(ಬರಹ : ಕೆ.ಫಣಿರಾಜ್‌, ಹಿರಿಯ ಸಿನಿಮಾ ವಿಮರ್ಶಕ)

ಅಪ್ಪು ಬಾಲಕನಾಗಿರುವಾಗಲೇ, ಅಣ್ಣಾವ್ರ ಸಿನೆಮಾಗಳಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವ ಮೂಲಕ, ಅಣ್ಣಾವ್ರ ಮಗನಾಗಿ ಮನದಲ್ಲಿ ಛಾಪಾಗಿಬಿಟ್ಟಿದ್ದ. ಅಣ್ಣಾವ್ರು ಸಾಮಾಜಿಕವಾಗಿ ಪ್ರತಿನಿಧಿಸಿದ ಹಲವು ಆದರ್ಶಗಳು ಅಪ್ಪುವಿನಲ್ಲೂ ನಮಗೆ ಕಾಣತೊಡಗಿದ್ದೂ, ‘ಬೆಟ್ಟದ ಹೂ’ ಸಿನೆಮಾದ ಮೂಲಕ ಅದನ್ನು ಆತ ಸ್ವತಂತ್ರವಾಗಿ ಪ್ರಕಟಿಸಿ ಬೆರಗು ಹುಟ್ಟಿಸಿದ್ದೂ, ಮನದಾಳದಲ್ಲಿ ಬೇರು ಬಿಟ್ಟಿರಬೇಕು. – ಹಿರಿಯ ಸಿನಿಮಾ ವಿಮರ್ಶಕ ಕೆ.ಫಣಿರಾಜ್ ಅವರ ಬರಹ

ಚಿಕ್ಕಂದಿನಿಂದಲೇ ಸಿಮಾಗಳನ್ನು ನೋಡಿ, ಕಥನಗಳನ್ನು ದೈನಂದಿನ ಭಾಗವೆಂಬಂತೆ ಭಾವಿಸುವ ತಾಯಿ, ಚಿಕ್ಕಮ್ಮ, ಅತ್ತೆ, ಅಕ್ಕಂದಿರ ಸೆರಗಲ್ಲಿ ಬದುಕಿದ ನನಗೆ ಖ್ಯಾತ ನಟರ ‘ಅಭಿಮಾನಿ’ಯಾಗುವುದು ಭಾವ ಜೀವನದ ಭಾಗ. ‘ಅಭಿಮಾನ’ ಎಂಬುದು ಯಾವ ಬಗೆಯ ಸಮಾಜ ಮನೋಸ್ಥಿತಿ ಎನ್ನುವುದು ಸೋಜಿಗ. ನನ್ನ ಹದಿ ಹರೆಯದವರೆಗೂ ‘ಅಣ್ಣಾವ್ರ’ ಅಭಿಮಾನಿಯಾಗಿದ್ದ ನಾನು ಯೌವ್ವನ ಕಾಲದಲ್ಲಿ ಶಂಕರ್ ನಾಗ್‌ ಅಭಿಮಾನಿಯಾದೆ. ಆ ನಂತರ, ಭಿನ್ನ ಬಗೆಯ ಸಿನೆಮಾಗಳ ಪರಿಚಯವಾಗುತ್ತಾ, ಭಾವಾನಾತ್ಮಕ ಅಭಿಮಾನ ಕಡಿಮೆಯಾಗಿ ಸಿನೆಮಾಗಳ ಭೌದ್ಧಿಕತೆ ಕಡೆ ಮನ ವಾಲಿತು. ