ಕಲ್ಕಿ, ಕತೆಗಿಂತ ಹೆಚ್ಚಾಗಿ ದೃಶ್ಯಕ್ಕಾಗಿ ನೋಡಬೇಕಾದ ಸಿನಿಮಾ. ಹೀಗಾಗಿ, ಅತ್ಯುತ್ತಮ ವಿಎಫ್‌ಎಕ್ಸ್‌ನಿಂದಾಗಿ ಚಿತ್ರ ಗೆಲ್ಲುತ್ತದೆ. ಚಿತ್ರದಲ್ಲಿ ಬರುವ ಮಹಾಭಾರತದ ದೃಶ್ಯಗಳು ಎಷ್ಟು ಆಕರ್ಷಕವಾಗಿವೆ ಎಂದರೆ ಒಂದು ಒಳ್ಳೆಯ, ಅದ್ಧೂರಿ ಮಹಾಭಾರತ ಕತೆ ಆಧರಿತ ಚಿತ್ರವನ್ನು ನೋಡುವ ಆಸೆ ಮೂಡದೇ ಇರದು. ಕಲ್ಕಿ ತನ್ನ ಅನುಸಂಧಾನದಲ್ಲೂ ಬೇರೆಲ್ಲಾ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಹಾಲಿವುಡ್ ಎನಿಸುತ್ತದೆ.
ಪುರಾಣದ ಉದ್ದಕ್ಕೂ ಸಾವಿಲ್ಲದ ವರ ಬೇಕೆಂದು ಎಲ್ಲರೂ ಬಯಸಿ ಅಮರತ್ವಕ್ಕಾಗಿ ಹಾತೊರೆದರೆ, ಅಶ್ವತ್ಥಾಮನಿಗೆ ಸಾವಿಲ್ಲದಿರುವುದೇ ಶಾಪ. ಅಮರತ್ವವೇ ನರಕ. ಅಂತಹ ಅಶ್ವತ್ಥಾಮ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕಾಯುತ್ತಾ, ಏಕಾಂಗಿಯಾಗಿ ಅಲೆದಾಡುತ್ತಾ ಯುಗಗಳನ್ನು ಕಳೆದಿದ್ದಾನೆ. ಈಗ ಉಳ್ಳವರು ಮತ್ತು ಆಳುವವರ ನಡುವಿನ ಅಂತರ ಅನಂತವಾಗಿ ಬೆಳದಿರುವ ಒಂದು ಡಿಸ್ಟೋಪಿಯನ್ ಸಮಾಜದಲ್ಲಿದ್ದಾನೆ. ಭೂಮಿ ವಿಷವಾಗಿರುವ ಅಂತಹ ಕಾಲದಲ್ಲಿ ಅಶ್ವತ್ಥಾಮ ತನ್ನ ಶಸ್ತ್ರವನ್ನು ಮತ್ತೆ ಕೈಗೆತ್ತಿಕೊಳ್ಳುವ ಸಮಯ ಬಂದಿದೆ. ಕುರುಕ್ಷೇತ್ರ ಯುದ್ಧ ನಡೆದ 6000 ವರ್ಷಗಳ ನಂತರದಲ್ಲಿ ನಡೆಯುವ ಕತೆ ‘ಕಲ್ಕಿ 2898 AD’.
ಭಾರತೀಯ ನಿರ್ದೇಶಕರು ಸೈಫೈ, ಫ್ಯಾಂಟಸಿ ಆ್ಯಕ್ಷನ್, ಸೂಪರ್ ಹೀರೋ ಚಿತ್ರಗಳಿಗೆ ಭಾರತದ ಪುರಾಣಗಳಿಂದ ಎರವಲು ಪಡೆಯುವುದು ಹೊಸ ಸಂಗತಿಯೇನಲ್ಲ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಯಾಗುತ್ತಿರುವ ಹಲವಾರು ಯೂನಿವರ್ಸ್, ಮಲ್ಟಿವರ್ಸ್‌ಗಳಿಗೆ ಪುರಾಣದಲ್ಲಿನ ಘಟನೆಗಳು, ಪಾತ್ರಗಳು ಸ್ಫೂರ್ತಿಯಾಗುತ್ತಿವೆ. ಅಂತಹದೇ ಒಂದು ಪ್ರಯತ್ನ ಕಲ್ಕಿಯಲ್ಲೂ ನಡೆದಿದೆ. ಕುರುಕ್ಷೇತ್ರ ಯುದ್ಧ ಮುಗಿದಿದೆ. ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲಲು ಯತ್ನಿಸಿ ಅಶ್ವತ್ಥಾಮ (ಅಮಿತಾಬ್ ಬಚ್ಚನ್) ಶಾಪಕ್ಕೆ ಒಳಗಾಗುವುದರೊಂದಿಗೆ ಚಿತ್ರ ಆರಂಭವಾಗುತ್ತದೆ.
