ಬಾಲಿವುಡ್ ನಟಿ ಸುಷ್ಮಿತಾ ಸೇನ್‌ ಅಭಿನಯದ ‘ಆರ್ಯ 2’ ವೆಬ್ ಸರಣಿ ಟ್ರೈಲರ್ ಬಿಡುಗಡೆಯಾಗಿದೆ. ತನ್ನ ಕುಟುಂಬದ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧಳಾಗುವ ಆರ್ಯಳ ಕಥನವಿದು. ರಾಮ್ ಮಧ್ವಾನಿ ನಿರ್ದೇಶನದ ಸರಣಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಡಿಸೆಂಬರ್‌ 10ರಿಂದ ಸ್ಟ್ರೀಮ್ ಆಗಲಿದೆ.

“ನಮ್ಮ ಮೊದಲ ಸೀಸನ್‌ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮಿನೇಷನ್‌ ಆಗಿತ್ತು. ಎರಡನೇ ಸೀಸನ್‌ನಲ್ಲಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಈ ಗೌರವ ನಮಗೆ ಪ್ರೇರಣೆಯಾಯ್ತು. ಈ ಸರಣಿಯಲ್ಲಿ ಆರ್ಯ ಕೇವಲ ಗಟ್ಟಿಗಿತ್ತಿ ಹೆಣ್ಣುಮಗಳಲ್ಲ, ಬದಲಿಗೆ ಆಕೆ ಯೋಧಳಂತೆ ತನ್ನ ಕುಟುಂಬಕ್ಕಾಗಿ ಹೋರಾಟ ನಡೆಸುತ್ತಾಳೆ” ಎಂದು ನಟಿ ಸುಷ್ಮಿತಾ ಸೇನ್ ತಮ್ಮ ‘ಆರ್ಯ 2’ ಎರಡನೇ ಸೀಸನ್ ಕುರಿತು ಹೇಳಿಕೊಂಡಿದ್ದಾರೆ. ಇದೀಗ ‘ಆರ್ಯ 2’ ಟ್ರೈಲರ್ ಬಿಡುಗಡೆಯಾಗಿದೆ. ತನ್ನ ಮಕ್ಕಳೊಂದಿಗೆ ದೇಶ ಬಿಟ್ಟು ಹೊರಡುವ ಆರ್ಯಳ ನಿರ್ಧಾರದೊಂದಿಗೆ ಕಳೆದ ಸೀಸನ್ ಮುಕ್ತಾಯವಾಗಿತ್ತು. ಮುಂದುವರೆದ ಭಾಗದಲ್ಲಿ ಆರ್ಯ, ತನ್ನ ಕುಟುಂಬದ ಬೆನ್ನು ಬಿದ್ದಿರುವ ವ್ಯಕ್ತಿಯ ವಿರುದ್ಧ ಸೇಡು ತೀರಿಕೊಳ್ಳುವ ಕತೆಯಿದೆ.

ಎರಡನೇ ಸೀಸನ್‌ ಟ್ರೈಲರ್ ಗಮನಿಸಿದಾಗ, ತನ್ನ ಕುಟುಂಬ ರಕ್ಷಣೆಗಾಗಿ ಆರ್ಯ ದೊಡ್ಡ ವ್ಯೂಹವೊಂದನ್ನು ರಚಿಸುವುದು ತಿಳಿದುಬರುತ್ತದೆ. ಒಂದು ಹಂತದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧಳಾಗುವ ಆಕೆ ತನ್ನ ದಾರಿಗೆ ಅಡ್ಡಿಯಾಗಿರುವ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸುತ್ತಾಳೆ. ವಿಶಿಷ್ಟ ತಿರುವುಗಳ ಮೂಲಕ ಎರಡನೇ ಸೀಸನ್ ಹೆಚ್ಚು ಕುತೂಹಲ ಮೂಡಿಸಿದೆ. 2020ರ ಜನಪ್ರಿಯ ವೆಬ್‌ ಸರಣಿಗಳಲ್ಲಿ ‘ಆರ್ಯ’ ಕೂಡ ಒಂದು ಎಂದು ಹೆಸರು ಮಾಡಿತ್ತು. ಸಿಕಂದರ್ ಖೇರ್‌, ಚಂದ್ರಚೂಡ್ ಸಿಂಗ್‌, ನಮಿತಾ ದಾಸ್‌, ಜಯಂತ್ ಕೃಪಲಾನಿ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇಂಟರ್‌ನ್ಯಾಷನಲ್‌ ಎಮ್ಮಿ ಪ್ರಶಸ್ತಿಯ ‘ಬೆಸ್ಟ್ ಡ್ರಾಮಾ ಸೀರೀಸ್‌’ ಕೆಟಗರಿಗೆ ‘ಆರ್ಯ’ ನಾಮನಿರ್ದೇಶನಗೊಂಡಿತ್ತು. ಡಿಸ್ನೀ ಪ್ಲಸ್ ಹಾಟ್‌ಸ್ಟಾರ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಡಿಸೆಂಬರ್‌ 10ರಿಂದ ‘ಆರ್ಯ 2’ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here