(ಬರಹ: ಸಂತೋಷ್‌ ಕುಮಾರ್‌ ಎಲ್‌.ಎಂ.)

ಮೊದಲಾರ್ಧದ ಕಥೆಯ ರೀತಿಯಿಂದಾಗಿ ಏನಾಗುತ್ತಿರುವುದೆಂಬ ಗೊಂದಲ ಉಂಟಾದರೂ ಮಧ್ಯಂತರದ ಮುಂಚೆ ಬಯಲಾಗುವ ವಿಷಯದಿಂದಾಗಿ ಕುತೂಹಲ ಶುರುವಾಗುತ್ತದೆ. ದ್ವಿತಿಯಾರ್ಧದಲ್ಲಿ ಮೊದಲಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಿದ ನಂತರ ಕಥೆಯನ್ನು ಮುಂದುವರೆಸಿದ ರೀತಿಯಲ್ಲಿ ನಿರ್ದೇಶಕರ ಕೌಶಲ್ಯ ಕಾಣಿಸುತ್ತದೆ.

Once Upon a Time….
There Lived a Ghost….!!

ಒಬ್ಬ ಚಿತ್ರಕಾರನಿಗೆ ತನ್ನ ಅರಾಧ್ಯ ದೈವದ ಲಹರಿ ಬಂದರೆ ತನಗೆ ಬರುವ ಕೌಶಲ್ಯವನ್ನೆಲ್ಲ ಬಳಸಿ ಅದ್ಭುತ ಚಿತ್ರವೊಂದನ್ನು ಬಿಡಿಸುತ್ತಾನೆ. ಅದೇ ಹಾಡುಗಾರನಾದರೆ ಹಾಡು ಕಟ್ಟುತ್ತಾನೆ. ಮಾತುಗಾರನಾದರೆ ತನ್ನ ಮಾತುಗಳಲ್ಲೇ ಆತನನ್ನು ಕೊಂಡಾಡುತ್ತಾನೆ. ಅದೇ ಥರ ಒಬ್ಬ ನಿರ್ದೇಶಕನಿಗೆ ತನ್ನ ಅರಾಧ್ಯ ದೈವ ಕೈಗೆ ಸಿಕ್ಕರೆ ಏನು ಮಾಡಬಹುದೋ…ಅವುಗಳೆಲ್ಲದರ ಒಟ್ಟಾರೆ ರೂಪ ‘ವಿಕ್ರಮ್’

ಇದನ್ನು ನಾನು ಕಮಲ್ ಹಾಸನ್ ಕಡೆಯಿಂದ ನೋಡುತ್ತಲೇ ಇಲ್ಲ. ಏಕೆಂದರೆ ಇದೊಂದು ಲೋಕೇಶ್ ಕನಗರಾಜ್ ಚಿತ್ರ. ಕೇವಲ ಮಾನಗರಂ, ಕೈದಿ, ಮಾಸ್ಟರ್ ಅನ್ನುವ ಮೂರೇ ಚಿತ್ರಗಳಲ್ಲಿ ತನ್ನ ಪ್ರತಿಭೆಯನ್ನು ಸಿನಿಮಾರಂಗದಲ್ಲಿ ತೋರಿಸಿ ಚಿಕ್ಕ ವಯಸ್ಸಿಗೇ ದೊಡ್ಡ ದೊಡ್ಡ ನಾಯಕನಟರನ್ನು ಹಾಕಿಕೊಂಡು ದೊಡ್ಡ ಬಜೆಟ್ಟಿನಲ್ಲಿ ಸಿನಿಮಾ ತೆಗೆಯಬಲ್ಲ ಮಟ್ಟಕ್ಕೆ ಏರಿದ ಅಪರೂಪದ ಪ್ರತಿಭೆ. ಅಂಥ ಹುಡುಗನ ಕೈಗೆ ನಟರಾಕ್ಷಸ ಕಮಲ್ ಹಾಸನ್ ಸಿಕ್ಕಿದ್ದಾನೆ. ಬಾಲ್ಯದಿಂದಲೂ ತಾನು ಆರಾಧಿಸಿಕೊಂಡು ಬಂದ ಕಮಲ್ ನಂಥ ಕಮಲ್ ತನ್ನ ಸಿನಿಮಾದಲ್ಲಿ ನಟಿಸುತ್ತಾನೆಂದರೆ ಲೋಕೇಶ್ ಕನಗರಾಜ್ ಕಥೆ ಹೇಗಾಗಬೇಡ.

