ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ (83 ವರ್ಷ) ಇಂದು (ಡಿಸೆಂಬರ್ 8) ಅಗಲಿದ್ದಾರೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಿಗೆ ಸಾಕ್ಷಿಯಾಗಿದ್ದ ನಟಿ ಅವರು. ಐದು ದಶಕಗಳ ಕಾಲ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದ ಲೀಲಾವತಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೇರು ನಟಿಯ ಅಗಲಿಕೆಗೆ ಚಿತ್ರರಂಗದವರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇನ್ನು ನೆನಪು ಮಾತ್ರ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೆಲಮಂಗಲ ಬಳಿಯ ತಮ್ಮ ತೋಟದ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಡಿಸೆಂಬರ್ 8) ಇಹಲೋಕ ತ್ಯಜಿಸಿದರು. 83ರ ಹರೆಯದ ಲೀಲಾವತಿ ತಮ್ಮ ಪುತ್ರ, ನಟ ವಿನೋದ್ ರಾಜ್ ಹಾಗೂ ಚಿತ್ರರಂಗದ ಹಿತೈಷಿಗಳು, ಬಂಧು – ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.
ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ (1940). ತಂದೆ ಸುಬ್ಬಯ್ಯ, ತಾಯಿ ಸುಶೀಲಮ್ಮ. ಬಾಲ್ಯದ ಹೆಸರು ಲೀಲಾ. ಮನೆಯಲ್ಲಿ ಬಡತನವಿದ್ದುದರಿಂದ ಪೋಷಕರು ತಮ್ಮ ಮಗುವನ್ನು ಬಂಧುವೊಬ್ಬರಿಗೆ ಸಾಕಲು ಕೊಟ್ಟರು. ಬಂಧುಗಳ ಮನೆಯಲ್ಲೂ ಬಡತನವಿತ್ತು. ಹಾಗಾಗಿ ಲೀಲಾ 7ನೇ ವಯಸ್ಸಿಗೆ 5 ರೂಪಾಯಿ ಸಂಬಳಕ್ಕೆ ಮನೆಗೆಲಸಕ್ಕೆ ಸೇರಿಕೊಳ್ಳಬೇಕಾಯ್ತು. ಇದರ ಮಧ್ಯೆ ಲೀಲಾಗೆ ವಿಪರೀತ ಸಿನಿಮಾ ಹುಚ್ಚು. ಬೆಳ್ತಂಗಡಿಯ ಟೆಂಟ್ ಸಿನಿಮಾಗಳಲ್ಲಿ ಸಿನಿಮಾ ನೋಡುತ್ತಾ ತಾವೂ ಚಿತ್ರನಟಿಯಾಗಬೇಕೆಂದು ಕನಸು ಕಂಡರು.
ಸಿನಿಮಾ ನಟಿಯಾಗಬೇಕೆಂದು ಗಟ್ಟಿ ನಿರ್ಧಾರ ಮಾಡಿದ ಲೀಲಾ ಚಿಕ್ಕಮ್ಮನೊಂದಿಗೆ ಮೈಸೂರಿಗೆ ತೆರಳಿದರು. ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋದಲ್ಲಿ ಚಿತ್ರನಿರ್ದೇಶಕ ಶಂಕರ್ ಸಿಂಗ್ ಅವರಲ್ಲಿ ನಟಿಯಾಗಬೇಕೆನ್ನುವ ತಮ್ಮ ಆಸೆಯನ್ನು ಅರುಹಿದರು. ಶಂಕರ್ ಸಿಂಗ್ ಅವರು ಲೀಲಾಗೆ ರಂಗಭೂಮಿ ನಟ ಸುಬ್ಬಯ್ಯನಾಯ್ಡು ಅವರನ್ನು ಕಾಣುವಂತೆ ಸಲಹೆ ಮಾಡಿದರು. ಲೀಲಾರ ಆಸಕ್ತಿಯನ್ನು ಕಂಡ ಸುಬ್ಬಯ್ಯನಾಯ್ಡು 10 ರೂಪಾಯಿ ಸಂಬಳಕ್ಕೆ ಅವರನ್ನು ತಮ್ಮ ನಾಟಕ ಕಂಪನಿಗೆ ಸೇರಿಸಿಕೊಂಡರು. ಚಿಕ್ಕ – ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಕ್ರಮೇಣ ದೊಡ್ಡ ಪಾತ್ರಗಳಿಗೆ ಬಡ್ತಿ ಪಡೆದರು. ನಿಧಾನವಾಗಿ ಅಭಿನಯ ಕಲೆ ಕರಗತವಾಯ್ತು.
