ಕನ್ನಡ ಮೂಲದ ನಟಿ ಶಿಲ್ಪ ಮಂಜುನಾಥ್‌ ತಮಿಳು, ಮಲಯಾಳಂ ನಂತರ ಇದೀಗ ಟಾಲಿವುಡ್‌ ಡೆಬ್ಯೂಗೆ ಸಜ್ಜಾಗಿದ್ದಾರೆ. ಬಸಿ ರೆಡ್ಡಿ ರಾಣಾ ನಿರ್ದೇಶನದಲ್ಲಿ ಅವರು ನಟಿಸಿರುವ ‘HIDE N SEEK’ ತೆಲುಗು – ತಮಿಳು ದ್ವಿಭಾಷಾ ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರದಲ್ಲಿನ ಇಂಟೆನ್ಸ್‌ ಪಾತ್ರ ಟಾಲಿವುಡ್‌ನಲ್ಲಿ ತಮಗೆ ಮಹತ್ವದ ಪ್ರವೇಶ ದೊರಕಿಸಿಕೊಡಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಶಿಲ್ಪ.

ಕನ್ನಡ ನೆಲದ ಹಲವು ನಟಿಯರು ಈಗ ಬಹುಭಾಷೆಗಳ ತಾರೆಯರಾಗಿ ಮಿಂಚುತ್ತಿದ್ದಾರೆ. ಈ ಪಟ್ಟಿಗೆ ನೂತನ ಸೇರ್ಪಡೆ ಶಿಲ್ಪ ಮಂಜುನಾಥ್‌. ‘ಮುಂಗಾರು ಮಳೆ 2’ (2016) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಿಲ್ಪ ಮಂಜುನಾಥ್‌ ‘ಯಮನ್‌’ ತಮಿಳು ಚಿತ್ರದೊಂದಿಗೆ ಕಾಲಿವುಡ್‌ ಪ್ರವೇಶಿಸಿದರು. ವಿಜಯ್‌ ಆಂಥೋನಿ ಹೀರೋ ಆಗಿದ್ದ ಸಿನಿಮಾ ಶಿಲ್ಪ ಅವರ ತಮಿಳು ಚಿತ್ರರಂಗ ಪ್ರವೇಶಕ್ಕೆ ಉತ್ತಮ ವೇದಿಕೆಯಾಯ್ತು. ಮರು ವರ್ಷ ವಿಜಯ್‌ ಆಂಥೋನಿ ಅವರೇ ಹೀರೋ ಆಗಿದ್ದ ‘ಕಾಳಿ’ ತಮಿಳು ಸಿನಿಮಾದಲ್ಲಿ ಹೆಸರು ಮಾಡಿದರು. ಇದೇ ವರ್ಷ ‘ರೋಸಾಪೂ’ ಮಲಯಾಳಂ ಚಿತ್ರದೊಂದಿಗೆ ಮಾಲಿವುಡ್‌ಗೆ ಎಂಟ್ರಿ ಕೊಟ್ಟರು. ಕನ್ನಡ, ತಮಿಳು, ಮಲಯಾಳಂ ಚಿತ್ರಗಳ ಜೊತೆ ಅವರೀಗ ಟಾಲಿವುಡ್‌ ಪ್ರವೇಶಕ್ಕೆ ಸಜ್ಜಾಗಿದ್ದಾರೆ.