ಅಲ್ಲಿ ನಡೆಯುವುದು Literally ಜಾತ್ರೆಯ ಸಡಗರ ಅಷ್ಟೇ! ಅದನ್ನು ನೋಡಿ ಖುಶಿಪಡಬೇಕು. ಆ ಸಡಗರದ ಹೆಸರೇ ‘ವಿಕ್ರಮ್’. ಈ ಸಿನಿಮಾ ಒಂದು ಮಾಸ್ ಎಂಟರ್‍ಟೈನರ್. ಅಭಿಮಾನಿಗಳಿಗೆ ರಸದೌತಣ ಕೊಡುವುದಕ್ಕೆ ಏನೆಲ್ಲ ಮಾಡಬೇಕೋ ಲೋಕೇಶ್ ಮಾಡಿದ್ದಾರೆ. ಅಲ್ಲಿರುವುದು ಬರೀ ಒಬ್ಬರು ಇಬ್ಬರಲ್ಲ. ಕಮಲ್ ಹಾಸನ್, ಫಹದ್ ಫಾಸಿಲ್, ವಿಜಯ್ ಸೇತುಪತಿ, ಸೂರ್ಯ!

ಹಿಂದೆ ‘ಮಾಸ್ಟರ್’ ಸಿನಿಮಾದಲ್ಲಿ ಇಬ್ಬರು ಹೀರೋಗಳಿದ್ದರು. ಒಂದು ಕಡೆ ವಿಜಯ್ ಅಭಿಮಾನಿಗಳಿಗೆ ಬೇಸರವಾದರೆ ಕ್ಲೈಮ್ಯಾಕ್ಸ್‌ನಲ್ಲಿ ವಿಜಯ್ ಸೇತುಪತಿಯ ಪಾತ್ರ ಡಮ್ಮಿಯಂತೆ ತೋರಿತು. ಇದು ಸಹಜ. ಇಬ್ಬರು ನಾಯಕ ನಟರನ್ನು ಹಾಕಿಕೊಂಡಾಗಲೇ ಸಿನಿಮಾವನ್ನು ಸಮತೋಲನ ಮಾಡುವುದು ಕಷ್ಟ. ಆದರೆ ‘ವಿಕ್ರಮ್’ನಲ್ಲಿ ಒಬ್ಬೊಬ್ಬರೇ ತಮ್ಮ ಸಿನಿಮಾವನ್ನು ಎತ್ತಿ ನಿಲ್ಲಿಸುವಷ್ಟು ಶಕ್ತಿಯಿರುವ ನಾಯಕ ನಟರೇ ಇಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾರಿಗೂ ಇಲ್ಲಿ ಯಾವುದಕ್ಕೂ ಕಮ್ಮಿಯಾಗಿಲ್ಲ ಅಂತ ಚಿತ್ರ ನೋಡಿದ ಪ್ರೇಕ್ಷಕನಿಗೆ ಅನ್ನಿಸಿದರೆ ಅದಕ್ಕೆ ಕಾರಣ ಎಲ್ಲರಿಗೂ ಸಮಾನ ಅವಕಾಶ ನೀಡಿರುವ ಲೋಕೇಶ್ ಅವರ ಸ್ಕ್ರಿಪ್ಟ್.

