ದಯಾಳ್‌ ಪದ್ಮನಾಭನ್‌ ನಿರ್ಮಾಣದ ‘ಕಪಟಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ಜಟ್ಟ’ ಸಿನಿಮಾ ಖ್ಯಾತಿಯ ಸುಕೃತಾ ವಾಗ್ಲೆ ಈ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ರವಿಕಿರಣ್‌ ಮತ್ತು ಚೇತನ್‌ ಎಸ್‌ ಪಿ ನಿರ್ದೇಶನದ ಸಿನಿಮಾ ಇದೇ ಆಗಸ್ಟ್‌ 23ರಂದು ತೆರೆಕಾಣಲಿದೆ.

”ಇದು ಡಾರ್ಕ್ ನೆಟ್ ಕಥಾಹಂದರದ ಸಿನಿಮಾ. ಕನ್ನಡದಲ್ಲಿ ‘ಗುಲ್ಟೂ’ ಚಿತ್ರದ ನಂತರ ಈ ಜಾನರ್‌ನ ಚಿತ್ರ ಬಂದಿರಲಿಲ್ಲ. ಇನ್ನು, ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತು ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. ‘ಕಪಟಿ’ ಚಿತ್ರವನ್ನು ಇತ್ತೀಚೆಗೆ ಸ್ನೇಹಿತರ ಜೊತೆ ನೋಡಿದೆ. ಚೆನ್ನಾಗಿ ಬಂದಿದೆ‌” ಎನ್ನುತ್ತಾರೆ ಈ ಚಿತ್ರದ ನಿರ್ಮಾಪಕ ದಯಾಳ್‌ ಪದ್ಮನಾಭನ್‌. ತಮ್ಮ ಡಿ ಪಿಕ್ಚರ್ಸ್‌ ಬ್ಯಾನರ್‌ನಡಿ ಅವರು ‘ಕಪಟಿ’ ಸಿನಿಮಾ ನಿರ್ಮಿಸಿದ್ದಾರೆ. ಇದು ಅವರ ಬ್ಯಾನರ್‌ನಡಿ ತಯಾರಾಗಿರುವ ಹನ್ನೆರೆಡನೇ ಸಿನಿಮಾ. ಈ ಹಿಂದಿನ ಹನ್ನೊಂದು ಚಿತ್ರಗಳನ್ನು ಅವರೇ ನಿರ್ದೇಶಿಸಿದ್ದರು. ಈ ಬಾರಿ ನಿರ್ಮಾಣದ ಜವಾಬ್ದಾರಿಯನ್ನಷ್ಟೇ ಹೊತ್ತಿದ್ದು, ರವಿಕಿರಣ್‌ ಮತ್ತು ಚೇತನ್‌ ಎಸ್‌ ಪಿ ಅವರಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ.

ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಚಿತ್ರದ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಿಂದೆ ‘ಕೋಮ’ ಸಿನಿಮಾ ನಿರ್ದೇಶಿಸಿದ್ದ ರವಿಕಿರಣ್‌ ಮತ್ತು ಚೇತನ್‌ ಎಸ್‌ ಪಿ ಅವರಿಗೆ ಇದು ಎರಡನೇ ಸಿನಿಮಾ. ‘ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರೂ ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥಾಹಂದರ’ ಎನ್ನುತ್ತಾರೆ ನಿರ್ದೇಶಕದ್ವಯರು. ‘ಜಟ್ಟ’ ಸಿನಿಮಾ ಖ್ಯಾತಿಯ ಸುಕೃತಾ ವಾಗ್ಲೆ ಬಹಳ ವರ್ಷಗಳ ನಂತರ ‘ಕಪಟಿ’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಇದೇ ಆಗಸ್ಟ್‌ 23ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here