ಸಿನಿಮಾ ತನ್ನ ಪಾಡಿಗೆ ತಾನು ಚೆನ್ನಾಗಿಯೇ ಇದೆ. ಆದರೆ ನನಗೆ ಈ ಸಿನಿಮಾದಲ್ಲಿ ಕಂಡ ಮುಖ್ಯ ಸಮಸ್ಯೆಯೆಂದರೆ ವಿಷಯದ ಆಳಕ್ಕೆ ಇಳಿಯದೇ ಮೇಲು ಸ್ತರದಲ್ಲಿ ಎಲ್ಲವನ್ನೂ ದಾಟಿಸಲು ನಿರ್ದೇಶಕರು ಪ್ರಯತ್ನಿಸುವುದು. ಈ ಕಥಾವಸ್ತು ಎಲ್ಲ ವಯಸ್ಸಿನವರಿಗೂ ತಲುಪಿಸುವ ಅಗತ್ಯ ಖಂಡಿತಾ ಇದೆ. ಆದರೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಲಾಗದು.
ಗೇ ಹುಡುಗನೊಬ್ಬ ಸಮಾಜದ ಒತ್ತಾಯಕ್ಕೆ ಮಣಿದು ಮದುವೆಯಾಗುವುದು, ಅನಂತರ ಹೇಗೋ ಯೌವನದ ಆರ್ಭಟ ಲಿಬಿಡೋದಿಂದಾಗಿ ಮಗು ಹುಟ್ಟಿಸುವುದು, ವರ್ಷ ಕಳೆಯುವುದರಲ್ಲಿ ಹೆಣ್ಣಿನೊಡನೆ ಆಸಕ್ತಿ ಕಳೆದುಕೊಳ್ಳುವ ಕತೆ ಹೊಸತೇನೂ ಅಲ್ಲ. ಅಥವಾ ನಾನೊಬ್ಬನೇ ಹೇಳಿರುವುದೂ ಅಲ್ಲ. ಈ ಕತೆಯು ಹಲವು ಆಯಾಮಗಳಲ್ಲಿ ಎಲ್ಲಾ LGBTQ+ ಸಮುದಾಯದವರಿಗೆ ಗೊತ್ತೇ ಇರುತ್ತದೆ. ಎಲ್ಲಾ ಗೊತ್ತಿದ್ದೂ ಈಗಲೂ ನನ್ನ ಕಣ್ಣೆದುರೇ ಹಲವಾರು ಹುಡುಗರು ಮದುವೆಯೆಂಬ ಸಲ್ಲದ ಒತ್ತಾಯಕ್ಕೆ ಮಣಿದು, ತನ್ನ ಬದುಕನ್ನೂ ಮತ್ತು ಮುಗ್ಧ ಹೆಣ್ಣೊಬ್ಬಳ ಬದುಕನ್ನೂ ಹಾಳು ಮಾಡುವುದನ್ನು ನೋಡುತ್ತಲೇ ಇದ್ದೇನೆ. ಆದರೆ ಅದನ್ನೇ ತೆರೆಯ ಮೇಲೆ ಜೋಯ್ ಬೇಬಿ ಅಚ್ಚುಕಟ್ಟಾಗಿ ತಂದಿದ್ದಾರೆ.
