ಎಚ್‌ ವಿನೋದ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸಲಿರುವ ‘KH233’ ನೂತನ ತಮಿಳು ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಇದೊಂದು ರಾಜಕೀಯ ಚಿತ್ರವಾಗಿದ್ದು, ಹೀರೋ ಕಮಲ ಹಾಸನ್‌ ಪಾತ್ರ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿದೆ ಎಂದು ಹೇಳಲಾಗುತ್ತಿದೆ.

ಕಮಲ ಹಾಸನ್‌ ಅಭಿನಯದ ‘KH233’ ನೂತನ PAN ಇಂಡಿಯಾ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಎಚ್‌ ವಿನೋದ್‌ ನಿರ್ದೇಶನದ ಈ ಚಿತ್ರಕ್ಕಿನ್ನೂ ಶೀರ್ಷಿಕೆ ನಿಗಧಿಯಾಗಿಲ್ಲ. ಆದರೆ ‘Rise To Rule’ ಎನ್ನುವ ಅಡಿಬರಹವಿದೆ. ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ ಮತ್ತು ಟರ್ಮರಿಕ್ ಮೀಡಿಯಾ ಜೊತೆಗೂಡಿ ಈ ಚಿತ್ರ ನಿರ್ಮಿಸುತ್ತಿವೆ. ಈ ಸಿನಿಮಾ ಕಮಲ್‌ರ 233ನೇ ಚಿತ್ರವಾಗಿದ್ದು, ಪ್ರೋಮೋದಲ್ಲಿ ನಟ ಕಮಲ್ ಹಾಸನ್ ಬೆಂಕಿ ಉರಿಯುತ್ತಿರುವ ಪಂಜನ್ನು ಕೈಯಲ್ಲಿ ಎತ್ತಿ ಹಿಡಿದಿರುವ ಪ್ರತಿಬಿಂಬ ತೋರಿಸಲಾಗಿದೆ. ಇದೊಂದು ರಾಜಕೀಯ ಸಿನಿಮಾ ಎನ್ನುವ ಸುಳಿವು ಸಿಗುತ್ತದೆ. ಚಿತ್ರದಲ್ಲಿ ರೈತರ ಸಮಸ್ಯೆಗಳನ್ನು ಎತ್ತಿಹಿಡಿಯುವ ಮಧ್ಯವಯಸ್ಕ ಕಾರ್ಯಕರ್ತನಾಗಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕಮಲ ಹಾಸನ್, ‘ಜಾತಿಯೇ ನನ್ನ ಅತಿ ದೊಡ್ಡ ಶತ್ರು’ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದರು. ಕಮಲ್‌ ಅಭಿಮಾನಿಗಳು ಹೆಚ್ ವಿನೋತ್ ಅವರ ಈ ಸಿನಿಮಾವನ್ನು ರಾಜಕೀಯ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಎಚ್ ವಿನೋತ್ ಅವರೊಂದಿಗಿನ ಚಿತ್ರದ ನಂತರ, ಕಮಲ್‌ ಹಾಸನ್ ಅವರು ಮಣಿರತ್ನಂ ಅವರೊಂದಿಗೆ ‘KH234’ ಚಿತ್ರಕ್ಕಾಗಿ ಜೊತೆಯಾಗಲಿದ್ದಾರೆ. ಈ ಸಿನಿಮಾಗೆ ಎ ಆರ್‌ ರೆಹಮಾನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here