ಕಾರಣಾಂತರಗಳಿಂದ ನನಗುದಿಗೆ ಬಿದ್ದಿದ್ದ ‘ಗ್ರಾಮಾಯಣ’ ಸಿನಿಮಾಗೆ ಮತ್ತೆ ಚಾಲನೆ ಸಿಗುತ್ತಿದೆ. ಕೆ ಪಿ ಶ್ರೀಕಾಂತ್‌ ಮತ್ತು ಮನೋಹರ್‌ ನಾಯ್ಡು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ದೇವನೂರು ಚಂದ್ರು ನಿರ್ದೇಶನದಲ್ಲಿ ವಿನಯ್‌ ರಾಜಕುಮಾರ್‌ ನಟಿಸುತ್ತಿರುವ ಚಿತ್ರವಿದು.

‘ಈ ಸಿನಿಮಾ ಮೂಲಕ ನಾವು ನೆಲದ ಸೊಗಡಿನ ಕತೆಯನ್ನು ಕನ್ನಡಿಗರಿಗೆ ಹೇಳಲಿದ್ದೇವೆ. ನಿರ್ದೇಶಕರು ತುಂಬಾ ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ ಆಚಾರ – ವಿಚಾರಗಳನ್ನು ಒಳಗೊಂಡ ಸದಭಿರುಚಿಯ ಚಿತ್ರವಾಗಲಿದೆ. ನಿರ್ದೇಶಕರಿಗೆ ನಾವು ಸಂಪೂರ್ಣ ಸ್ವತಂತ್ರ್ಯ ಕೊಟ್ಟಿದ್ದೇವೆ. ನಾಡಿದ್ದು ಮುಹೂರ್ತದಂದು ನಿರ್ದೇಶಕರೇ ಚಿತ್ರದ ತಾರಾಬಳಗ ಮತ್ತು ತಂತ್ರಜ್ಞರ ಕುರಿತು ಸಂಪೂರ್ಣ ಮಾಹಿತಿ ನೀಡಿಲಿದ್ದಾರೆ’ ಎನ್ನುತ್ತಾರೆ ಲಹರಿ ವೇಲು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ‘ಗ್ರಾಮಾಯಣ’ ಚಿತ್ರ ನಿರ್ಮಾಣದ ಹೊಣೆ ಈಗ ಅವರ ಹೆಗಲೇರಿದೆ. ಲಹರಿ ಸಂಸ್ಥೆಯ ಜೊತೆ ಕೆ ಪಿ ಶ್ರೀಕಾಂತ್‌ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ನಾಡಿದ್ದು ಜೂನ್‌ 8ರಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಗ್ರಾಮಾಯಣ’ಕ್ಕೆ ಮುಹೂರ್ತ ನೆರವೇರಲಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ಶಿವರಾಜಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ, ಧ್ರುವ ಸರ್ಜಾ, ದುನಿಯಾ ವಿಜಯ್‌, ಶ್ರೀಮುರಳಿ, ವಿಜಯ ರಾಘವೇಂದ್ರ, ಅಶ್ವಿನಿ ಪುನೀತ್‌ ರಾಜಕುಮಾರ್‌ ಮುಂತಾದವರು ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವನೂರು ಚಂದ್ರು ನಿರ್ದೇಶನದಲ್ಲಿ ಈ ಹಿಂದೆ ಸೆಟ್ಟೇರಿದ್ದ ಚಿತ್ರಕ್ಕೆ ಮೂರು ವಾರಗಳ ಚಿತ್ರೀಕರಣವೂ ನಡೆದಿತ್ತು. ಕೋವಿಡ್‌ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾದಾಗ ಚಿತ್ರ ಸ್ಥಗಿತಗೊಂಡಿತು. ಚಿತ್ರದ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸುವುದು ಖಾತ್ರಿಯಾಗಿತ್ತು. ನಿರ್ಮಾಪಕರು ಬದಲಾಗಿದ್ದು ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವುದು ಮುಹೂರ್ತದಂದು ತಿಳಿಯಲಿದೆ.

ಲಹರಿ ಸಂಸ್ಥೆಯವರು ಸದ್ಯ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ಉಪೇಂದ್ರ ಅವರು ಚಿತ್ರವನ್ನು ತಾವಂದುಕೊಂಡ ಹಾಗೆ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ಸಿಗುತ್ತಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಎರಡು ಹಾಡುಗಳನ್ನು ಚಿತ್ರಿಸಿದ್ದ ಇನ್ನೆರೆಡು ಹಾಡುಗಳ ಚಿತ್ರೀಕರಣ ಬಾಕಿ ಇದೆ’ ಎಂದು ‘UI’ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ಲಹರಿ ವೇಲು. ಇನ್ನು ನಟ ವಿನಯ್‌ ರಾಜಕುಮಾರ್‌ ಸದ್ಯ ‘ಒಂದು ಸರಳ ಪ್ರೇಮಕಥೆ’ ಚಿತ್ರೀಕರಣದಲ್ಲಿದ್ದಾರೆ. ಅವರ ‘ಪೆಪೆ’ ಮತ್ತು ‘ಅದೊಂದಿತ್ತು ಕಾಲ’ ಸಿನಿಮಾಗಳು ಪೋಸ್ಟ್‌ ಪ್ರೊಡಕ್ಷನ್‌ನಲ್ಲಿವೆ. ನಾಡಿದ್ದು ಅವರ ‘ಗ್ರಾಮಾಯಣ’ ಚಿತ್ರಕ್ಕೆ ಚಾಲನೆ ಸಿಗಲಿದ್ದು, ಇದು ಅವರ ವೃತ್ತಿ ಬದುಕಿನ ಅಪರೂಪದ ಚಿತ್ರವಾಗಲಿದೆ ಎನ್ನುವ ಸೂಚನೆ ಸಿಗುತ್ತದೆ.

https://youtu.be/8uLAuXMZ4Pk
ಹಿಂದೆ ‘ಗ್ರಾಮಾಯಣ’ ಸಿನಿಮಾ ಘೋಷಣೆಯಾದಾಗ ರಿಲೀಸ್‌ ಆಗಿದ್ದ ಟೀಸರ್‌ ಇದು

LEAVE A REPLY

Connect with

Please enter your comment!
Please enter your name here