‘ಖಡಕ್ ಸಿಂಗ್’ ಒಂದು ಫೀಲ್ – ಗುಡ್ ಚಿತ್ರವಾಗಿದ್ದು, ಎಲ್ಲಿಯೂ ಅನಗತ್ಯವಾದ ಡ್ರಾಮಾ ಇಲ್ಲದೆ ಸಾಧ್ಯವಾದಷ್ಟು ನೇರಾನೇರವಾಗಿ ಹೇಳಿಬಿಡುತ್ತದೆ. ಸಿನಿಮಾ ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ. ಅದೇ ವೇಳೆ ಬದುಕಿನಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ‘ಖಡಕ್ ಸಿಂಗ್’ ಹಿಂದಿ ಸಿನಿಮಾ ZEE5ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಖಡಕ್ ಸಿಂಗ್ ತನ್ನ ಮಕ್ಕಳ ಮೇಲೆ ಖಡಕ್ ಆಗಿ ವರ್ತಿಸುವ ಕಟ್ಟುನಿಟ್ಟಾದ ತಂದೆಯ ಕಥೆಯಲ್ಲ.ಆತನಿಗೆ ಈ ಹೆಸರು ಇಟ್ಟಿದ್ದೇ ಮಕ್ಕಳು. ಭ್ರಷ್ಟ ಎಂದು ಮುದ್ರೆಯೊತ್ತಲ್ಪಟ್ಟಾಗ ಅದರಿಂದ ಹೊರ ಬರಲು ಪ್ರಯತ್ನಿಸುತ್ತಿರುವ ನೈತಿಕ ಅಧಿಕಾರಿಯ ಕಥೆಯಲ್ಲ. ಇದು ಮಾನವೀಯತೆಯ ಕಥೆ. ಅಧಿಕಾರದಲ್ಲಿರುವ ಜನರು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ನಿಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಮತ್ತು ಅಗತ್ಯವಿದ್ದರೆ, ನಿಮ್ಮನ್ನು ಬಲೆಗೆ ಬೀಳಿಸಲು ಅಥವಾ ನಿಮ್ಮ ಪ್ರಾಣ ತೆಗೆಯಲು ಏನೆಲ್ಲ ಮಾಡಬಹುದು ಎಂಬ ಕತೆಯನ್ನು ಕಟ್ಟಿಕೊಡುತ್ತದೆ ‘ಖಡಕ್ ಸಿಂಗ್’. ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ‘ಖಡಕ್ ಸಿಂಗ್’ ನೋಡನೋಡುತ್ತಿದ್ದಂತೆ ನಿಜವಾದ ಕತೆ ಎಂದೆನಿಸಿಬಿಡುತ್ತದೆ. ಕತೆಗಳನ್ನು ಹೇಳುತ್ತಾ ಕತೆಯೊಂದಿಗೆ ಕೊಂಡೊಯ್ಯುವುದರಿಂದ ಬೋರ್ ಹೊಡೆಸುವುದಿಲ್ಲ.
ಆರ್ಥಿಕ ಅಪರಾಧಗಳ ಇಲಾಖೆಯ ಅಧಿಕಾರಿ ಎ ಕೆ ಶ್ರೀವಾಸ್ತವ್ ಅಕಾ ಖಡಕ್ ಸಿಂಗ್ (ಪಂಕಜ್ ತ್ರಿಪಾಠಿ)ನೊಂದಿಗೆ ಕಥೆ ಪ್ರಾರಂಭವಾಗುತ್ತದೆ, ಅವರಿಗೆ ಸ್ಮರಣಶಕ್ತಿ ಕ್ಷೀಣಿಸಿದೆ, ಯಾವುದೂ ನೆನಪಿಲ್ಲ ಎಂದು ಹೇಳುತ್ತಿರುವ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವನಿಗೆ ಏನಾಯಿತು ಮತ್ತು ಅವನು ಹೇಗೆ ಇಲ್ಲಿಗೆ ಬಂದನೆಂದು ಅವನಿಗೆ ನೆನಪಿಲ್ಲದಿದ್ದರೂ, ಅವನ ಮಗಳು ಸಾಕ್ಷಿ (ಸಂಜನಾ ಸಂಘಿ), ಗೆಳತಿ ನೈನಾ (ಜಯಾ ಅಹ್ಸನ್), ಸಹೋದ್ಯೋಗಿ ಅರ್ಜುನ್ (ಪರೇಶ್ ಪಹುಜಾ) ಮತ್ತು ಬಾಸ್ ತ್ಯಾಗಿ (ದಿಲೀಪ್ ಶಂಕರ್) ಆತನಿಗೆ ನೆನಪು ಮರುಕಳಿಸಲು ಕತೆಗಳನ್ನು ಹೇಳುತ್ತಾರೆ. ಇಲ್ಲಿ ಯಾರನ್ನು ನಂಬಬೇಕು ಎಂದು ಖಚಿತವಿಲ್ಲದಿದ್ದರೂ ಅವನು ಕತೆಗೆ ಕಿವಿಯಾಗುತ್ತಾನೆ.
