ಚಿತ್ರ ಪ್ರಸ್ತುತ ಜಗತ್ತಿನಲ್ಲೇ ನಡೆದರೂ ಕೂಡ, ನಿರ್ದೇಶಕರು ಮಾತ್ರ ದಶಕಗಳ ಹಿಂದಿನ ಕಾಲಘಟ್ಟದಲ್ಲೇ ಸಿಕ್ಕಿಕೊಂಡು ಬಿಟ್ಟಿದ್ದಾರೆ. ಚಿತ್ರದ ಕತೆ, ಪರಿಕಲ್ಪನೆ ಮತ್ತು ನಿರ್ವಹಣೆ ಎಲ್ಲವೂ ತೀರಾ ಬಾಲಿಷವಾಗಿದೆ. ಕಮಲ್‌ಹಾಸನ್‌ನಂತಹ ನಟನೂ ಈ ಸಿನಿಮಾವನ್ನು ಮೇಲಕ್ಕೆ ಎತ್ತಲಾರದೆ ಸೋತು ಹೋಗುತ್ತಾರೆ. ಸಿದ್ಧಾರ್ಥ್‌ ಸೇರಿದಂತೆ ಸಾಕಷ್ಟು ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ. ಆದರೆ ಪಾತ್ರ ಪೋಷಣೆಯ ಕೊರತೆಯಿಂದಾಗಿ ಎಲ್ಲವೂ ದಂಡವಾಗಿದೆ. ತಾಂತ್ರಿಕ ವಿಭಾಗದಲ್ಲೂ ಚಿತ್ರದ್ದು ಸಾಧಾರಣ ಸಾಧನೆಯಷ್ಟೇ.

ಜನಪ್ರಿಯ ಚಿತ್ರಗಳ ಎರಡನೇ ಭಾಗಗಳಿಗೆ ನಿರೀಕ್ಷೆಯ ಭಾರ ತಪ್ಪಿದ್ದಲ್ಲ. ಮೊದಲ ಭಾಗದ ಯಶಸ್ಸಿನಿಂದ ಹುಟ್ಟಿಕೊಂಡ ಎಷ್ಟೋ ಚಿತ್ರಗಳು ಈ ಭಾರಕ್ಕೆ ಕುಸಿಯುತ್ತವೆ. ಆದರೆ, ‘ಇಂಡಿಯನ್ 2’ ಚಿತ್ರಕ್ಕೆ ಇಂತಹ ನಿರೀಕ್ಷೆಯಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ. ಏಕೆಂದರೆ, ಈ ಚಿತ್ರಕ್ಕೆ ಕುಸಿಯಲು ಯಾವುದೇ ಬಾಹ್ಯ ಒತ್ತಡದ ಅಗತ್ಯವೇ ಇಲ್ಲ. ಎಲ್ಲವೂ ಅತಿರೇಕದ ಮಟ್ಟದಲ್ಲಿರುವ ಚಿತ್ರ ತಾನೇ ತಾನಾಗಿ ಪಾತಾಳಕ್ಕೆ ಕುಸಿಯುತ್ತದೆ.

ಸುಮಾರು ಮೂರು ದಶಕಗಳ ಹಿಂದೆ ‘ಇಂಡಿಯನ್’ ಚಿತ್ರ ಹೊರಬಂದಾಗ ಮಾಜಿ ಸೈನಿಕ ಸೇನಾಪತಿಯ ಭ್ರಷ್ಟಾಚಾರದ ವಿರುದ್ಧದ ಹೋರಾಟ ಜನರನ್ನು ಭಾವನಾತ್ಮಕ ಮಟ್ಟದಲ್ಲಿ ತಟ್ಟಿತ್ತು, ಯೋಚಿಸುವಂತೆ ಮಾಡಿತ್ತು. ತನ್ನ ಮಗನನ್ನೂ ಕ್ಷಮಿಸದ, ಆತನ ಬಲಿಯನ್ನೂ ಪಡೆದ ನಾಯಕನ ದೃಢ ನಿಷ್ಠೆ, ತುಮುಲ, ನೋವು ಪ್ರೇಕ್ಷಕರನ್ನೂ ಕಾಡಿತ್ತು. ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವೀ ಚಿತ್ರಗಳ ಸಾಲಿಗೆ ಸೇರಿ ಹೋದ ‘ಇಂಡಿಯನ್’ ಈಗಲೂ ಹಲವು ಪ್ರೇಕ್ಷಕರ ಮನಸ್ಸಲ್ಲಿ ಹಸಿರಾಗಿ ಉಳಿದಿದೆ. ಈ ಸಂಬಂಧವನ್ನೇ ಬಳಸಿಕೊಂಡು 28 ವರ್ಷಗಳ ನಂತರ ‘ಇಂಡಿಯನ್’ ಚಿತ್ರದ ಟ್ರಯಾಲಜಿಯನ್ನು ಯೋಜಿಸಿರುವ ನಿರ್ದೇಶಕ ಶಂಕರ್ ತಮ್ಮ ಹೊಸ ಪ್ರಯತ್ನದಲ್ಲಿ ಧಾರುಣವಾಗಿ ಸೋತಿದ್ದಾರೆ.