ಆದರೆ, ಕೆಲವೇ ಕ್ಷಣಗಳಲ್ಲಿ ಯುಗಗಳನ್ನು ದಾಟಿ ವಿನಾಶದ ಅಂಚಿನಲ್ಲಿರುವ ಭವಿಷ್ಯದ ಜಗತ್ತನ್ನು ತೆರೆದಿಡುತ್ತದೆ. ಹಸಿರಿಲ್ಲ, ನೀರಿಲ್ಲ, ಜೀವವಾಯುವಿಲ್ಲ. ಆದರೆ ತಂತ್ರಜ್ಞಾನ ಅತ್ಯಾಧುನಿಕವಾಗಿದೆ. ಇಡೀ ವಿಶ್ವದಲ್ಲಿ ಈಗ ಬದುಕಲು ಸಾಧ್ಯವಿರುವ ಒಂದೇ ನಗರ ಕಾಶಿ. ಇದು ಆ ಡಿಸ್ಟೋಪಿಯನ್ ಜಗತ್ತಿನ ಕೊನೆಯ ನಗರ. ಕಾಶಿಯಲ್ಲಿ ಭದ್ರ ಕೋಟೆಯೊಳಗೆ ಕಾಂಪ್ಸೆಕ್ಸ್ ಎಂಬ ಚಂದದ ಜಗತ್ತನ್ನು ಸೃಷ್ಟಿಸಿಕೊಂಡು, ಹಲವು ಉಳ್ಳವರ ಜೊತೆ ಒಳಗೆ ಸೇರಿಕೊಂಡಿರುವ, ಜಗತ್ತನ್ನು ನಿಯಂತ್ರಿಸುತ್ತಿರುವ ಒಬ್ಬ ಖೂಳ. ಸುಪ್ರೀಂ ಯಾಸ್ಕಿನ್ (ಕಮಲ್ ಹಾಸನ್). ಆತನ ಯಾವುದೋ ಒಂದು ರಹಸ್ಯ ಯೋಜನೆಗೆ ಬೇಕಾದ ಮೂಲದ್ರವ್ಯ ಪೂರೈಸಲು ಪ್ರಯೋಗಶಾಲೆಯಲ್ಲಿ ಬಂಧಿಯಾಗಿರುವ ಗರ್ಭಿಣಿಯರು. ಆತನ ಕೋಟೆಯ ಹೊರಗೆ ದಿನವೂ ಸತ್ತು ಬದುಕುತ್ತಿರುವ ಮನುಷ್ಯರು, ಈ ವ್ಯವಸ್ಥೆಯನ್ನು ಹೇಗಾದರೂ ಒಡೆದು ಉತ್ತಮ ಸಮಾಜ ಕಟ್ಟುವ ಕನಸು ಕಾಣುತ್ತಿರುವ ರೆಬಲ್ಸ್. ಅವರು ರಹಸ್ಯ ಜಾಗದಲ್ಲಿ ಸೃಷ್ಟಿಸಿಕೊಂಡಿರುವ ಜಾಗತಿಕ ಸಮುದಾಯ ಶಂಬಾಲ. ಇದರ ಮುಖ್ಯಸ್ಥೆ ಮರಿಯಮ್ (ಶೋಭನಾ). ಇವಿಷ್ಟು ನಾಗ್ ಅಶ್ವಿನ್ ಕಲ್ಪನೆಯಲ್ಲಿ ಮೂಡಿ ಬಂದಿರುವ ಕಲ್ಕಿ ಸಿನಿಮಾದ ಜಗತ್ತು.
