‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’ ಚಿತ್ರಗಳ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದೊಂದು ಛಾಪು ಮೂಡಿಸಿದವರು ಡಿ ಸತ್ಯಪ್ರಕಾಶ್‌. ಇದೀಗ ಅವರ ನಿರ್ದೇಶನ, ನಿರ್ಮಾಣದಲ್ಲಿ ನೂತನ ಚಿತ್ರವೊಂದು ಸೆಟ್ಟೇರಲಿದೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಎರಡು ಪ್ರಮುಖ ಪಾತ್ರಗಳಿದ್ದು, ಒಂದು ಪಾತ್ರವನ್ನು ಸ್ವತಃ ಸತ್ಯಪ್ರಕಾಶ್‌ ನಿರ್ವಹಿಸಲಿದ್ದಾರೆ.

ಚಿತ್ರನಿರ್ದೇಶಕ ಡಿ ಸತ್ಯಪ್ರಕಾಶ್‌ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ನಂತರ ಅವರು ಕೈಗೆತ್ತಿಕೊಳ್ಳಲಿರುವ ಈ ಚಿತ್ರ ಅವರದ್ದೇ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ. ಒಂದೂವರೆ ವರ್ಷದ ಹಿಂದೆ ಅವರು ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌ ವಿತರಣೆ ಸಂಸ್ಥೆ ಆರಂಭಿಸಿದ್ದರು. ಈ ಸಂಸ್ಥೆಯಡಿ ಇಲ್ಲಿಯವರೆಗೆ 35ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ. ಕೆಲ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಇದೀಗ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಫ್ಯಾಂಟಸಿ ಮತ್ತು ಕಮರ್ಷಿಯಲ್‌ ಎಲಿಮೆಂಟ್‌ಗಳಿರುವ ಈ ಸಿನಿಮಾದಲ್ಲಿ ನಕ್ಕು ನಗಿಸುವಂತಹ ಕತೆ ಹೇಳಲಿದ್ದೇವೆ ಎನ್ನುತ್ತಾರವರು. ವಿಶೇಷವೆಂದರೆ ಈ ಚಿತ್ರದೊಂದಿಗೆ ಅವರು ನಟನಾಗಿಯೂ ತೆರೆಗೆ ಪರಿಚಯವಾಗುತ್ತಿರುವುದು! ಚಿತ್ರದ ಎರಡು ಪ್ರಮುಖ ಪಾತ್ರಗಳ ಪೈಕಿ ಒಂದು ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಸತ್ಯಪ್ರಕಾಶ್‌ ನಿರ್ದೇಶನದ ಈ ಹಿಂದಿನ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಚಿತ್ರದಲ್ಲಿ ನಟಿಸಿದ್ದ ಅಥರ್ವ ಪ್ರಕಾಶ್‌ ನೂತನ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ಅವರದ್ದೇ ಸತ್ಯಪಿಕ್ಚರ್ಸ್‌ ಬ್ಯಾನರ್‌ನಡಿ ತಯಾರಾಗಲಿದೆ. ಸದ್ಯಕ್ಕೆ ಸಿನಿಮಾ ಅನೌನ್ಸ್‌ಮೆಂಟ್‌ ಮಾತ್ರ ಈಗಿದ್ದು, ಸತ್ಯಪ್ರಕಾಶ್‌ ಅವರ ಹಿಂದಿನ ಸಿನಿಮಾಗಳಲ್ಲಿಕೆಲಸ ಮಾಡಿದ ತಂತ್ರಜ್ಞರ ತಂಡ ಈ ಚಿತ್ರದಲ್ಲಿಯೂ ಮುಂದುವರೆಯಲಿದೆ. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು ಸಿನಿಮಾದ ಭಾಗವಾಗಲಿದ್ದಾರೆ. ಸದ್ಯಕ್ಕೆ ಸಿನಿಮಾದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಟೀಸರ್‌ ಮೂಲಕ ಟೈಟಲ್‌ ಅನೌನ್ಸ್‌ ಮಾಡಲಿದ್ದಾರಂತೆ. ಇನ್ನು ಸತ್ಯಪ್ರಕಾಶ್‌ ಕತೆ ರಚಿಸಿರುವ ‘ಕಾಲಾ ಪತ್ಥರ್‌’ ಮತ್ತು ‘ಅನ್‌ಲಾಕ್‌ ರಾಘವ’ ಇದೇ ವರ್ಷ ಬಿಡುಗಡೆಯಾಗಲಿವೆ. ‘ಈಗ ಮಾಡಲು ಹೊರಟಿರುವ ಕತೆಯನ್ನು ನಾನೇ ಬರೆದಿದ್ದೇನೆ. ಚಿತ್ರದಲ್ಲಿಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿದ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಒಂದು ಭಾವನಾತ್ಮಕ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ’ ಎನ್ನುತ್ತಾರೆ ಸತ್ಯಪ್ರಕಾಶ್‌.

LEAVE A REPLY

Connect with

Please enter your comment!
Please enter your name here