ಸಂತೋಷ್ ಬಿಲ್ವಾ ಮತ್ತು ಸಾತ್ವಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ಕನಸೊಂದು ಶುರುವಾಗಿದೆ’ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಂಜೇಶ್ ಭಾಗವತ್ ನಿರ್ದೇಶನದ ಸಿನಿಮಾಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆಯಿದೆ.
ಮಂಜೇಶ್ ಭಾಗವತ್ ನಿರ್ದೇಶನದ ‘ಕನಸೊಂದು ಶುರುವಾಗಿದೆ’ ಸಿನಿಮಾಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್ ನೀಡಿದ್ದು, ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ಈ ಸಿನಿಮಾ ಮೂಲಕ ಸಂತೋಷ್ ಬಿಲ್ವಾ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ಸಾತ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಮಂಜು ಮತ್ತು ಕುರಿ ಸುನಿಲ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಸಹರಾ’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಮಂಜೇಶ್ ಭಾಗವತ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ, ದೀಪಕ್ ಸಿಎಸ್ ಗೌಡ ಸಂಕಲನ, ಶಶಾಂಕ್ ಲೋಕೇಂದ್ರ ಸೂರ್ಯ ಛಾಯಾಗ್ರಹಣವಿದೆ. ಸಿಂಪಲ್ ಸುನಿ ಹಾಗೂ ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಮತ್ತು ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವನ್ನು ಬೆಂಗಳೂರು, ಕುಂದಾಪುರ, ಕುಣಿಗಲ್ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ಸಿನಿಮಾವನ್ನು KKR Media ಬ್ಯಾನರ್ ಅಡಿಯಲ್ಲಿ ಲಕ್ಷ್ಮೀ ಕಾಂತ್ ರೆಡ್ಡಿ ಎಸ್ ನಿರ್ಮಾಣ ಮಾಡಿದ್ದಾರೆ.