ಸಿನಿಮಾ ತನ್ನ ಪಾಡಿಗೆ ತಾನು ಚೆನ್ನಾಗಿಯೇ ಇದೆ. ಆದರೆ ನನಗೆ ಈ ಸಿನಿಮಾದಲ್ಲಿ ಕಂಡ ಮುಖ್ಯ ಸಮಸ್ಯೆಯೆಂದರೆ ವಿಷಯದ ಆಳಕ್ಕೆ ಇಳಿಯದೇ ಮೇಲು ಸ್ತರದಲ್ಲಿ ಎಲ್ಲವನ್ನೂ ದಾಟಿಸಲು ನಿರ್ದೇಶಕರು ಪ್ರಯತ್ನಿಸುವುದು. ಸಮಾಜ ಯಾವ ರೀತಿ ಒಬ್ಬ ಗೇ ಹುಡುಗನನ್ನು ಮದುವೆಗೆ ಒತ್ತಾಯಿಸುತ್ತದೆ ಮತ್ತು ಮುಗ್ಧ ಹುಡುಗಿ ಧೈರ್ಯ ತೆಗೆದುಕೊಳ್ಳದೆ ಹೇಗೆ ಬದುಕುಪೂರ್ತಿ ನೋಯುತ್ತಾಳೆ ಎನ್ನುವುದೇ ನಿಜವಾದ ಕತೆ. ಆದರೆ ನಿರ್ದೇಶಕರು ಕೇವಲ ಅದನ್ನು ಮಾತು, ಮೌನದಲ್ಲಿಯೇ ದಾಟಿಸಲು ಪ್ರಯತ್ನಿಸಿದ್ದಾರೆ. ತಂದೆಯ ಮುಂದೆ ಮಮ್ಮೂಟಿ ‘ನಾನು ಬೇಡವೆಂದರೂ ಒತ್ತಾಯ ಮಾಡಿದಿರಿ’ ಎಂದು ಹೇಳಿ ಅಳುವ ದೃಶ್ಯದೊಂದಿಗೇ ಅದೆಲ್ಲವನ್ನೂ ಹೇಳಲು ಪ್ರಯತ್ನಿಸುತ್ತಾರೆ. ಆದರೆ ವಿವರಗಳನ್ನು ಕೊಡುವುದಿಲ್ಲ. ಅದೇ ಒಂದು ದೊಡ್ಡ ಪರ್ವ. ಹಾಗೆಯೇ ಹೆಂಡತಿಯಾದವಳ ಸಂಕಟಗಳ ಆಳಕ್ಕೂ ಇಳಿದು ಅದನ್ನು ತೋರಿಸುವುದಿಲ್ಲ. ಕೇವಲ ಒಂದೆರಡು ಮಾತು, ಅವಳ ಸಪ್ಪೆ ಮುಖದೊಂದಿಗೆ ಅದನ್ನು ಹೇಳಲು ಪ್ರಯತ್ನಿಸುತ್ತಾರೆ. ಇದೊಂದು ರೀತಿ ಕ್ರಿಕೆಟ್ ಮ್ಯಾಚ್ ನೋಡಲು ಬಿಡದೆ, ಬರೀ ಐದು ನಿಮಷದಲ್ಲಿ ಯಾರೋ ನಿಮಗೆ ಅದರ ಒಟ್ಟಾರೆ ಸಾರಾಂಶ ಹೇಳಿದ ಹಾಗಾಗಿದೆ.
ಬಹುಶಃ ಈ ಕತೆ ಸಮುದಾಯದ ಹೊರಗಿನಿಂದ ಬಂದ ಕಾರಣದಿಂದ ಹೀಗೆ ಮೇಲು ಸ್ತರದಲ್ಲಿ ನಿಂತಿದೆ ಅನ್ನಿಸುತ್ತೆ. ಯಾರೋ ಅನುಭವಿಸಿ ಹೇಳಿದ ಕತೆಯಾಗಿ ಕಾಣುವುದಿಲ್ಲ. ಕಾರಂತರ ಚೋಮನಿಗೂ, ದೇವನೂರು ಮಹಾದೇವರ ಅಮಾಸನಿಗೂ ಇರುವ ವ್ಯತ್ಯಾಸ ಇಲ್ಲಿಯೂ ಸ್ಪಷ್ಟವಾಗುತ್ತದೆ. ನಮ್ಮ ಕತೆಗಳನ್ನು ನಾವೇ ಹೇಳಿಕೊಳ್ಳಬೇಕು ಎನ್ನುವುದು ನಾನು ಈ ಕಾರಣಕ್ಕಾಗಿಯೇ ಆಗಿದೆ. ಏನೇ ಆದರೂ ನೀವು ಒಮ್ಮೆ ನೋಡಬಹುದಾದ ಸಿನಿಮಾ ಇದು. ಆದರೆ ನಿಮಗೆ ತೆರೆದ ಮನಸ್ಸು, ಸಹನೆಯಿಂದ ಸಿನಿಮಾ ನೋಡುವ ಗುಣವಿರಬೇಕು. ಅದಿಲ್ಲವಾದರೆ ಈ ಸಿನಿಮಾ ನೋಡುವ ಸಾಹಸಕ್ಕೆ ಹೋಗಬೇಡಿ. ಈ ಕಥಾವಸ್ತು ಎಲ್ಲ ವಯಸ್ಸಿನವರಿಗೂ ತಲುಪಿಸುವ ಅಗತ್ಯ ಖಂಡಿತಾ ಇದೆ. ಆದರೆ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭರವಸೆ ನೀಡಲಾರೆ.