ಅಲ್ಲಿಯೇ ಚಿಟ್-ಫಂಡ್ ಹಗರಣವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ, ಹೆಡ್ ನರ್ಸ್ (ಪಾರ್ವತಿ ತಿರುವೋತ್ತು) ಎಕೆಯ ನೆನಪಿನ ಶಕ್ತಿ ಮರಳಿಬರುವಂತೆ ಮಾಡಲು ಸಾಥ್ ಕೊಡುತ್ತಾಳೆ. ಹೀಗಿರುವಾಗ ಖಡಕ್ ಸಿಂಗ್ ತಮ್ಮ ಎಲ್ಲಾ ನೆನಪುಗಳನ್ನು ಮರಳಿ ಪಡೆಯುತ್ತಾರೆಯೇ? ಇಲಾಖೆಯ ಭ್ರಷ್ಟ ಸತ್ಯಗಳನ್ನು ಬಹಿರಂಗಪಡಿಸುತ್ತಾರೆಯೇ? ಅಥವಾ ಹೊಸದಾಗಿ ಜೀವನವನ್ನು ಪ್ರಾರಂಭಿಸಿ, ಹೊಸ ನೆನಪುಗಳೊಂದಿಗೆ ಬದುಕುತ್ತಾರೆಯೇ? ವಿರಾಫ್ ಸರ್ಕಾರಿ, ರಿತೇಶ್ ಷಾ ಮತ್ತು ಅನಿರುದ್ಧ ರಾಯ್ ಚೌಧರಿ ಜತೆಯಾಗಿ ಬರೆದ ಕಥೆಯು ಚಿತ್ರದ ಉದ್ದಕ್ಕೂ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುತ್ತದೆ. ಪ್ರತಿ ಬಾರಿ ಹೊಸ ಪಾತ್ರವು ತಮ್ಮ ದೃಷ್ಟಿಕೋನವನ್ನು ವಿವರಿಸಿದಾಗ ಬಂದು ಹೋಗುವ ಫ್ಲ್ಯಾಷ್‌ಬ್ಯಾಕ್‌ಗಳ ಸರಣಿಗಳಿವೆ. 127 ನಿಮಿಷಗಳಲ್ಲಿ, ಚಿತ್ರ ಕ್ರಿಸ್ಪಿ ಆಗಿದ್ದು ಅನಗತ್ಯವಾಗಿ ಇಲ್ಲಿ ಕತೆಯನ್ನು ಎಳೆದಿಲ್ಲ. ಆದರೆ ಈ ವಿವರಣೆಗಳು ಕೆಲವೊಮ್ಮೆ ಗೊಂದಲವುಂಟು ಮಾಡುತ್ತವೆ.