ಮೊದಲ ಭಾಗದಂತೆ ಈ ಚಿತ್ರದಲ್ಲೂ ಶಂಕರ್ ಭ್ರಷ್ಟಾಚಾರದ ವಿರುದ್ಧವೇ ಮಾತನಾಡುತ್ತಾರೆ. ಚಿತ್ರದ ಆರಂಭದಲ್ಲಿ ಧೂಮಪಾನ ವಿರೋಧಿ ಜಾಹೀರಾತಿನ ನಂತರ ‘corruption causes cancer to the nation’, ‘corruption kills’ ಎಂಬ ವಾಕ್ಯಗಳು ತೆರೆಯ ಮೇಲೆ ಮೂಡಿದಾಗ, ಪ್ರೇಕ್ಷಕರು ಉತ್ಸಾಹದಿಂದ ‘ಇಂಡಿಯನ್’ ಅನ್ನು ಮತ್ತೆ ಸ್ವಾಗತಿಸಲು ಸಿದ್ಧವಾಗುವುದು ನಿಜ. ಆದರೆ, ಚಿತ್ರ ಪ್ರಸ್ತುತ ಜಗತ್ತಿನಲ್ಲೇ ನಡೆದರೂ ಕೂಡ, ನಿರ್ದೇಶಕರು ಮಾತ್ರ ದಶಕಗಳ ಹಿಂದಿನ ಕಾಲಘಟ್ಟದಲ್ಲೇ ಸಿಕ್ಕಿಕೊಂಡು ಬಿಟ್ಟಿದ್ದಾರೆ. ಚಿತ್ರದ ಕತೆ, ಪರಿಕಲ್ಪನೆ ಮತ್ತು ನಿರ್ವಹಣೆ ಎಲ್ಲವೂ ತೀರಾ ಬಾಲಿಷವಾಗಿದೆ. ದೇಶದಲ್ಲಿನ ಭ್ರಷ್ಟಾಚಾರದ ಸಮಸ್ಯೆಯನ್ನು ತೋರಿಸಲು ಒಂದರ ಹಿಂದೆ ಒಂದರಂತೆ, ಹಲವು ಘಟನೆಗಳನ್ನು ಪೋಣಿಸಲಾಗಿದೆ. ಎಲ್ಲವನ್ನೂ ಪ್ರಾತಿನಿಧಿಕವಾಗಿ ತೋರಿಸುವ ಭರದಲ್ಲಿ ಶಿಕ್ಷಣ, ಆರೋಗ್ಯ, ಹಣಕಾಸು, ಆಡಳಿತ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರದ ಒಂದೊಂದು ಘಟನೆಗಳನ್ನು ತೆಗೆದುಕೊಂಡು ತೀರಾ ಕೃತಿಮವಾದ ರೀತಿಯಲ್ಲಿ ತೆರೆಯ ಮೇಲೆ ಮೂಡಿಸಲಾಗಿದೆ. ಇವುಗಳು ಪ್ರೇಕ್ಷಕರ ಭಾವನೆಗಳನ್ನು ಯಾವ ರೀತಿಯಲ್ಲೂ ತಟ್ಟದ ಕಾರಣ Instagramನಲ್ಲಿ ಒಂದರ ಮೇಲೊಂದು ರೀಲ್ ನೋಡಿದಂತೆ ಅನಿಸಿಬಿಡುತ್ತದೆ. ತೆರೆಯ ಮೇಲೆ ಸಂಭವಿಸುವ ಅನ್ಯಾಯದ ಸಾವುಗಳೆಲ್ಲಾ ಪ್ರೇಕ್ಷಕರ ರಕ್ತ ಕುದಿಸುವ ಬದಲು, ನಾಟಕದಂತೆ ಭಾಸವಾಗುವುದು ಚಿತ್ರದ ದೊಡ್ಡ ಸೋಲು.

