ಬಾಲಿವುಡ್ ನಟಿ ಕಂಗನಾ ಅವರಿಗೆ ದಿಲ್ಲಿ ಅಸೆಂಬ್ಲೀ ಕಮಿಟಿ ಸಮನ್ಸ್ ಜಾರಿ ಮಾಡಿದೆ. ರೈತರ ಪ್ರತಿಭಟನೆಯನ್ನು ಖಲಿಸ್ತಾನ್ ಮೂವ್‌ಮೆಂಟ್‌ಗೆ ಹೋಲಿಸಿ ಮಾತನಾಡಿದ್ದು ಅವರ ಮೇಲಿನ ಆರೋಪ.
ರೈತರ ಹೋರಾಟವನ್ನು ಖಲಿಸ್ತಾನ್ ಮೂವ್‌ಮೆಂಟ್‌ಗೆ ಹೋಲಿಸಿ ನಟಿ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಅವರ ಮೇಲೆ ಈಗಾಗಲೇ ಒಂದು FIR ದಾಖಲಾಗಿದೆ. ಈಗ ಇದೇ ವಿಚಾರವಾಗಿ ಈಗ ದಿಲ್ಲಿ ಅಸೆಂಬ್ಲೀ ಕಮಿಟಿಯಿಂದ ಕಂಗನಾಗೆ ಸಮನ್ಸ್ ಜಾರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆ ಕೊಡಲು ಡಿಸೆಂಬರ್ 6ರಂದು ಕಮಿಟಿ ಎದುರು ಹಾಜರಾಗುವಂತೆ ಕಂಗನಾಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ಜನಾಂಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.
ಮುಖೇಶ್ ಖನ್ನಾ ಕಿಡಿ: ಕಳೆದ ಮೂರು ವಾರಗಳಿಂದ ನಟಿ ಕಂಗನಾ ತಮ್ಮ ಹೇಳಿಕೆ, ಸೋಷಿಯಲ್ ಮೀಡಿಯಾ ಪೋಸ್ಟ್’ಗಳಿಂದ ಸುದ್ದಿಯಲ್ಲಿದ್ದಾರೆ. “1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ” ಎನ್ನುವ ಅವರ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಹಿರಿಯ ನಟ ಮುಖೇಶ್ ಖನ್ನಾ ಅವರು ಕಿಡಿಕಾರಿದ್ದಾರೆ. ಈ ಹೇಳಿಕೆ ‘ಚೈಲ್ಡಿಶ್’ ಮತ್ತು ‘ಸ್ಟುಪಿಡ್’.ಎಂದಿದ್ದಾರವರು. “ಹಲವರು ಕಂಗನಾ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ನನಗೆ ಹೇಳಿದ್ದರು. ನನ್ನ ಪ್ರಕಾರ ಈ ಹೇಳಿಕೆ ತೀರಾ ಹಾಸ್ಯಾಸ್ಪದ. ಓದು, ತಿಳುವಳಿಕೆ ಇಲ್ಲದವರು ಹೀಗೆ ಮಾತನಾಡುತ್ತಾರಷ್ಟೆ. ಇದು ‘ಪದ್ಮಶ್ರೀ’ ಗೌರವ ಸಿಕ್ಕಿರುವ ಸೈಡ್ ಎಫೆಕ್ಟ್ ಕೂಡ ಇರಬಹುದು” ಎಂದು ಮುಖೇಶ್ ಅಣಕವಾಡಿದ್ದಾರೆ.