ಅದ್ಧೂರಿಯಾಗಿ ತಯಾರಾಗುತ್ತಿರುವ ‘ಕಣ್ಣಪ್ಪ’ ಪೌರಾಣಿಕ ತೆಲುಗು ಸಿನಿಮಾ ತಂಡಕ್ಕೆ ಕಾಜಲ್‌ ಅಗರ್‌ವಾಲ್‌ ಸೇರ್ಪಡೆಗೊಂಡಿದ್ದಾರೆ. ವಿಷ್ಣು ಮಂಚು ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರವಿದು. ಈ ಹಿಂದೆ ಕಾಜಲ್‌ ಅಗರ್‌ವಾಲ್‌ ಮತ್ತು ವಿಷ್ಣು ಮಂಚು ‘ಮೊಸಗಲ್ಲು’ ತೆಲುಗು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಕಣ್ಣಪ್ಪ’ ಪೌರಾಣಿಕ ತೆಲುಗು ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್‌ ನಟಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಮಾಹಿತಿಯಿಲ್ಲ. ಈ ಹಿಂದೆ ‘ಮೊಸಗಲ್ಲು’ ತೆಲುಗು ಚಿತ್ರದಲ್ಲಿ ವಿಷ್ಣು ಮಂಚು ಮತ್ತು ಕಾಜಲ್‌ ಸಹೋದರ – ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ‘ಕಣ್ಣಪ್ಪ’ ಚಿತ್ರದಲ್ಲಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಜಲ್‌ ನಟಿಸಲಿದ್ದಾರೆ ಎನ್ನಲಾಗಿದೆ. ನಟ ಮೋಹನ್‌ ಬಾಬು ಅವರು ತಮ್ಮ ಪುತ್ರ ವಿಷ್ಣು ಮಂಚು ಅವರಿಗಾಗಿ ನಿರ್ಮಿಸುತ್ತಿರುವ ಬಹುದೊಡ್ಡ ಯೋಜನೆಯಿದು.

‘ಕಣ್ಣಪ್ಪ’ ಸಿನಿಮಾ ಅದ್ಧೂರಿ ತಾರಾಗಣದ ವಿಷಯಕ್ಕೆ ಸಾಕಷ್ಟು ಸುದ್ದಿಯಲ್ಲಿದೆ. ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಚಿತ್ರೀಕರಣ ಮುಕ್ತಾಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್‌ ದಿನಾಂಕದ ಬಗ್ಗೆ ಮಾಹಿತಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here