ಚಿತ್ರದಲ್ಲಿ ಎರಡು ರೀತಿಯ ವಿಲನ್‌ಗಳಿದ್ದಾರೆ. ಇರುವ ದುಡ್ಡನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡುತ್ತಾ ಐಷಾರಾಮಿ ಜೀವನ ನಡೆಸುವ ದೊಡ್ಡ ಉದ್ಯಮಪತಿ ವಿಲನ್‌ಗಳು ಮತ್ತು ಲಂಚ ಪಡೆದು ಅದನ್ನು ಗುಟ್ಟಾಗಿ ಎತ್ತಿಟ್ಟು ಸಾಧಾರಣ ಜೀವನ ನಡೆಸುವ ಭ್ರಷ್ಟಾಚಾರಿಗಳು. ನಿರ್ದೇಶಕರು ಒಂದೇ ಒಂದು ಪಾತ್ರವನ್ನೂ, ವ್ಯಕ್ತಿತ್ವವನ್ನು ಸರಿಯಾಗಿ ಅಭಿವೃದ್ದಿಪಡಿಸುವ ಪ್ರಯತ್ನವನ್ನೇ ಮಾಡಿಲ್ಲ. ವಿಲನ್‌ಗಳು, ರಾಶಿ ರಾಶಿ ಚಿನ್ನ ಹೇರಿಕೊಂಡು, ಚಿನ್ನದ ಅರಮನೆಯಲ್ಲಿರುತ್ತಾರೆ ಅಥವಾ ಹೆಣ್ಣುಗಳ ಜೊತೆ ಮಜಾ ಮಾಡುತ್ತಿರುತ್ತಾರೆ ಎಂಬ 80-90ರ ದಶಕದ ಕಲ್ಪನೆಯಲ್ಲೇ ಇನ್ನೂ ನಿರ್ದೇಶಕರಿದ್ದಾರೆ. ನಿರ್ದೇಶಕರು ಆಧುನಿಕ ಸೂಕ್ಷ್ಮತೆಗಳನ್ನು ತೋರಿಸುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆಯೆಂದರೆ – ಗಂಡು ಹೆಣ್ಣಿನಂತಾಡುವ ಲಿಂಗ ಬದಲಾವಣೆಯಂತಹ ಸಂಗತಿಗಳು ಕಳೆದ ಶತಮಾನದಲ್ಲಿ ಹಾಸ್ಯವಾಗಿ ತೇರ್ಗಡೆ ಹೊಂದುತ್ತಿದ್ದವೇನೋ. ಆದರೆ ಈಗ ಇವೆಲ್ಲಾ ಅಸೂಕ್ಷ್ಮ ತಲೆತಗ್ಗುವ ಸಂಗತಿಯೆನಿಸುತ್ತವೆ. ಜೊತೆಗೆ, ಚಿತ್ರದ ಕತೆ, ತಿರುವುಗಳು ಯಾವುದೂ ಊಹಾತೀತವಲ್ಲ, ಆದರೆ, ಅಸಂಬದ್ದ ಮತ್ತು ಅತಾರ್ಕಿಕ.