ಬಸಿ ರೆಡ್ಡಿ ರಾಣಾ ನಿರ್ದೇಶನದ ಶಿಲ್ಪ ಮಂಜುನಾಥ್‌ ನಟಿಸಿರುವ ‘HIDE N SEEK’ ಕ್ರೈಂ – ಥ್ರಿಲ್ಲರ್‌ ತೆಲುಗು ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ಈ ದ್ವಿಭಾಷಾ ಸಿನಿಮಾ ತಮಿಳು ಭಾಷೆಯಲ್ಲೂ ತೆರೆಕಾಣಲಿದೆ. ‘ಮಹತ್ವದ ಸಿನಿಮಾ ಮತ್ತು ವಿಶಿಷ್ಟ ಪಾತ್ರದೊಂದಿಗೇ ಟಾಲಿವುಡ್‌ ಪ್ರವೇಶಿಸುತ್ತಿದ್ದೇನೆ. ಚಿತ್ರಕಥೆಯಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ. ಇಲ್ಲಿಯವರೆಗೆ ನಾನು ಲವ್‌ಸ್ಟೋರಿಗಳನ್ನು ಮಾಡಿದ್ದೇ ಹೆಚ್ಚು. ಈ ಕ್ರೈಂ – ಥ್ರಿಲ್ಲರ್‌ ಸಿನಿಮಾ ನಟಿಯಾಗಿ ನನಗೂ ಸವಾಲಿನದ್ದಾಗಿತ್ತು. ನಿರ್ದೇಶಕ ಬಸಿ ರೆಡ್ಡಿ ಅವರ ಬಿಗಿಯಾದ ನಿರೂಪಣೆ ಈ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ದಿದೆ’ ಎನ್ನುತ್ತಾರೆ ಶಿಲ್ಪ. ಈ ಸಿನಿಮಾ ಹೊರತಾಗಿ ಅವರ ಎರಡು ತಮಿಳು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ಈ ಮಧ್ಯೆ ಕನ್ನಡದಲ್ಲಿ ಅವರು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎನ್ನುವ ವಿಶಿಷ್ಟ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಬರಿ ಕತೆಯ ಈ ಥ್ರಿಲ್ಲರ್‌ ಸಿನಿಮಾಗೆ ಅವರೇ ನಿರ್ಮಾಪಕಿ ಎನ್ನುವುದು ವಿಶೇಷ.

ಇನ್ನು ‘HIDE N SEEK’, ಬಸಿ ರೆಡ್ಡಿ ಅವರ ಸ್ವತಂತ್ರ್ಯ ನಿರ್ದೇಶನದ ಚೊಚ್ಚಲ ಸಿನಿಮಾ. ಹಲವು ವರ್ಷ ಸಹನಿರ್ದೇಶಕರಾಗಿ, ಚಿತ್ರಕಥಾ ಲೇಖಕರಾಗಿ ಅವರು ಟಾಲಿವುಡ್‌ನಲ್ಲಿ ಸಕ್ರಿಯರಾಗಿದ್ದವರು. ‘ಮೇಲ್ನೋಟಕ್ಕೆ ಇದು ಕ್ರೈಂ – ಥ್ರಿಲ್ಲರ್‌ ಸಿನಿಮಾ ಆದರೂ ಇಲ್ಲಿನ ಪಾತ್ರಗಳನ್ನು ದುರ್ಗಾದೇವಿ ಮತ್ತು ಪರಶಿವನ ವ್ಯಕ್ತಿತ್ವಗಳಿಗೆ ಸಮೀಕರಿಸಬಹುದು. ಮನುಕುಲದ ಒಳಿತಿಗಾಗಿ ನಾಯಕಿ, ನಾಯಕ ಹೋರಾಟ ನಡೆಸುತ್ತಾರೆ. ಕರ್ನೂರ್‌ನಲ್ಲಿ ಶುರುವಾಗುವ ಕತೆ ಹಲವು ಕಡೆ ಸಂಚರಿಸುತ್ತದೆ. ನಟಿ ಶಿಲ್ಪ ಮಂಜುನಾಥ್‌ ಅವರ ಟಾಲಿವುಡ್‌ ಪ್ರವೇಶಕ್ಕೆ ಇದು ಉತ್ತಮ ಸಿನಿಮಾ ಆಗಲಿದೆ. ಕತೆ ಕುರಿತಾಗಿ ಹೆಚ್ಚು ಸುಳಿವು ಬಿಟ್ಟಿಕೊಡುವಂತಿಲ್ಲ. ಹಾಗಾಗಿ ಶಿಲ್ಪ ಅವರ ಪಾತ್ರದ ಬಗ್ಗೆಯೂ ಹೆಚ್ಚು ರಿವೀಲ್‌ ಮಾಡುವುದಿಲ್ಲ’ ಎನ್ನುತ್ತಾರೆ ನಿರ್ದೇಶಕ ಬಸಿ ರೆಡ್ಡಿ. ವಿಶ್ವಂತ್‌ ಮತ್ತು ರಿಯಾ ಸಚ್‌ದೇವ್‌ ಈ ಚಿತ್ರದ ಇನ್ನಿಬ್ಬರು ಪ್ರಮುಖ ಕಲಾವಿದರು. ಮೊನ್ನೆಯಷ್ಟೇ ಚಿತ್ರದ ಪೋಸ್ಟರ್‌ ಹೊರಬಿದ್ದಿದ್ದು ಮುಂದಿನ ಕೆಲವು ದಿನಗಳಲ್ಲಿ ಅವರು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here