ಚಿತ್ರದ ಮೊದಲಾರ್ಧವನ್ನು ಈ ಜಗತ್ತನ್ನು ನಮ್ಮೆದೆರು ತೆರೆದಿಡುವುದಕ್ಕಾಗಿಯೇ ಬಳಸುವ ನಾಗ್ ಆ ಪ್ರಯತ್ನದಲ್ಲಿ ಹಲವು ಪಾತ್ರಗಳನ್ನೂ ಪರಿಚಯಿಸುತ್ತಾ ಹೋಗುತ್ತಾರೆ. ಕಾಶಿಯಲ್ಲಿರುವ ಬೌಂಟಿ ಹಂಟರ್ ಭೈರವನಿಗೆ (ಪ್ರಭಾಸ್) ಹೇಗಾದರೂ ಸಾಕಷ್ಟು ಪಾಯಿಂಟ್ ಕಲೆ ಹಾಕಿ ಕಾಂಪ್ಸೆಕ್ಲ್ ಒಳಗೆ ಸೇರಿಕೊಳ್ಳುವ ಆಸೆಯಾದರೆ, ಪ್ರಯೋಗಶಾಲೆಯಲ್ಲಿ ಗರ್ಭಿಣಿಯಾಗಿರುವ ಸುಮತಿಗೆ (ದೀಪಿಕಾ ಪಡುಕೋಣೆ) ಹೇಗಾದರೂ ಕಾಂಪ್ಲೆಕ್ಸ್‌ನೊಳಗಿಂದ ತಪ್ಪಿಸಿಕೊಂಡು ತನ್ನ ಮಗುವನ್ನು ಕಾಪಾಡಿಕೊಳ್ಳುವ ತವಕ. ಆಕೆಯನ್ನು ಯಾರು ಕಾಪಾಡುತ್ತಾರೆ? ಹೇಗೆ ಕಾಪಾಡುತ್ತಾರೆ? ಎಂಬುದು ಚಿತ್ರದ ದ್ವಿತೀಯಾರ್ಧ.
ನಿಮಗೆಲ್ಲಾ ಈಗಾಗಲೇ ಕತೆ ಸಾಕಷ್ಟು ಪರಿಚಿತ ಎನಿಸಿರಬಹುದು. ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್, ಚಿಲ್ಡ್ರನ್ ಆಫ್ ಮೆನ್, ಹ್ಯಾಂಡ್‌ಮೇಡ್ಸ್ ಟೇಲ್ ಹೀಗೆ ಹಲವಾರು ಚಿತ್ರಗಳು ಕಣ್ಮುಂದೆ ಹಾದು ಹೋಗಿರಬಹುದು. ಕತೆ ಮಾತ್ರವಲ್ಲ ದೃಶ್ಯ ಜಗತ್ತನ್ನು ಸೃಷ್ಟಿಸುವಾಗಲೂ ನಾಗ್ ಅಶ್ವಿನ್ ಹಲವಾರು ಹಾಲಿವುಡ್ ಚಿತ್ರಗಳಿಂದ ಸ್ಪೂರ್ತಿ ಪಡೆದಿದ್ದಾರೆಂಬುದು ಎದ್ದು ಕಾಣುತ್ತದೆ. ದೃಶ್ಯಗಳಲ್ಲಿ ನಿಮಗೆ ಟರ್ಮಿನೇಟರ್, ಡ್ಯೂನ್‌ನಿಂದ ಹಿಡಿದು ಗೇಮ್ ಆಫ್ ಥ್ರೋನ್ಸ್‌ವರೆಗಿನ ಹೋಲಿಕೆಗಳು ಎದ್ದು ಕಾಣುತ್ತವೆ. ಆದರೆ, ಈ ಎಲ್ಲವನ್ನೂ ನಾಗ್ ಅಶ್ವಿನ್ ಪುರಾಣದೊಂದಿಗೆ ಜೋಡಿಸಿ ಕತೆ ಹೆಣೆಯುವ ಸಾಹಸ ಮಾಡಿರುವುದು ಶ್ಲಾಘನೀಯ ಮತ್ತು ಅವರು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.