ಚಿತ್ರದಲ್ಲಿ ನಿರ್ದೇಶಕರು ತಾವು ಯಾವುದೋ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುತ್ತಿದ್ದೇನೆ ಎಂಬ ಭಾವನೆಯಲ್ಲಿ ನಾಯಕನಿಗೆ ವರ್ಮ ಕಲೈ ಎಂಬ ಹೊಸ ಹೋರಾಟ ತಂತ್ರವನ್ನು ಆಯುಧವಾಗಿ ಕೊಟ್ಟಿದ್ದಾರೆ. ಆದರೆ, ಇದೆಷ್ಟು ಹಾಸ್ಯಾಸ್ಪದ ಮತ್ತು ಸಮಸ್ಯಾತ್ಮಕವಾಗಿದೆ ಎಂದರೆ ಪ್ರತಿ ಖಳನಟರ ಸಾವಿನ ಜೊತೆ ನಿಮಗೆ ನಾಯಕನ ಬಗ್ಗೆಯೇ ಬೇಸರ ಮೂಡುತ್ತದೆ. ಅನಗತ್ಯ ಹಾಡುಗಳು, ನೃತ್ಯಗಳು, ಭರ್ಜರಿ ಸೆಟ್‌ಗಳು, ಆಕಳಿಕೆ ತರಿಸುವ ಉದ್ದನೆಯ ಛೇಸಿಂಗ್, ಹೊಸತೇನೂ ಇಲ್ಲದ ಹೊಡೆದಾಟದ ದೃಶ್ಯಗಳು, ಸಣ್ಣ ನಗುವನ್ನೂ ಮೂಡಿಸದ ಹಾಸ್ಯದ ಹೆಸರಿನ ಅಪಹಾಸ್ಯಗಳು, ಕೃತಕ ಮೇಕಪ್‌ಗಳು ಹೀಗೆ ಸಿನಿಮಾದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ಹೋಗಲಿ ಚಿತ್ರದ ಸಿನಿಮ್ಯಾಟಿಕ್ ಸಮಸ್ಯೆಗಳನ್ನು ಬಿಟ್ಟು ಬಿಡೋಣ. ಚಿತ್ರದ ಮೂಲ ಉದ್ದೇಶವಾದರೋ ಸರಿಯಾಗಿದೆಯೇ ಎಂದರೆ, ಇಲ್ಲೂ ನಿರ್ದೇಶಕರು ಎಡವುತ್ತಾರೆ. ಸರ್ಕಾರದ ಉಚಿತ ಯೋಜನೆಗಳನ್ನು, ಲಂಚದೊಂದಿಗೆ ಸಮೀಕರಿಸುತ್ತಾರೆ. ಕೋಟಿಗಳ ಲೆಕ್ಕದಲ್ಲಿ ದುಡ್ಡು ಮಾಡುವ ಭ್ರಷ್ಟಾಚಾರಿಯನ್ನೂ, ತೂಕ ಹೆಚ್ಚಿಸಲು ಮೀನಿನಲ್ಲಿ ಕಲ್ಲು ತುಂಬುವ ಮೀನು ಮಾರುವ ಮಹಿಳೆಯನ್ನೂ ಒಂದೇ ತಕ್ಕಡಿಯಲ್ಲಿಟ್ಟು, ಸಮಾನತೆ ಮೆರೆಯುತ್ತಾರೆ. ಶ್ರೀಮಂತ ಭ್ರಷ್ಟಾಚಾರಿಗಳೆಲ್ಲಾ ಒಂದೇ ದಿನದಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂಬುದನ್ನು ತೋರಿಸುವ ನಿರ್ದೇಶಕರಿಗೆ ನಮ್ಮಲ್ಲಿ ನ್ಯಾಯ ಬಡವರಿಗೂ, ಶ್ರೀಮಂತರಿಗೂ ಸಮವಾಗಿ ದೊರೆಯವುದಿಲ್ಲ ಎಂಬುದರ ಅರಿವಿರಬೇಕಲ್ಲವೇ? ಚಿತ್ರದಲ್ಲಿ ಎಲ್ಲವೂ ಅತಿರೇಕದ ಮಟ್ಟದಲ್ಲಿದೆ. ಅಪೆಂಡಿಕ್ಸ್‌ ಎಲ್ಲಿದೆ ಎಂಬುದೇ ಗೊತ್ತಿಲ್ಲದ ಡಾಕ್ಚರ್‌, ಇನ್ನೂ ಸಮಯಾವಧಿ ಇದ್ದರೂ ಸಾಲ ತೀರಿಸದ ವಿದ್ಯಾರ್ಥಿಯನ್ನು ಹೊಡೆದು, ಒದ್ದು ಅವಮಾನಿಸುವ ಬ್ಯಾಂಕ್‌ ಕಡೆಯ ಮಂದಿ, ಮೈದುನನಿಗೆ ತನ್ನೆಲ್ಲಾ ಭ್ರಷ್ಚಾಚಾರದ ಬಗ್ಗೆ ಸಾಕ್ಷಿ ಸಮೇತ ವಿವರಿಸಿ ಹೇಳುವ ಗುಮಾಸ್ತ, ಖಳನಟರು ಸಾಯುವ ರೀತಿ ಎಲ್ಲವೂ ತೀರಾ ಬಾಲಿಶವಾಗಿದೆ.

ಪ್ರಾಯಶಃ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಅರ್ಥಪೂರ್ಣವೆನಿಸುವ ಒಂದೇ ವಿಷಯ ಭ್ರಷ್ಟಾಚಾರದಲ್ಲಿ ತೊಡಗಿರುವ ತಮ್ಮ ಹತ್ತಿರದವರನ್ನು ಎದುರಿಸಿದಾಗ ಅದು ಸಂಬಂಧಗಳ ಮೇಲೆ, ಬದುಕಿನ ಮೇಲೆ ಬೀರುವ ಪರಿಣಾಮಗಳ ಕುರಿತಾದದ್ದು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮತ್ತೊಂದು ಮುಖವನ್ನು, ಅದರ ನಂತರದ ಪರಿಣಾಮಗಳನ್ನು ತೋರಿಸುವ ಈ ಪ್ರಯತ್ನ ಉತ್ತಮವಾಗಿದ್ದರೂ, ಅದನ್ನು ಅತಿಯಾಗಿ ನಾಟಕೀಯವಾಗಿಸಿರುವುದರಿಂದ ಅದರ ಗಂಭೀರತೆ ಮತ್ತು ಸಹಜತೆ ಕಳೆದುಹೋಗುತ್ತದೆ.