ಈ ಅನಿರುದ್ಧ್ ಅದೆಷ್ಟು ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಕೊಡುತ್ತಿದ್ದಾರೋ ಗೊತ್ತಿಲ್ಲ. ಈಗ ಬರುತ್ತಿರುವ ಎಲ್ಲ ದೊಡ್ಡ ಬಜೆಟ್ಟಿನ, ದೊಡ್ಡ ಹೀರೋಗಳ ಸಿನಿಮಾಗಳಿಗೆ ಇವರದೇ ಹಿನ್ನೆಲೆ ಸಂಗೀತವೆಂದರೆ ಇವರಿನ್ನೆಷ್ಟು ಬ್ಯುಸಿಯಾಗಿರಬೇಕೋ. ವಿಕ್ರಮ್ ಸಿನಿಮಾದಲ್ಲೂ ಅಷ್ಟೇ ಆ Genreಗೆ ತಕ್ಕ ಸಂಗೀತವನ್ನು ಅದ್ಭುತವಾಗಿ ಕೊಟ್ಟಿದ್ದಾರೆ. ಮಾಸ್ ದೃಶ್ಯಗಳಲ್ಲಂತೂ ಆಹಾ.

ಫಹದ್ ಫಾಸಿಲ್ ಮತ್ತೊಮ್ಮೆ ಇಲ್ಲೂ ಅದ್ಬುತ ಅಭಿನಯ. ಅವರಿಗೆ ಸಿಕ್ಕಿರುವ ಪಾತ್ರವೇ ಹಾಗಿದೆ. ವಿಜಯ್ ಸೇತುಪತಿಯ ದೈತ್ಯ ಪಾತ್ರವಂತೂ ವಿಶಿಷ್ಟ ಮ್ಯಾನರಿಸಂನಿಂದ ವ್ಹಾವ್ ಅನ್ನಿಸಿತು. ಕಡೆಯ ಐದು ನಿಮಿಷಗಳಲ್ಲಿ ಬರುವ ಸೂರ್ಯ ಅದರ ಬಗ್ಗೆ ತಿಳಿಯದೆ ಕುಳಿತಿದ್ದ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಡುತ್ತಾರೆ. ಇವರೆಲ್ಲರಿಗೂ ಸರಿಯಾದ ಅವಕಾಶವನ್ನು ಕಥೆಯಲ್ಲಿ ಸೇರಿಸಿದ್ದರ ಸಲುವಾಗಿ ಸಿನಿಮಾ ಮೂರುಗಂಟೆಯ ಆಸುಪಾಸಿನಲ್ಲಿದೆ. ಆದರೆ ನೋಡುವಾಗ ಒಂದು ಸಲವೂ ಹಾಗನ್ನಿಸುವುದಿಲ್ಲ.

‘Agent Tina here sir’ ಅಂದಾಗ ಇಡೀ ಥಿಯೇಟರಿನಲ್ಲಿ ಯಾವುದೋ ದೆವ್ವ ನುಗ್ಗಿದ ಹಾಗೆ ಚೀರಾಟ! ಆ ಪಾತ್ರವನ್ನು, ಆ ಸನ್ನಿವೇಶವನ್ನು ನೀವು ಸಿನಿಮಾ ನೋಡಿಯೇ ಅನುಭವಿಸಬೇಕು. ಅದರ ಬಗ್ಗೆ ಇಲ್ಲಿ ಹೇಳಬಾರದು. ಕಥೆಯಲ್ಲಿ ಪ್ರೇಕ್ಷಕನಿಗೆ ಬೇಕಾದ್ದನ್ನು ಉಣಬಡಿಸುವುದು ಅಂದರೆ ಹೀಗೆಯೇ!

