ಶೈಲೇಶ್‌ ಕೋಲನು ಬರೆದು ನಿರ್ದೇಶಿಸಿರುವ ‘ಸೈಂಧವ’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ವೆಂಕಟೇಶ್‌ ದಗ್ಗುಬಾಟಿ ಅವರ 75ನೇ ಚಿತ್ರವಿದು. ಕನ್ನಡತಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ನಟಿಸಿದ್ದು, ನವಾಜುದ್ದೀನ್‌ ಸಿದ್ದಿಕಿ ಖಳಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವೆಂಕಟೇಶ್ ದಗ್ಗುಬಾಟಿ ಅವರ 75ನೇ ಸಿನಿಮಾ ‘ಸೈಂಧವ’ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಶೈಲೇಶ್ ಕೋಲನು ಬರೆದು ನಿರ್ದೇಶಿಸಿದ್ದಾರೆ. ಅಪರೂಪದ ಖಾಯಿಲೆಗೆ ಈಡಾಗುವ ಪುಟ್ಟ ಮಗಳನ್ನು ಉಳಿಸಲು ಸೆಣೆಸಾಡುವ ಅಪ್ಪ – ಮಗಳ ಬಾಂಧವ್ಯದ ಕತೆಯಿದು. ಬಾಲನಟಿ ಸಾರಾ ಪಾಲೇಕರ್ ತನ್ನ ತಂದೆಯನ್ನು ಸರಳ, ಸೌಮ್ಯ ವ್ಯಕ್ತಿ ಮತ್ತು ಸೂಪರ್ ಹೀರೋ ಎಂದು ವಿವರಿಸುವುದರೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ತಂದೆಯೊಂದಿಗೆ ಅವಳು ಸುರಕ್ಷಿತವಾದ ಜೀವನ ಸಾಗಿಸುತ್ತಿರುತ್ತಾಳೆ. ನಂತರದ ದಿನಗಳಲ್ಲಿ ಆಕೆಗೆ ಅಪರೂಪದ ನ್ಯೂನ್ಯತೆ ಇರುವುದು ಪತ್ತೆಯಾದಾಗ ಅಲ್ಲಿಂದ ಕುಟುಂಬದ ಖುಷಿ ಕಳೆದುಹೋಗುತ್ತದೆ. ತನ್ನ ಮಗಳನ್ನು ಉಳಿಸಿಕೊಳ್ಳಲು ತಂದೆ ಹೋರಾಟಕ್ಕೆ ಸಜ್ಜಾಗುತ್ತಾನೆ. ಚಿಕಿತ್ಸೆಗಾಗಿ ಕೋಟಿಗಟ್ಟಲೆ ಹಣ ಹೊಂದಿಸಲು ಹರಸಾಹಸ ಪಡುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಕನ್ನಡ ಮೂಲದ ಶ್ರದ್ಧಾ ಶ್ರೀನಾಥ್‌ ಚಿತ್ರದ ನಾಯಕಿ. ರುಹಾನಿ ಶರ್ಮಾ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಆರ್ಯ, ಆಂಡ್ರಿಯಾ ಜೆರೆಮಿಯಾ, ಜಿಶು ಸೆಂಗುಪ್ತಾ ಮತ್ತು ಮುಖೇಶ್ ರಿಷಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಅವರು ಖಳಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದೊಂದಿಗೆ ಅವರು ಟಾಲಿವುಡ್‌ ಪ್ರವೇಶಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ, ಎಸ್ ಮಣಿಕಂಠನ್ ಛಾಯಾಗ್ರಹಣ, ಗ್ಯಾರಿ ಬಿ ಅವರ ಸಂಕಲನವಿದೆ. ಸಿನಿಮಾ ಇದೇ ಜನವರಿ 13ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here