ನಟ ಅಂಬರೀಶ್‌ ಅವರಿಗೆ ಸಾಲು, ಸಾಲು ಯಶಸ್ವೀ ಸಿನಿಮಾಗಳನ್ನು ನಿರ್ದೇಶಿಸಿದ ಎ ಟಿ ರಘು ಅಗಲಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತೊಂಬತ್ತರ ದಶಕದ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರನಿರ್ದೇಶಕ ಎ ಟಿ ರಘು (77 ವರ್ಷ) ಅಗಲಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ (ಮಾರ್ಚ್‌ 20) ಇಹಲೋಕ ತ್ಯಜಿಸಿದರು. ಕನ್ನಡ ಚಿತ್ರರಂಗ ಕಂಡ ಮೇರು ಚಿತ್ರನಿರ್ದೇಶಕ ವೈ ಆರ್‌ ಸ್ವಾಮಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದವರು ಎ ಟಿ ರಘು. ‘ನ್ಯಾಯ ನೀತಿ ಧರ್ಮ’ (1980) ಚಿತ್ರದ ಮೂಲಕ ಅವರು ಸ್ವತಂತ್ರ್ಯ ನಿರ್ದೇಶಕರಾದರು. ಅಂಬರೀಶ್‌, ಆರತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಯಶಸ್ವಿಯಾಯ್ತು. ಇದಾದ ನಂತರ ಸಾಲು, ಸಾಲು ಯಶಸ್ವೀ ಸಿನಿಮಾಗಳನ್ನು ನೀಡಿದರು ರಘು. ಅಂಬರೀಶ್‌ ಅವರಿಗೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಮಂಡ್ಯದ ಗಂಡು’, ಈ ಜೋಡಿಯ ಸೂಪರ್‌ಹಿಟ್‌ ಸಿನಿಮಾ. ಆಶಾ, ಅವಳ ನೆರಳು, ಗೂಂಡಾ ಗುರು, ಅಂತಿಮ ತೀರ್ಪು, ಮೈಸೂರು ಜಾಣ, ಮಿಡಿದ ಹೃದಯಗಳು… ಅಂಬರೀಶ್‌ರಿಗೆ ರಘು ನಿರ್ದೇಶಿಸಿದ ಪ್ರಮುಖ ಸಿನಿಮಾಗಳು.

ರಜನೀಕಾಂತ್‌ ಅವರಿಗಾಗಿ ರಘು ಅವರು ‘ಮೇರಿ ಅದಾಲತ್‌’ (1984) ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ‘ಕಟ್ಟು ರಾಣಿ’, ಅವರ ನಿರ್ದೇಶನದ ಮಲಯಾಳಂ ಸಿನಿಮಾ. ಐನ್‌ಮನೆ, ಪೊಂಬಲ್ಚ, ತಮಾನೆ, ಗೆಜ್ಜೆ ತಂಡ್‌, ಜಮ್ಮಭೂಮಿ, ನಂಗ ಕೊಡವ… ಕೊಡವ ಸೀರಿಯಲ್‌ಗಳನ್ನು ನಿರ್ದೇಶಿಸಿದ್ದಾರೆ. ವಾರ್ತಾ ಇಲಾಖೆಗೆ ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಿರುವ ಅವರು ‘ರಾಮಾಯಣ’ ಕಿರುತೆರೆ ಸರಣಿಗಾಗಿ ಚಿತ್ರಸಾಹಿತಿ ಆರ್‌ ಎನ್‌ ಜಯಗೋಪಾಲ್‌ ಅವರೊಂದಿಗೆ ಕೆಲಸ ಮಾಡಿದ್ದರು. ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಬೆಂಗಳೂರು ದೂರದರ್ಶನದ ಚಂದನ ಪ್ರಶಸ್ತಿ ಸೇರಿದಂತೆ ರಘು ಅವರಿಗೆ ಹಲವು ಗೌರವಗಳು ಸಂದಿವೆ.

LEAVE A REPLY

Connect with

Please enter your comment!
Please enter your name here