ಐದು ಪ್ರಶ್ನೆ

ನಟಿ ರಂಜಿನಿ ರಾಘವನ್‌

ಮೊನ್ನೆ ನೀವು ರಚಿಸಿರುವ ‘ಕತೆಡಬ್ಬಿ’ ಕಥಾಸಂಕಲನ ಬಿಡುಗಡೆಯಾಯ್ತು. ಬರವಣಿಗೆ ಶುರುವಾಗಿದ್ದು ಯಾವಾಗ?

ಓದು, ಬರಹ ಚಿಕ್ಕಂದಿನಿಂದಲೂ ಜೊತೆಯಾಗಿದೆ. ಶಾಲೆ – ಕಾಲೇಜುಗಳಲ್ಲಿ ಆಯೋಜನೆಗೊಳ್ಳುತ್ತಿದ್ದ ಪ್ರಬಂಧ ಸ್ಪರ್ಧೆಗಳು ಬರವಣಿಗೆಗೆ ಮೊನಚು ನೀಡಿದವು. ಆಗಾಗ ಕೆಲವು ಲೇಖನಗಳನ್ನು ಬರೆದಿದ್ದಿದೆ. ನನ್ನ ಬದುಕಿನ ಅನುಭವಗಳ ಜೊತೆ ಕಲ್ಪನೆಗಳ ಸಾಕಾರವೇ ಈ ‘ಕತೆಡಬ್ಬಿ’

‘ಕತೆಡಬ್ಬಿ’ಯಲ್ಲಿನ ಕತೆಗಳಲ್ಲಿನ ವಸ್ತು ಯಾವುದು?

ಪ್ರಮುಖವಾಗಿ ಯುವ ಮನಸ್ಸುಗಳ ಭಾವನೆಗಳೇ ಕತೆಗಳ ಜೀವಾಳ. ಪುಟ್ಟ ಊರಿನಿಂದ ಕೆಲಸಕ್ಕೆಂದು ನಗರಕ್ಕೆ ವಲಸೆ ಬರುವ ಯುವಕ – ಯುವತಿಯರು, ತಮ್ಮದಲ್ಲದ ಜಗತ್ತಿಗೆ ಹೊಂದಿಕೊಳ್ಳುವ ಸಂದರ್ಭದಲ್ಲಿನ ಅವರ ಮಾನಸಿಕ ತೊಳಲಾಟ, ಮಹಿಳಾ ಸ್ವಾವಲಂಬನೆ… ಹೀಗೆ ಯುವ ಮನಸ್ಸುಗಳು, ಭಾವನೆಗಳು ‘ಕತೆಡಬ್ಬಿ’ಯಲ್ಲಿವೆ.

ನಿಮ್ಮಿಷ್ಟದ ಲೇಖಕರು?

ಪೂರ್ಣಚಂದ್ರ ತೇಜಸ್ವಿ ನನ್ನಿಷ್ಟದ ಲೇಖಕರು. ನಾನು ಇಂದು ಕಥಾಸಂಕಲನ ಹೊರತಂದಿದ್ದೇನೆ ಎಂದರೆ ಅದಕ್ಕೆ ಮೂಲ ಪ್ರೇರಣೆ ತೇಜಸ್ವಿಯವರೇ.

ಸದ್ಯ ಬಿಡುಗಡೆಗೆ ಸಿದ್ಧವಿರುವ ನಿಮ್ಮ ಸಿನಿಮಾಗಳು?

‘ಟಕ್ಕರ್‌’, ನಟ ದಿಗಂತ್‌ ಜೊತೆಗಿನ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ಆಂಥಾಲಜಿ ಸಿನಿಮಾದ ‘ಆದ್ದರಿಂದ’ದಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಬಿಡುಗಡೆಯಾಗಲಿವೆ.

ನಟನೆ, ಓದು ಜೊತೆಗೆ ಇತರೆ ಹವ್ಯಾಸ..

ಚಿಕ್ಕಂದಿನಿಂದಲೂ ಕರ್ನಾಟಕ ಶಾಸ್ತ್ರೀಯ ಸಂಗೀತ ನನ್ನ ಆಪ್ತ ಸಂಗಾತಿ. ಕಾಲೇಜು ದಿನಗಳಲ್ಲಿ ರಂಗಭೂಮಿ ನಂಟು ಸಿಕ್ಕಿತ್ತು. ನಟಿಯಾಗಿ ರೂಪುಗೊಳ್ಳುವಲ್ಲಿ ರಂಗಭೂಮಿ ಅನುಭವ ನೆರವಿಗೆ ಬಂತು.

ತಮ್ಮ ನೆಚ್ಚಿನ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಚಿತ್ರದ ಜೊತೆ ರಂಜಿನಿ

LEAVE A REPLY

Connect with

Please enter your comment!
Please enter your name here