ಅಂದರೆ, ದ್ವಾಪರ ಯುಗದ ದೈತ್ಯ ವೀರ ಅಶ್ವತ್ಥಾಮ, ಅತ್ಯಾಧುನಿಕ ಆಯುಧಗಳ ಜಗತ್ತಿನಲ್ಲಿ ಹೋರಾಡುವುದು ಎಲ್ಲಿಯೂ ವಿಚಿತ್ರವೆಂದಾಗಲೀ, ಗುಂಪಿನಿಂದ ಹೊರಗೆ ಎಂದಾಗಲೀ ಎನಿಸುವುದಿಲ್ಲ. ಹಾಗೇ ನೋಡಿದರೆ, ಇಡೀ ಸಿನಿಮಾ ಭವಿಷ್ಯದ ಜಗತ್ತಿನಲ್ಲಿ ನಡೆದರೂ, ಅಶ್ವತ್ಥಾಮನ ಇರುವು ಮತ್ತು ನಿಲುವೇ ಇಡೀ ಸಿನಿಮಾದ ಅಂತ:ಶಕ್ತಿಯಾಗಿ ಕಾಪಾಡುತ್ತದೆ. ಚಿತ್ರದ ಮೊದಲಾರ್ಧ ಮನ ಗೆಲ್ಲುವಲ್ಲಿ ಸೋಲುತ್ತದೆ. ವಿಪರ್ಯಾಸವೆಂದರೆ ಅದು ನಾಯಕ ಪ್ರಭಾಸ್ ಪಾತ್ರ ಮತ್ತು ಆತನ ಇರುವಿಕೆಯಿಂದಾಗಿಯೇ ಸೋಲುತ್ತದೆ. ನಿರ್ದೇಶಕರು ತನ್ನ ಸ್ಟಾರ್ ನಟನ ಅಭಿಮಾನಿಗಳಿಗಾಗಿಯೇ ಇಲ್ಲಿ ಕತೆ ಹೆಣೆದಿದ್ದಾರೆ. ಯಾವುದೇ ಸಿದ್ಧಾಂತದ ಹಂಗಿಲ್ಲದ ಟಪೋರಿ ರೀತಿಯ ಪ್ರಭಾಸ್ ಪಾತ್ರದ ಮೂಲಕ ಚಿತ್ರದಲ್ಲಿ ಹಾಸ್ಯ ತುಂಬಲು ಯತ್ನಿಸಿದ್ದಾರೆ. ಮತ್ತು ಅದರಲ್ಲಿ ಸೋತಿದ್ದಾರೆ.
ಭೈರವ ಮತ್ತು ಆತನ AI ವಾಹನ ಬುಜ್ಜಿಯ ನಡುವಿನ ಹಾಸ್ಯ ದೃಶ್ಯಗಳು ಕೆಲವೆಡೆ ಕೆಲಸ ಮಾಡಿದರೂ, ಬ್ರಹ್ಮಾನಂದಂ, ಮತ್ತು ತೆಲುಗಿನ ಜನಪ್ರಿಯ ನಿರ್ದೇಶಕರ ಕ್ಯಾಮಿಯೋಗಳು, ತೆಲುಗು ಚಿತ್ರಗಳ ಕೆಲವು ರೆಫರೆನ್ಸ್‌ಗಳು ಚಿತ್ರಕ್ಕೆ ಯಾವುದೇ ಕೊಡುಗೆ ನೀಡುವುದಿಲ್ಲ. ಆದರೆ, ಇದು ತೆಲುಗು ಸಿನಿಮಾ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಲೂಬಹುದು, ಆದರೆ, ಇವುಗಳ ಜೊತೆಗೆ ಪ್ರಭಾಸ್‌ನ ದೀರ್ಘ ಫೈಟ್‌ಗಳು ಸೇರಿಕೊಂಡು ಚಿತ್ರದ ಮೊದಲಾರ್ಧ ಅನಗತ್ಯವಾಗಿ ಉದ್ದವಾಗಿಬಿಡುತ್ತದೆ. ಚಿತ್ರದ ದ್ವಿತೀಯಾರ್ಧ ಈ ಕೊರತೆಗಳನ್ನು ನೀಗಿಸುವಲ್ಲಿ ಯಶಸ್ವಿಯಾಗುತ್ತದೆ. ಇದರ ದೊಡ್ಡ ಪಾಲು ಅಶ್ವತ್ಥಾಮ ಪಾತ್ರಕ್ಕೆ ಸಲ್ಲುತ್ತದೆ. ಇಡೀ ಚಿತ್ರದಲ್ಲಿ ಗಟ್ಟಿಯಾದ, ಸಂಕೀರ್ಣವಾದ ಮತ್ತು ಪರಿಪೂರ್ಣವಾದ ಪಾತ್ರವೆಂದರೆ ಅಶ್ವತ್ಥಾಮ ಮಾತ್ರ. ಈ ಪಾತ್ರದಲ್ಲಿ ಅಮಿತಾಬ್ ನಟನೆಯಂತೂ ಅತ್ಯದ್ಭುತವಾಗಿದೆ. ನಾಯಕ ಪ್ರಭಾಸ್ ಅನ್ನು ಮೀರಿ ಅಮಿತಾಬ್ ಬೆಳೆಯುತ್ತಾರೆ. ತನ್ನ ದೈತ್ಯ ದೇಹದಲ್ಲಿ ಅಶ್ವತ್ಥಾಮ ನಡೆಸುವ ಹೋರಾಟಗಳು, ಭೈರವನ ಜೊತೆಗಿನ ಕಾದಾಟ, ಬಹುತೇಕ ದೃಶ್ಯ ವೈಭವವನ್ನೇ ಅವಲಂಬಿಸಿರುವ ಈ ಚಿತ್ರದ ಹೈಲೈಟ್. ರೆಬಲ್ ಯೋಧಳ ಪಾತ್ರದಲ್ಲಿ ಬಂದು ಹೋಗುವ ಆ್ಯನಾ ಬೆನ್ ಗಮನ ಸೆಳೆಯುತ್ತಾರೆ.
ಕಮಲ್ ಹಾಸನ್‌ಗೆ ಈ ಚಿತ್ರದಲ್ಲಿ ಸ್ಕ್ರೀನ್ ಸ್ಪೇಸ್ ಕಡಿಮೆ. ಆದರೆ, ಸಿಕ್ಕಿರುವ ಆ ಕೆಲವು ನಿಮಿಷಗಳ ಅವಕಾಶದಲ್ಲೂ ಕಮಲ್ ತಮ್ಮ ರೂಪ, ದ್ವನಿ ಮತ್ತು ಕನಿಷ್ಟ ಭಾವಾಭಿವ್ಯಕ್ತಿಯ ಮೂಲಕವೇ ಮಿಂಚುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಕಮಲ್ ಪಾತ್ರದಲ್ಲಾಗುವ ಬದಲಾವಣೆ ಮುಂದಿನ ಭಾಗದಲ್ಲಿ ಅವರ ಪಾತ್ರ ಪಡೆದುಕೊಳ್ಳಲಿರುವ ಪ್ರಾಮುಖ್ಯತೆಯ ಒಂದು ಝಲಕ್ ನೀಡುತ್ತದೆ. ದೀಪಿಕಾಳ ಸುಮತಿ ಪಾತ್ರ ಚಿತ್ರದುದ್ದಕ್ಕೂ ಅಬಲ ನಾರಿಯಾದ್ದರಿಂದ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೂ, ತಮಗೆ ದೊರೆತಿರುವ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶಾಶ್ವತ್ ಚಟರ್ಜಿಗೆ ಕಮಾಂಡೋ ಪಾತ್ರ ಅಷ್ಟು ಹೊಂದಿಕೆಯಾಗಿಲ್ಲ. ಇವಿಷ್ಟು ಚಿತ್ರದ ಪ್ರಮುಖ ಪಾತ್ರಗಳಾದರೂ, ಸಣ್ಣಪುಟ್ಟ ಅತಿಥಿ ಪಾತ್ರಗಳಲ್ಲಿ, ಬಂದು ಹೋಗುವ ಜನಪ್ರಿಯ ನಟ, ನಟಿಯರಂತೂ ಲೆಕ್ಕವಿಲ್ಲದಷ್ಟಿದ್ದಾರೆ. ಭಾರತದ ಎಲ್ಲಾ ಪ್ರಮುಖ ಭಾಷೆಯ ನಟರನ್ನೂ ಕಲ್ಕಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನಾಗ್ ಇದನ್ನು ನಿಜ ಅರ್ಥದಲ್ಲಿ ಪ್ಯಾನ್ ಇಂಡಿಯಾವಾಗಿಸುವ ಕೆಲಸ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಎಲ್ಲಾ ಭಾಷೆಗಳ ಸ್ಟಾರ್‌ಗಳು, ನಟರೂ, ನಿರ್ದೇಶಕರೂ ಇದ್ದಾರೆ. ಕನ್ನಡವೊಂದನ್ನು ಹೊರತುಪಡಿಸಿ.
