ವಿಶಿಷ್ಟ ಸಿನಿಮಾ ಭಾಷೆಯ ಮೂಲಕ ಬೆಳ್ಳಿತೆರೆಗೆ ಮೇಲೆ ತಮ್ಮದೇ ಆದ ಛಾಪು ಮೂಡಿಸಿದವರು ದಿನೇಶ್ ಬಾಬು. ಅವರ ನಿರ್ದೇಶನದ ‘ಕಸ್ತೂರಿ ಮಹಲ್’ ಮೇ ತಿಂಗಳಲ್ಲಿ ತೆರೆಕಾಣಲಿದೆ. ಬಿಡುಗಡೆಗೆ ಮುನ್ನವೇ ಚಿತ್ರದ ಡಿಜಿಟಲ್ ಹಕ್ಕು ಮಾರಾಟ ಆಗಿದೆ ಎನ್ನುವುದು ಸದ್ಯದ ಸುದ್ದಿ.
ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನ ಹಾಗೂ ಬಹುಭಾಷಾ ನಟಿ ಶಾನ್ವಿ ಶ್ರೀವಾತ್ಸವ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಸ್ತೂರಿ ಮಹಲ್’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ದಿನೇಶ್ ಬಾಬು ಅವರ 50ನೇ ಚಿತ್ರವೂ ಹೌದು. ಪುನೀತ್ ರಾಜಕುಮಾರ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದ್ದು, ಬಿಡುಗಡೆಗೆ ಮುನ್ನವೇ ಚಿತ್ರದ ಡಿಜಿಟಲ್ ಹಕ್ಕು ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಬಿಕರಿಯಾಗಿದೆ. ದಿನೇಶ್ ಬಾಬು ನಿರ್ದೇಶನ ಮತ್ತು ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಸಾನ್ವಿ ಶ್ರೀವಾತ್ಸವ್ ಚಿತ್ರ ಎನ್ನುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ್ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಇತರರು ತಾರಾಬಳಗದಲ್ಲಿದ್ದಾರೆ. ಹಾರರ್ – ಥ್ರಿಲ್ಲರ್ ಕಥಾಹಂದರವಿರುವ ಚಿತ್ರಕ್ಕೆ ದಿನೇಶ್ ಬಾಬು ಅವರೇ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಶ್ರೀಭವಾನಿ ಆರ್ಟ್ಸ್ ಬ್ಯಾನರ್‌ನಲ್ಲಿ ರವೀಶ್ ಆರ್.ಸಿ. ನಿರ್ಮಿಸಿರುವ ಚಿತ್ರಕ್ಕೆ ನವೀನ್ ಆರ್.ಸಿ. ಹಾಗೂ ಅಕ್ಷಯ್ ಸಿ.ಎಸ್. ಸಹ ನಿರ್ಮಾಣವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಹರೀಶ್ ಕೃಷ್ಣ ಸಂಕಲನ ಚಿತ್ರಿಕ್ಕಿದೆ. ಮೊದಲು ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂದು ನಾಮಕರಣ ಮಾಡಲಾಗಿತ್ತು. ರಾಜಕುಮಾರ್ ಅಭಿನಯದ ಮೈಲುಗಲ್ಲು ಚಿತ್ರದ ಶೀರ್ಷಿಕೆಯ ಮರುಬಳಕೆ ಬೇಡವೆಂದು ವರನಟನ ಅಭಿಮಾನಿಗಳು ಹೇಳಿದ್ದರಿಂದ ಚಿತ್ರದ ಶೀರ್ಷಿಕೆ ‘ಕಸ್ತೂರಿ ಮಹಲ್’ ಎಂದಾಯ್ತು. ಇನ್ನು ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದು ರಚಿತಾ ರಾಮ್. ಕಾರಣಾಂತರಗಳಿಂದ ಅವರು ಹೊರನಡೆದಾಗ ಅವರ ಜಾಗಕ್ಕೆ ಸಾನ್ವಿ ಶ್ರೀವಾತ್ಸವ್ ಬಂದರು.