ಗಂಭೀರ ವಿಷಯಗಳ ನಡುವೆ ಹಿತವಾಗಿದ್ದು ಏನಾದರೂ ಮಾಡಬೇಕು ಅಥವಾ ಪ್ರೇಕ್ಷಕರನ್ನು ನಗಿಸಬೇಕು ಎಂಬುದಕ್ಕೆ ತ್ರಿಪಾಠಿ, ತನ್ನ ಪರಿಚರಣೆಗೆ ನಿಂತಿದ್ದ ನರ್ಸ್ ಜತೆ ಫ್ಲರ್ಟ್ ಮಾಡುವ ದೃಶ್ಯಗಳನ್ನು ಇಲ್ಲಿ ತೋರಿಸಲಾಗಿದೆ. ನೀನು ನನ್ನ ಮಗಳಾ? ಎಂದು ತ್ರಿಪಾಠಿ ತನ್ನ ಮಗಳಲ್ಲೇ ಕೇಳುತ್ತಾನೆ. ತ್ರಿಪಾಠಿ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಭಾಷಣೆ ಚಿತ್ರದ ಹೈಲೈಟ್ ಆಗಿವೆ. ಸಾಕ್ಷಿ ತನ್ನ ತಂದೆಯಲ್ಲಿ ‘ನಮ್ಮ ಅಮ್ಮನನ್ನು ಏಕೆ ಮದುವೆಯಾದಿರಿ?’ ಅಥವಾ ‘ನಮ್ಮ ಅಮ್ಮನೂ ಹೋದ್ರು, ಈಗ ಅಪ್ಪನೂ ಇಲ್ಲ’ ಎಂದು ಹೇಳಿದಾಗ, ಅಪ್ಪ ಮಗಳ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ಈ ದೃಶ್ಯಗಳು ತೋರಿಸುತ್ತವೆ. ಖಡಕ್ ಸಿಂಗ್ ಅಂತಹ ಸಂಬಂಧಗಳು ಹೇಗೆ ಮತ್ತು ಏಕೆ ಎಂದು ಪರಿಶೀಲಿಸುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಾನೆ.
ಸಾಕ್ಷಿ ಇನ್ನೊಬ್ಬ ಮಹಿಳೆಯೊಂದಿಗೆ ತನ್ನ ತಂದೆಯನ್ನು ನೋಡಿ ಓಡಿ ಹೋಗುವ ದೃಶ್ಯದಿಂದ ಕತೆಗೆ ಹೊಸತೊಂದು ಆಯಾಮ ಸಿಕ್ಕಿಬಿಡುತ್ತದೆ. ಇಬ್ಬರ ನಡುವೆ ನಡೆಯುವ ವಾದವು ಚಿತ್ರದ ಅತ್ಯುತ್ತಮ ದೃಶ್ಯಗಳಲ್ಲಿ ಒಂದು. ಪ್ರಬುದ್ಧ ಪಾತ್ರಗಳು ಮತ್ತು ಬರವಣಿಗೆಯಲ್ಲಿನ ಈ ಸೂಕ್ಷ್ಮ ವ್ಯತ್ಯಾಸಗಳು ಖಡಕ್ ಸಿಂಗ್ ಸಿನಿಮಾದ ಪ್ಲಸ್ ಪಾಯಿಂಟ್. ಮತ್ತೊಂದು ದೃಶ್ಯದಲ್ಲಿ, ಸಾಕ್ಷಿ ತನ್ನ ತಂದೆಯ ಗೆಳತಿ ನೈನಾ ಅವರೊಂದಿಗೆ ಆಸ್ಪತ್ರೆಯ ಬೆಂಚಿನ ಮೇಲೆ ಕುಳಿತು ಮನಬಿಚ್ಚಿ ಮಾತನಾಡುತ್ತಾಳೆ. ಕೆಲವೊಂದು ದೃಶ್ಯಗಳಲ್ಲಿ ಮಾತು ಕಡಿಮೆ, ಮೌನವೇ ಹೆಚ್ಚು ಮಾತನಾಡುತ್ತದೆ.