ಕಲ್ಕಿ, ಕತೆಗಿಂತ ಹೆಚ್ಚಾಗಿ ದೃಶ್ಯಕ್ಕಾಗಿ ನೋಡಬೇಕಾದ ಸಿನಿಮಾ. ಹೀಗಾಗಿ, ಅತ್ಯುತ್ತಮ ವಿಎಫ್‌ಎಕ್ಸ್‌ನಿಂದಾಗಿ ಚಿತ್ರ ಗೆಲ್ಲುತ್ತದೆ. ಚಿತ್ರದಲ್ಲಿ ಬರುವ ಮಹಾಭಾರತದ ದೃಶ್ಯಗಳು ಎಷ್ಟು ಆಕರ್ಷಕವಾಗಿವೆ ಎಂದರೆ ಒಂದು ಒಳ್ಳೆಯ, ಅದ್ಧೂರಿ ಮಹಾಭಾರತ ಕತೆ ಆಧರಿತ ಚಿತ್ರವನ್ನು ನೋಡುವ ಆಸೆ ಮೂಡದೇ ಇರದು. ಕಲ್ಕಿ ತನ್ನ ಅನುಸಂಧಾನದಲ್ಲೂ ಬೇರೆಲ್ಲಾ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಹಾಲಿವುಡ್ ಎನಿಸುತ್ತದೆ. ಉದಾಹರಣೆಗೆ, ಹಿಂದೂ ಪುರಾಣವನ್ನು ಆಧರಿಸಿದ್ದರೂ ಚಿತ್ರದೊಳಗಿರುವ ಶಂಬಾಲ ಎಂಬ ಮಾದರಿ ಜಗತ್ತಿನಲ್ಲಿ ಎಲ್ಲಾ ದೇಶ, ಭಾಷೆ, ಧರ್ಮ, ಜನಾಂಗದ ಜನರಿದ್ದಾರೆ. ಹಾಲಿವುಡ್ ಚಿತ್ರಗಳು ಹೇಗೆ ಇಡೀ ವಿಶ್ವದ ಸಮಸ್ಯೆಯನ್ನು, ನ್ಯೂಯಾರ್ಕ್ ಕೇಂದ್ರಿತವಾಗಿಸಿಕೊಂಡು ಅಲ್ಲಿ ಪರಿಹಾರ ಕಂಡು ಕೊಳ್ಳುತ್ತವೆಯೇ ಹಾಗೆಯೇ ಈ ಭಾರತೀಯ ಚಿತ್ರ ಕಾಶಿಯನ್ನು ಕೇಂದ್ರವಾಗಿಸಿಕೊಂಡು ಭಾರತೀಯ ಪುರಾಣದ ನೆಲೆಗಟ್ಟಿನ ಮೇಲೆ ಜಾಗತಿಕ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತದೆ. ವರ್ಣ ಸಂಯೋಜನೆ, ವಸ್ತ್ರವಿನ್ಯಾಸ ಅದು ಕಟ್ಟಿಕೊಡುವ ಜಗತ್ತು ಹಲವು ಸಿನಿಮಾಗಳಿಂದ ಎರವಲು ಪಡೆದಂತೆ ಅನಿಸಿದರೂ, ಒಂದು ಹಂತದ ನಂತರ ಇವೆಲ್ಲವೂ ಮರೆತು ಚಿತ್ರದಲ್ಲಿ ಮುಳುಗಿ ಹೋಗುವುದು ಸಾಧ್ಯವಾಗುತ್ತದೆ ಮತ್ತು ಎರಡನೇ ಭಾಗದ ಬಗ್ಗೆ ಕುತೂಹಲ ಮೂಡಿಸುತ್ತದೆ.