ಪ್ರತಿಷ್ಠಿತ ಸೈಮಾ ಅವಾರ್ಡ್ಸ್‌ ಸಮಾರಂಭ ಈ ಬಾರಿ ಸೆಪ್ಟೆಂಬರ್‌ 10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದು ಹತ್ತನೇ SIIMA ಅವಾರ್ಡ್ಸ್‌ ಸಮಾರಂಭ.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ‘ಸೈಮಾ’ ಅವಾರ್ಡ್ಸ್ 2022 ಈ ಬಾರಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಆಯೋಜನೆಗೊಂಡಿತ್ತು. ಅಗಲಿದ ನಟ ಪುನೀತ್‌ ರಾಜಕುಮಾರ್‌ ಅವರನ್ನು ಸ್ಮರಿಸುವ ವಿಶೇಷ ಸೆಗ್‌ಮೆಂಟ್‌ ಕಾರ್ಯಕ್ರಮದಲ್ಲಿ ಇರಲಿದೆ ಎಂದು SIIMA ಮುಖ್ಯಸ್ಥೆ ಬೃಂದಾ ಪ್ರಸಾದ್‌ ತಿಳಿಸಿದರು.

“SIIMA 2022 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ ಕೂಡ. ಬೆಂಗಳೂರಿನಲ್ಲಿ ಅವಾರ್ಡ್ಸ್ ನಡೆಸಲು ಎರಡು ಪ್ರಮುಖ ಕಾರಣಗಳಿದೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ‌. ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ” ಎಂದರು ಬೃಂದಾ.

ತೆಲುಗು ತಾರೆ ರಾಣಾ ದಗ್ಗುಬಾಟಿ SIIMA ಜೊತೆ ಹಲವು ವರ್ಷಗಳಿಂದ ಜೊತೆಯಾಗಿದ್ದಾರೆ. ಕಾರ್ಯಕ್ರಮದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಪಾಲ್ಗೊಂಡಿದ್ದ ಅವರು, “ಒಂದು ಪ್ರಶಸ್ತಿ ಸಮಾರಂಭವನ್ನು ಹತ್ತುವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖಷಿ” ಎಂದರು. “ನನಗೆ ‘ಸೈಮಾ’ ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ” ಎಂದು ‌ನಟ ಡಾಲಿ ಧನಂಜಯ ಅವರು ಇತರೆ ರಾಜ್ಯಗಳ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ನಾಡಿಗೆ ಸ್ವಾಗತಿಸಿದರು.

ಬಹುಭಾದಾ ತಾರೆ ಶಾನ್ವಿ ಶ್ರೀವಾಸ್ತವ್‌ ಮಾತನಾಡಿ, “ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ.. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ” ಎಂದರು. ನಟಿಯರಾದ ಫರಿಯಾ ಅಬ್ದುಲ್ಲಾ, ಶ್ರೀಲೀಲ ಹಾಗೂ ಕೆಲವು ಪ್ರಾಯೋಜಕರು “ಸೈಮಾ” ಬಗ್ಗೆ ಮಾತನಾಡಿದರು.

Previous articleನವೆಂಬರ್‌ ಮಳೆಯಲ್ಲಿ ನಾಗಶೇಖರ್ ಪ್ರೇಮಕಥೆ
Next articleಬೆಂಗಳೂರಿನಲ್ಲಿ ವಿಜಯ್‌ ದೇವರಕೊಂಡ; ಆಗಸ್ಟ್‌ 25ಕ್ಕೆ ‘LIGER’

LEAVE A REPLY

Connect with



Please enter your comment!
Please enter your name here