ಕಮಲ್ ಹಾಸನ್ ಮ್ಯಾನರಿಸಂಗೆ ತಕ್ಕಂತೆ ಎಲ್ಲ ಹೊಡೆದಾಟದ ದೃಶ್ಯಗಳನ್ನು ಹೆಣೆಯಲಾಗಿದೆ. ಆ ಮಗುವಿಗೆ ನಿದ್ರೆ ಮಾಡಲು ಬೇಕಾದ ನಿಶ್ಯಬ್ದವನ್ನು ಕಲ್ಪಿಸಲು ವಿಕ್ರಮ್ ಪ್ರಯತ್ನಿಸುವ ಪುಟ್ಟ ಪುಟ್ಟ ಸೂಕ್ಷ್ಮಗಳು ಚೆನ್ನಾಗಿ ರಿಜಿಸ್ಟರ್ ಆಗುತ್ತವೆ. ಮೊದಲೇ ಹೇಳಿದಂತೆ ಕಮಲ್ ಅನ್ನು ತೆರೆಯ ಮೇಲೆ ವಿಜೃಂಭಿಸಲು ಏನೆಲ್ಲ ಬೇಕೋ ಅಷ್ಟು ಆಯುಧಗಳನ್ನು ಕೊಟ್ಟಿದ್ದಾರೆ ಲೋಕೇಶ್. ಒಂದು ದೃಶ್ಯದಲ್ಲಿ ಬಳಸುವ ಆಯುಧ ಮತ್ತೊಂದರಲ್ಲಿ ಬದಲಾಗಿರುತ್ತೆ. ಒಂದೊಂದು ಬಂದೂಕು/ಪಿಸ್ತೂಲು/ಆಯುಧ ಎತ್ತಿಕೊಂಡು ಬಳಸುವಾಗಲು ಅದಕ್ಕೆ ತಕ್ಕಂತೆ ಮ್ಯಾನರಿಸಂ ಬಳಸಿದ್ದಾರೆ ಕಮಲ್. ಅದೇ ಹೊಡೆದಾಟದ ದೃಶ್ಯಗಳ ಹೈಲೈಟ್. ಕಥೆಗೆ ‘ಕೈದಿ’ ಚಿತ್ರದ ಲಿಂಕ್ ಇದೆ. ಅದನ್ನು ಬಳಸಿಕೊಂಡಿದ್ದು ನಿಜವಾಗಿ ಬುದ್ಧಿವಂತಿಕೆ.

ನನಗೆ ಮೊದಲಾರ್ಧದ ಕಥೆಯ ರೀತಿಯಿಂದಾಗಿ ಏನಾಗುತ್ತಿರುವುದೆಂಬ ಗೊಂದಲ ಉಂಟಾದರೂ ಮಧ್ಯಂತರದ ಮುಂಚೆ ಬಯಲಾಗುವ ವಿಷಯದಿಂದಾಗಿ ಕುತೂಹಲ ಮತ್ತೆ ಶುರುವಾಯಿತು. ದ್ವಿತೀಯಾರ್ಧದಲ್ಲಿ ಮೊದಲಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಿದ ನಂತರ ಕಥೆಯನ್ನು ಮುಂದುವರೆಸಿದ ರೀತಿ ಸಕ್ಕತ್ ಅನ್ನಿಸಿತು. ಅದರಲ್ಲೂ ಸಂಪೂರ್ಣ Action Sequenceಗಳು ಶುರುವಾದ ಮೇಲಂತೂ ಕಣ್ಣಿಗೆ ಹಬ್ಬ.

ಕಮಲ್ ಹಾಸನ್ ಸಿನಿಮಾವೊಂದು ಬಹಳ ದಿನಗಳ ನಂತರ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ದೊಡ್ಡ ಗಳಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಸರಿಯಾಗಿಯೇ ಇಟ್ಟಾಗಿದೆ. ಲೋಕೇಶ್ ಕನಗರಾಜ್ ಸಹ ತನ್ನ ಸಿನಿಮಾದ ರೀತಿಯೇ ಬೇರೆ ಅನ್ನುವುದನ್ನು ಈ ಮೂರ್ನಾಲ್ಕು ಸಿನಿಮಾಗಳಲ್ಲಿ ತೋರಿಸಿಯಾಗಿದೆ. ಮುಂದಿನ ಭಾಗದಲ್ಲಿ ಇನ್ನೂ ಏನೆಲ್ಲ ಬರಬಹುದೆಂಬ ಕುತೂಹಲ ಕಡೆಯ ದೃಶ್ಯದಲ್ಲಿ ಅನ್ನಿಸುವುದು ಸಹಜ.

ನೀವು ಕಮಲ್ ಅಭಿಮಾನಿಯಾಗಿದ್ದರೆ, action thriller ಸಿನಿಮಾಗಳು ನಿಮಗಿಷ್ಟವಾಗುತ್ತದೆಯಾದರೆ ನೋಡಲೇಬೇಕಾದ ಸಿನಿಮಾ.

LEAVE A REPLY

Connect with

Please enter your comment!
Please enter your name here