ವಿಜಯ್‌ ಕುಮಾರ್‌ ಕೊಂಡ ನಿರ್ದೇಶನದಲ್ಲಿ ನಿಖಿಲ್‌ ಕುಮಾರ್‌ ನಟಿಸಿರುವ ‘ರೈಡರ್’ ಸಿನಿಮಾ ಡಿಸೆಂಬರ್‌ 24ರಂದು ತೆರೆಕಾಣಲಿದೆ. ಕಶ್ಮೀರಾ ಪರದೇಸಿ ನಾಯಕಿಯಾಗಿ ನಟಿಸಿರುವ ಆಕ್ಷನ್‌ – ಫ್ಯಾಮಿಲಿ ಡ್ರಾಮಾ ಇದು.

ಈ ವರ್ಷಾಂತ್ಯದ ನಿರೀಕ್ಷಿತ ಚಿತ್ರಗಳಲ್ಲಿ ‘ರೈಡರ್’ ಕೂಡ ಒಂದು. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಎರಡು ವೀಡಿಯೋ ಸಾಂಗ್‌ಗಳಿಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಡಿಸೆಂಬರ್‌ 24ರಂದು ರಾಜ್ಯದ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರದ ನಿರ್ಮಾಪಕರ ಯೋಜನೆ. ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. “ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ ‘ರೈಡರ್’ ಚಿತ್ರ ನಿರ್ಮಾಣ ಮಾಡಿದ್ದೇವೆ. ನನ್ನಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗಲಿದೆ” ಎನ್ನುವುದು ಲಹರಿ ವೇಲು ಅವರ ವಿಶ್ವಾಸದ ಮಾತು.

ನಿರ್ಮಾಪಕ ಸುನೀಲ್‌ ಗೌಡ ಮಾತನಾಡಿ, “ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಮೋಜೊ ಆಪ್‌ನಲ್ಲಿ ನಮ್ಮ ಚಿತ್ರದ ಹಾಡು ಮಿಲಿಯ‌ನ್‌ಗಟ್ಟಲೆ ವೀಕ್ಷಣೆಯಾಗಿದೆ” ಎಂದರು. ಅಗಲಿದ ನಟ ಅಪ್ಪು ಅವರನ್ನು ನೆನೆದು ಮಾತು ಆರಂಭಿಸಿದ ನಾಯಕ ನಿಖಿಲ್ ಕುಮಾರ್ ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು ನೆನಪಿಸಿಕೊಂಡರು. “ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಕಥೆ ಹೇಳಿದರು. ನಂತರ ಸುನೀಲ್ ಹಾಗೂ ಲಹರಿ ಸಂಸ್ಥೆ ಮೂಲಕ ಚಿತ್ರದ ನಿರ್ಮಾಣ ಆರಂಭವಾಯಿತು. ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಇದು ಚಿತ್ರಕ್ಕೆ ಶುಭ ಸೂಚನೆ” ಎಂದರು ನಿಖಿಲ್ ಕುಮಾರ್.

ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಸುಪ್ರೀತ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನಟರಾದ ರಾಜೇಶ್ ನಟರಂಗ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ, ಗೀತರಚನೆಕಾರ ಕವಿರಾಜ್, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಇತರರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು. ಆರಂಭದಲ್ಲಿ ಅಗಲಿದ ನಾಯಕನಟ ಪುನೀತ್‌ ರಾಜಕುಮಾರ್‌ ಮತ್ತು ಹಿರಿಯ ನಟ ಶಿವರಾಮ್ ಅವರನ್ನು ನೆನೆದು ಪತ್ರಿಕಾಗೋಷ್ಠಿ ಆರಂಭಿಸಲಾಯಿತು. ರೀಲ್ಸ್ ನಲ್ಲಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಹತ್ತು ಪ್ರತಿಭೆಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Connect with

Please enter your comment!
Please enter your name here