1949ರಲ್ಲಿ ‘ನಾಗಕನ್ನಿಕಾ’ ಚಿತ್ರದ ಸಖಿಯ ಪಾತ್ರದ ಮೂಲಕ ಅವರ ಬೆಳ್ಳಿತೆರೆ ಅಭಿಯಾನಕ್ಕೆ ಚಾಲನೆ ಸಿಕ್ಕಿತು. ಮುಂದೆ ಸುಬ್ಬಯ್ಯನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಕಯಾದುವಿನ ಸಖಿಯಾಗಿ ನಟಿಸಿದರು. ‘ಮಾಂಗಲ್ಯ ಯೋಗ’ (1958) ಚಿತ್ರದ ಮೂಲಕ ನಾಯಕನಟಿಯಾದರು. ಈ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅವರ ಹೆಸರು ‘ಲೀಲಾಕಿರಣ್’ ಎಂದಿದೆ. ಡಾ ರಾಜಕುಮಾರ್ ಅವರೊಂದಿಗೆ ಲೀಲಾವತಿ ನಟಿಸಿದ ಮೊದಲ ಸಿನಿಮಾ ‘ರಾಣಿ ಹೊನ್ನಮ್ಮ’ (1960). ಆದರೆ ಮೊದಲು ಬಿಡುಗಡೆಯಾದ ಸಿನಿಮಾ ‘ರಣಧೀರ ಕಂಠೀರವ’. ಈ ಎರಡು ಚಿತ್ರಗಳ ನಂತರ ರಾಜ್ – ಲೀಲಾವತಿ ಜೋಡಿ ಜನಪ್ರಿಯವಾಯ್ತು.
1960ರಿಂದ 1975ರವರೆಗೆ ತೆರೆಕಂಡ ರಾಜ್ – ಲೀಲಾವತಿ ಜೋಡಿಯ ಚಿತ್ರಗಳು ದೊಡ್ಡ ಯಶಸ್ಸು ಕಂಡವು. ರಾಜ್‌ರ ಜೋಡಿಯಾಗಿ ಅವರು ನಟಿಸಿದ ಕೊನೆಯ ಸಿನಿಮಾ ‘ಭಕ್ತ ಕುಂಬಾರ’ (1974). ರಾಜ್‌ರ ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ನಟಿಸಿದರು. ಲೀಲಾವತಿಯವರು ರಾಜ್ ಅಭಿನಯದ 47 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕನಟಿಯಾಗಿ ಜನಪ್ರಿಯತೆ ಗಳಿಸಿದ ಅವರು ಮುಂದೆ ಪೋಷಕ ಕಲಾವಿದೆಯಾಗಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದರು. ಗೆಜ್ಜೆಪೂಜೆ, ಸಿಪಾಯಿ ರಾಮು, ಮಹಾತ್ಯಾಗ, ಪ್ರೇಮಮಯಿ, ವಾತ್ಸಲ್ಯ, ಮದುವೆ ಮಾಡಿನೋಡು, ವೀರಕೇಸರಿ, ಡಾಕ್ಟರ್ ಕೃಷ್ಣ.. ಪೋಷಕ ಕಲಾವಿದೆಯಾಗಿ ಅವರು ಅಭಿನಯಿಸಿದ ಕೆಲವು ಪ್ರಮುಖ ಸಿನಿಮಾಗಳು. ಕೆಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 70 – 80ರ ದಶಕಗಳಲ್ಲಿ ಸಿನಿಮಾಗಳ ಜೊತೆಜೊತೆಗೆ ಅವರು ನಾಡಿನ ಪ್ರಮುಖ ನಾಟಕ ಕಂಪನಿಗಳ ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದರು.
ಲೀಲಾವತಿ ಪುತ್ರ ವಿನೋದ್ ರಾಜ್ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಚಿತ್ರದೊಂದಿಗೆ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾದರು. ಪುತ್ರನಿಗಾಗಿ ಲೀಲಾವತಿ ಕಾಲೇಜ್ ಹೀರೋ, ಕನ್ನಡದ ಕಂದ, ಯಾರದು? ಚಿತ್ರಗಳನ್ನು ನಿರ್ಮಿಸಿದ್ದಾರೆ. ಚಿತ್ರರಂಗ, ರಂಗಭೂಮಿಯ ಸಮಗ್ರ ಸಾಧನೆಗಾಗಿ ರಾಜ್ಯ ಸರ್ಕಾರ ಲೀಲಾವತಿ ಅವರಿಗೆ ಅತ್ಯುನ್ನತ ಡಾ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದೆ. ತುಮಕೂರು ವಿಶ್ವವಿದ್ಯಾಲಯ 2009ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ನೆಲಮಂಗಲದ ಬಳಿಯ ತೋಟದ ಮನೆಯಲ್ಲಿ ಪುತ್ರನೊಂದಿಗೆ ವಾಸವಿದ್ದ ಅವರು ಕೆಲವು ತಿಂಗಳುಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಸಂಜೆ ಇಹಲೋಕ ತ್ಯಜಿಸಿದ್ದು, ಅವರ ಅಗಲಿಕೆಗೆ ಚಿತ್ರರಂಗದವರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.