ಸಿನಿಮಾದಲ್ಲಿ ತ್ರಿಪಾಠಿ ಅವರೇ ಖಡಕ್ ಸಿಂಗ್ ಅನ್ನು ಪೂರ್ತಿಯಾಗಿ ಆವರಿಸಿಕೊಂಡಿದ್ದಾರೆ. ಅವರ ನಗು, ನಗುವಿನ ನಂತರ ಬದಲಾಗುವ ಭಾವ, ಆ ನಗುವೇ ಎಲ್ಲವನ್ನೂ ಹೇಳಿಬಿಡುವಂತಿರುತ್ತದೆ. ಅವರ ಮಗಳಾಗಿ ಸಂಘಿಯದ್ದು ಪ್ರಬುದ್ಧ ನಟನೆ. ಆಕೆಯ ಡೈಲಾಗ್ ಡೆಲಿವರಿ ಇನ್ನಷ್ಟು ಪಕ್ವವಾಗಬೇಕು ಎಂದು ಅನಿಸಿದ್ದರೂ, ಇಲ್ಲಿ ಆಕೆಯ ಸ್ವಭಾವಕ್ಕೆ ಇದಿಷ್ಟು ಸಾಕು ಎಂದು ಅನಿಸುತ್ತದೆ. ತ್ರಿಪಾಠಿ ಅವರ ಗೆಳತಿಯಾಗಿ, ಬಾಂಗ್ಲಾದೇಶದ ನಟಿ ಜಯಾ ತೆರೆ ಮೇಲೆ ಮಿಂಚಿದ್ದಾರೆ ಎನ್ನಲಡ್ಡಿಯಿಲ್ಲ. ಈಕೆ ಸಿನಿಮಾದುದ್ದಕ್ಕೂ ನಿರೂಪಣೆಯಲ್ಲಿ ಹೆಚ್ಚು ಅಗತ್ಯವಿರುವ ಸಮತೋಲನವನ್ನು ತರುತ್ತಾರೆ. ನೈನಾ ತನ್ನ ಕಥೆಯನ್ನು ಪ್ರಾರಂಭಿಸಿದಾಗ ಮತ್ತು ಕಥೆಯು ಫ್ಲ್ಯಾಷ್‌ಬ್ಯಾಕ್‌ಗೆ ಚಲಿಸಿದಾಗ, ಆರಂಭಿಕ ಕೆಲವು ನಿಮಿಷಗಳವರೆಗೆ, ನಾವು ಕೇಳುವುದು ಭಾವಪೂರ್ಣ ಸಂಗೀತ, ಪದಗಳಿಲ್ಲ. ಇಲ್ಲಿರುವುದು ಅವರ ಹಾವಭಾವಗಳ ಮಾತ್ರ. ಶಂತನು ಮೊಯಿತ್ರಾ ಅವರ ಸಂಗೀತ ಕೇಳಲು ಹಿತವಾಗಿದೆ. ತ್ರಿಪಾಠಿ ಮತ್ತು ಅಹ್ಸಾನ್ ಹಾಸಿಗೆಯ ಮೇಲೆ ಮಲಗಿ ‘ರಾಜಕೀಯವಾಗಿ ತಪ್ಪಾದ ಲೈಂಗಿಕತೆ’ ಬಗ್ಗೆ ಚರ್ಚಿಸುತ್ತಿರುವುದನ್ನು ತುಂಬಾ ಸುಂದರ ಮತ್ತು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ.
ಇತರ ವಿಷಯಗಳ ನಡುವೆ, ‘ಖಡಕ್ ಸಿಂಗ್’ ಸಿನಿಮಾದಲ್ಲಿ ಈ ದಿನಗಳಲ್ಲಿ ಜನರಲ್ಲಿನ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯಾ ಪ್ರವೃತ್ತಿಗಳ ಪ್ರಚಲಿತ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಒತ್ತಿಹೇಳುತ್ತಾರೆ. ‘ಖಡಕ್ ಸಿಂಗ್’ ಒಂದು ಫೀಲ್-ಗುಡ್ ಚಿತ್ರವಾಗಿದ್ದು, ಎಲ್ಲಿಯೂ ಅನಗತ್ಯವಾದ ಡ್ರಾಮಾ ಇಲ್ಲದೆ ಸಾಧ್ಯವಾದಷ್ಟು ನೇರಾನೇರವಾಗಿ ಹೇಳಿ ಬಿಡುತ್ತದೆ. Zee5 ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸಿನಿಮಾ ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ. ಅದೇ ವೇಳೆ ಬದುಕಿನಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ.