ಕನ್ನಡ ಚಿತ್ರರಂಗ ಕಂಡ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81 ವರ್ಷ) ಇಂದು (ಏಪ್ರಿಲ್‌ 16) ಹೃದಯಾಘಾತದಿಂದ ಅಗಲಿದ್ದಾರೆ. ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ದ್ವಾರಕೀಶ್‌ ಅವರ ದಟ್ಟ ಹೆಜ್ಜೆಗುರುತಿದೆ. ಚಿತ್ರನಿರ್ಮಾಣದಲ್ಲಿ ಸಾಹಸ, ಪ್ರಯೋಗಗಳಿಗೆ ಹೆಸರಾಗಿದ್ದ ದ್ವಾರಕೀಶ್‌ ‘ಪ್ರಚಂಡ ಕುಳ್ಳ’ ಎಂದೇ ಕರೆಸಿಕೊಂಡಿದ್ದವರು.

ಕನ್ನಡ ಸಿನಿಮಾ ಕಂಡ ಅಪರೂಪದ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81 ವರ್ಷ) ಇಹಲೋಕ ತ್ಯಜಿಸಿದ್ದಾರೆ. ಇಂದು (ಏಪ್ರಿಲ್‌ 16) ಬೆಳಗ್ಗೆ ಹೃದಯಾಘಾತದಿಂದ ಅಗಲಿದ್ದಾರೆ. ನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ದ್ವಾರಕೀಶ್‌ ನಂತರದ ದಿನಗಳಲ್ಲಿ ಪ್ರಭಾವಿ ಚಿತ್ರನಿರ್ಮಾಪಕರಾಗಿ ಬೆಳೆದರು. ನಿರ್ದೇಶಕರಾಗಿಯೂ ಯಶಸ್ಸು ಕಂಡ ದ್ವಾರಕೀಶ್‌ ಗರಡಿಯಲ್ಲಿ ಹಲವು ನಟ – ನಟಿಯರು ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಚಿತ್ರನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಸಾಹಸ – ಪ್ರಯೋಗಗಳನ್ನು ನಡೆಸಿದ ದ್ವಾರಕೀಶ್‌ ವಿವಾದಗಳ ಮೂಲಕವೂ ಸುದ್ದಿಯಲ್ಲಿದ್ದವರು.

ದ್ವಾರಕೀಶ್‌ 1942ರ, ಆಗಸ್ಟ್‌ 19ರಂದು ಹುಣಸೂರಿನಲ್ಲಿ ಜನಿಸಿದರು. ತಂದೆ ಬಂಗ್ಲೆ ಶಾಮರಾವ್‌ ವೃತ್ತಿಯಲ್ಲಿ ವಕೀಲರು. ತಾಯಿ ಜಯಮ್ಮ. ಮೂರು ಹೆಣ್ಣು, ನಾಲ್ವರು ಗಂಡು ಮಕ್ಕಳಲ್ಲಿ ದ್ವಾರಕೀಶ್‌ ಕೊನೆಯವರು. ದ್ವಾರಕೀಶ್‌ ಹುಣಸೂರಿನಲ್ಲಿ ಜನಸಿದರೂ ಬೆಳೆದದ್ದು ಮೈಸೂರಿನಲ್ಲಿ. ಚಿಕ್ಕಂದಿನಿಂದಲೂ ಅವರಿಗೆ ನಾಟಕದ ಗೀಳು. ಏಳನೆಯ ತರಗತಿವರೆಗೆ ಶಾರದಾ ವಿಲಾಸ್‌ ಸ್ಕೂಲ್‌, ಎಸ್ಸೆಸ್ಸೆಲ್ಸಿಯನ್ನು ಬನುಮಯ್ಯ ಸ್ಕೂಲ್‌ನಲ್ಲಿ ನಂತರ ಶಾರದಾ ವಿಲಾಸ್‌ ಕಾಲೇಜಿನಲ್ಲಿ ಪಿಯೂಸಿ ಓದಿದರು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಡಿಪ್ಲೊಮೊ ಪಡೆದರು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕೆಲಕಾಲ ಇವರ ಸೋದರ ನಡೆಸುತ್ತಿದ್ದ ಮೈಸೂರಿನ ಆಟೋಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡಿದರು.

ಡಿಪ್ಲೊಮೊ ಓದುವಾಗಲೇ ಉತ್ತಮ ಹವ್ಯಾಸಿ ನಟ ಎನಿಸಿಕೊಂಡಿದ್ದ ದ್ವಾರಕೀಶ್‌ ನಾಟಕ, ಸಿನಿಮಾರಂಗದಲ್ಲಿ ಕೆಲಸ ಮಾಡಬೇಕೆಂದು ನಿಶ್ಚಯಿಸಿದ್ದರು. ಕೊನೆಗೆ ಸೋದರಮಾವ, ಖ್ಯಾತ ಚಿತ್ರನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ‘ವೀರಸಂಕಲ್ಪ’ (1964) ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾದರು. ಈ ಚಿತ್ರದ ಮೂಲಕ ಬಿ ಎಸ್‌ ದ್ವಾರಕಾನಾಥ್‌ ಆಗಿದ್ದವರು ‘ದ್ವಾರಕೀಶ್‌’ ಆದರು. ಇದಾದ ನಂತರ ಹುಣಸೂರು ಕೃಷ್ಣಮೂರ್ತಿಯವರೇ ತಮ್ಮ ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಪಾತ್ರ ಕೊಟ್ಟರು. ಆದರೆ, ಈ ಸಿನಿಮಾಗಳು ಅವರ ನಟನಾ ಬದುಕು ಬೆಳಗಲು ಸಾಕಾಗಲಿಲ್ಲ. ಧೈರ್ಯಮಾಡಿ ಗೆಳೆಯರೊಡಗೂಡಿ ‘ಮಮತೆಯ ಬಂಧನ’ (1965) ತಯಾರಿಸಿದರು. ಈ ಚಿತ್ರ ಮಾಡಿದಾಗ ದ್ವಾರಕೀಶ್‌ರಿಗೆ 23 ವರ್ಷವಷ್ಟೆ!

‘ಮಮತೆಯ ಬಂಧನ’ ನಂತರ ದ್ವಾರಕೀಶ್‌ ಚಿತ್ರರಂಗದಲ್ಲಿ ನಟ, ನಿರ್ಮಾಪಕರಾಗಿ ಹೆಚ್ಚು ಸಕ್ರಿಯವಾದರು. ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ ಭಾಷೆಗಳಲ್ಲೂ ಸಿನಿಮಾಗಳನ್ನು ನಿರ್ಮಿಸಿದರು. ‘ಸಿಂಗಾಪುರದಲ್ಲಿ ರಾಜಾಕುಳ್ಳ’ ಚಿತ್ರದ ಬಹುಪಾಲು ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಿ ಭಾರತೀಯ ಸಿನಿಮಾದ ಗಮನ ಸೆಳೆದರು. ‘ಆಫ್ರಿಕಾದಲ್ಲಿ ಶೀಲ’ ಚಿತ್ರವನ್ನು ಆಫ್ರಿಕಾದ ಕಾಡುಗಳಲ್ಲಿ ಚಿತ್ರಿಸಿದರು. ಪರಭಾಷೆಗಳ ಜನಪ್ರಿಯ ಗಾಯಕರಿಂದ ಹಾಡಿಸಿದ ದ್ವಾರಕೀಶ್‌ ವಿದೇಶದಲ್ಲಿ ಧ್ವನಿಮುದ್ರಣ ಮಾಡಿದ ಸಾಹಸಿ. ದ್ವಾರಕೀಶ್‌ ನಿರ್ಮಾಣದ ಸಿನಿಮಾಗಳ ಮೂಲಕ ಸಿದ್ದಲಿಂಗಯ್ಯ, ಭಾರ್ಗವ ಸ್ವತಂತ್ರ್ಯ ನಿರ್ದೇಶಕರಾದರು.

ಮೇಯರ್‌ ಮುತ್ತಣ್ಣ, ಕಳ್ಳ ಕುಳ್ಳ, ಮಗ ಮೊಮ್ಮಗ, ಕೌಬಾಯ್‌ ಕುಳ್ಳ, ಪೆದ್ದ ಗೆದ್ದ, ಗುರುಶಿಷ್ಯರು, ಬಂಗಾರದ ಮನುಷ್ಯ… ಸೇರಿದಂತೆ ಹಲವಾರು ಸಿನಿಮಾಗಳ ಮೂಲಕ ‘ನಟ ದ್ವಾರಕೀಶ್‌’ ನಮಗೆ ನೆನಪಾಗುತ್ತಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದ್ವಾರಕೀಶ್‌ 50 ಚಿತ್ರಗಳನ್ನು ನಿರ್ಮಸಿದ್ದು 21 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸಿನಿಮಾದ ಮೇರು ಕಲಾವಿದರೊಂದಿಗೆ ಅಭಿನಯಿಸಿದ್ದಾರೆ. ವರನಟ ಡಾ ರಾಜಕುಮಾರ್‌ ಅವರೊಂದಿಗೆ 24 ಚಿತ್ರಗಳಲ್ಲಿ ನಟಿಸಿದ್ದಾರೆ. ಟೀವಿ ಧಾರಾವಾಹಿಗಳನ್ನು ನಿರ್ಮಿಸಿ – ನಿರ್ದೇಶಿಸಿದ್ದಾರೆ. ಮೂರು ತಲೆಮಾರಿನ ನಾಯಕನಟರೊಂದಿಗೆ ಅಭಿನಯಿಸಿರುವ ದ್ವಾರಕೀಶ್‌ ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿನ ಪ್ರಮುಖ ಪಯಣಿಗ. ಅವರ ಅಗಲಿಕೆಯಿಂದ ಕನ್ನಡ ಸಿನಿಮಾದ ತಲೆಮಾರುಗಳನ್ನು ಬೆಸೆದಿದ್ದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

LEAVE A REPLY

Connect with

Please enter your comment!
Please enter your name here