ಕಮಲ್‌ಹಾಸನ್‌ನಂತಹ ನಟನೂ ಈ ಸಿನಿಮಾವನ್ನು ಮೇಲಕ್ಕೆ ಎತ್ತಲಾರದೆ ಸೋತು ಹೋಗುತ್ತಾರೆ. ಅವರ ನಿಜವಾದ ಮುಖವನ್ನು ಮರೆ ಮಾಡುವ ಮೇಕಪ್‌ನಿಂದಾಗಿ ಕಮಲ್‌ಹಾಸನ್‌ ದೊಡ್ಡ ಶಕ್ತಿಯಾಗಿರುವ ಅವರ ಭಾವಾಭಿನಯ ಎಲ್ಲಿಯೂ ಕಾಣುವುದಿಲ್ಲ. ಇನ್ನೊಬ್ಬ ಉತ್ತಮ ನಟ ಸಿದ್ಧಾರ್ಥ್‌ ಕೂಡ ಒಂದೆರಡು ಕಡೆ ಬಿಟ್ಟರೆ, ಉಳಿದೆಲ್ಲಾ ಕಡೆ ಕೀ ಕೊಟ್ಟಂತೆ ನಟಿಸಿ ಮುಗಿಸಿದ್ದಾರೆ. ಇನ್ನೂ ಸಾಕಷ್ಟು ಪ್ರತಿಭಾವಂತ ಕಲಾವಿದರ ದೊಡ್ಡ ದಂಡೇ ಇದ್ದರೂ, ಪಾತ್ರ ಪೋಷಣೆಯ ಕೊರತೆಯಿಂದಾಗಿ ಎಲ್ಲವೂ ದಂಡವಾಗಿದೆ. ತಾಂತ್ರಿಕ ವಿಭಾಗದಲ್ಲೂ ಚಿತ್ರದ್ದು, ಸಾಧಾರಣ ಸಾಧನೆಯಷ್ಟೇ.

ಹಲವರಿಗೆ ಚಿತ್ರದ ಕೊನೆಯಲ್ಲಿ ತೋರಿಸುವ, ಮುಂದಿನ ವರ್ಷ ಬಿಡುಗಡೆಯಾಗಲಿರುವ ‘ಇಂಡಿಯನ್ 3’ ಚಿತ್ರದ 3 ನಿಮಿಷದ ಟ್ರೇಲರ್‌ ಇಡೀ ಮೂರು ಗಂಟೆಯ ಚಿತ್ರಕ್ಕಿಂತ ಹೆಚ್ಚು ಮನರಂಜನೆ ಒದಗಿಸುತ್ತದೆ. ಅಥವಾ ಅದು ಮೂರು ನಿಮಿಷ ಮಾತ್ರವಿತ್ತು ಎಂಬ ಕಾರಣಕ್ಕೆ ಮನರಂಜಕವಾಗಿತ್ತೋ ಗೊತ್ತಿಲ್ಲ. ಮೂರು ದಶಕಗಳ ಹಿಂದೆ ಭ್ರಷ್ಟಾಚಾರ ದೇಶದ ಅತಿ ದೊಡ್ಡ ಸಮಸ್ಯೆ ಎನಿಸುತ್ತಿದ್ದದ್ದು ನಿಜ. ಆದರೆ, ಈಗ ಭ್ರಷ್ಟಾಚಾರವನ್ನೂ ಮೀರಿದ ಹಲವು ಗಂಭೀರ ಸಮಸ್ಯೆಗಳಿವೆ ಎಂಬುದರ ಮೇಲೆ ದೇಶದ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳು ರೂಪುಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆ ಫಾರ್ಮುಲಾ ಇಟ್ಟುಕೊಂಡು ಬಂದಿರುವ ಬುದ್ದಿ, ಭಾವ, ಹೃದಯ ಯಾವುದನ್ನೂ ಖುಷಿಪಡಿಸದ, ಕ್ಲಾಸ್ ಅಲ್ಲದ ಮಾಸ್ ಎನಿಸದ ‘ಇಂಡಿಯನ್‌ 2’, ಥಿಯೇಟರ್‌ನಲ್ಲೇ ಫಾರ್ವರ್ಡ್‌ ಬಟನ್‌ಗಾಗಿ ತಡಕಾಡುವಂತೆ ಮಾಡುತ್ತದೆ.

LEAVE A REPLY

Connect with

Please enter your comment!
Please enter your name here