ನಟ ಕಾರ್ತೀಕ್‌ ಜಯರಾಂ ಅಲಿಯಾಸ್‌ ಜೆಕೆ ಈಗ ಬಾರ್‌ ಟೆಂಡರ್‌ ಆಗಿದ್ದಾರೆ. ಹೊಸ ಸಿನಿಮಾ ‘ದಿ ವೀರ್‌’ನಲ್ಲಿ ಬಾರ್‌ ಟೆಂಡರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಹಿತ್‌ ಆರ್‌ ನಾಯ್ಕ್‌ ನಿರ್ದೇಶನದ ಕ್ರೈಂ ಥ್ರಿಲ್ಲರ್‌ ಜಾನರ್‌ ಚಿತ್ರವಿದು.

ಬೆಳ್ಳಿತೆರೆಯಲ್ಲಿ ವಿಲನ್‌ ಆಗಿ ಮಿಂಚಿದ ನಂತರ ಕಿರುತೆರೆಯ ‘ಅಶ್ವಿನಿ ನಕ್ಷತ್ರ’ ಸೀರಿಯಲ್‌ನಲ್ಲಿ ಸಖತ್‌ ಹೆಸರು ಮಾಡಿದ ನಟ ಕಾರ್ತಿಕ್‌ ಜಯರಾಮ್‌. ಹಲವಾರು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ಕಾರ್ತೀಕ್‌ ಜಯರಾಮ್‌ ಅವರ ಹೊಸ ಸಿನಿಮಾ ಅನೌನ್ಸ್‌ ಆಗಿದೆ. ಅವರು ನಾಯಕನಾಗಿ ಅಭಿನಯಿಸುತ್ತಿರುವ ‘ದಿ ವೀರ್‌’ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಿನ್ನೆ ಅಂದರೆ ಮೇ 1ರಂದು ನಟನ ಹುಟ್ಟುಹಬ್ಬವಿತ್ತು. ಈ ಹಿನ್ನಲೆಯಲ್ಲಿ ಚಿತ್ರತಂಡ ನಟನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.

‘ದಿ ವೀರ್‌’ ಸಿನಿಮಾ ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಆಗಿದ್ದು, ಇದರಲ್ಲಿ ಜೆಕೆ ಬಾರ್‌ ಟೆಂಡರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಪೋಸ್‌ ಕೊಟ್ಟಿರುವ ಜೆಕೆ ಲುಕ್ಸ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಚಿತ್ರದಲ್ಲಿ ಜೆಕೆ ಮೂಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ಕಾರ್ತಿಕ್‌ ಜಯರಾಮ್‌ ಬಾರ್‌ ಟೆಂಡರ್‌ ಕಾರ್ಯವೈಖರಿ ಕಲಿತಿದ್ದಾರಂತೆ. ಸಿನಿಮಾದಲ್ಲಿನ ಪಾತ್ರಕ್ಕಾಗಿ ಅಗತ್ಯವಿದ್ದ ಕಾರಣಕ್ಕೆ ತರಬೇತಿ ಪಡೆದಿರುವುದಾಗಿ ನಟ ಹೇಳಿ ಕೊಂಡಿದ್ದಾರೆ.

ಜೆಕೆ ನಟಿಸುತ್ತಿರುವ ಈ ಹೊಸ ಸಿನಿಮಾದ ಟೈಟಲ್‌ ಹಾಗೂ ಪೋಸ್ಟರ್‌ ಸಖತ್‌ ಕ್ಯಾಚಿಯಾಗಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ನಿರ್ದೇಶಕ ಲೋಹಿತ್ ಅವರ ಚೊಚ್ಚಲ ಪ್ರಯತ್ನ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ‘ವೀರ್’ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವೀರ್ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್ ಮತ್ತು ಬಿಗ್‌ ಬಾಸ್‌ ಖ್ಯಾತಿಯ ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ.

ರಾಜರಾಜೇಶ್ವರಿ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಗೀತಾ ಜಯಶ್ರೀನಿವಾಸನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಅವರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ನೀಡಿರುವ ಹಾಡುಗಳಿವೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

LEAVE A REPLY

Connect with

Please enter your comment!
Please enter your name here