿ. ಕಾಟೇರ ಸಿನಿಮಾದ ಪಾತ್ರ ಚಿಕ್ಕದಾದರೂ ನನಗೆ ತೃಪ್ತಿ ಕೊಟ್ಟಿದೆ’ ಎನ್ನುತ್ತಾರೆ.

ರಂಗಭೂಮಿ ನಂಟು | ಪದವಿ ಮುಗಿಸಿದ ನಂತರ ‘ನೀನಾಸಂ’ನಲ್ಲಿ ತರಬೇತಿ ಪಡೆದ ಮಂಜುನಾಥ್‌ ಮುಂದೆ ಸಾಕಷ್ಟು ರಂಗಪ್ರಯೋಗಗಳನ್ನು ಮಾಡಿದರು. ಅವರು ನಿರ್ದೇಶಿಸಿ, ನಟಿಸಿದ ‘ಜೋಗಿ ಪ್ರಣಯ’ ಏಕವ್ಯಕ್ತಿ ನಾಟಕ ವಿಶಿಷ್ಟ ಪ್ರಯೋಗ. ಸಾಹಿತಿ ಶಿವರಾಂ ಕಾರಂತರ ಕೃತಿಗಳನ್ನು ಆಧರಿಸಿ ಮಕ್ಕಳಿಗಾಗಿ ‘ನಿಮ್ಮ ವೋಟು ಯಾರಿಗೆ’, ‘ಇಸ್ಪೀಟ್‌ ಗುಲಾಮ’ ನಾಟಕಗಳನ್ನು ನಿರ್ದೇಶಿದರು. ರಂಗಭೂಮಿ ಮತ್ತು ಸಿನಿಮಾ ನಟಿ ಅಕ್ಷತಾ ಪಾಂಡವಪುರ ಅವರೊಂದಿಗೆ ಮಂಜುನಾಥ್‌ ನಟಿಸಿದ ‘MG ರೋಡ್‌ ಶಾಂತಿ’ ವಿಶಿಷ್ಟ ರಂಗಪ್ರಯೋಗವಾಗಿ ಹೆಸರಾಗಿತ್ತು. ಮಂಜುನಾಥ್‌ ಶಿರಾ ಸೀಮೆಯಲ್ಲಿ ರಂಗಶಿಬಿರಗಳನ್ನು ಆಯೋಜಿಸುತ್ತಿರುತ್ತಾರೆ. ಶಿರಾ ಸೀಮೆಯ ಜುಂಜಪ್ಪನ ಗುಡ್ಡದಲ್ಲಿ ಪ್ರತೀ ವರ್ಷ ನಡೆಯುವ ‘ಶಿವೋತ್ಸವ’ ಜನಪದ ಕಾರ್ಯಕ್ರಮದಲ್ಲಿ ಮಂಜುನಾಥ್‌ ಅವರ ಉಸ್ತುವಾರಿ ಇರುತ್ತದೆ. ಗ್ರಾಮೀಣ ಸೊಗಡನ್ನು ಪರಿಚಯಿಸುವ ‘ನೇಟೀವ್‌ ನೆಸ್ಟ್‌’ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ಅವರೀಗ ಉತ್ತಮ ಸಿನಿಮಾ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here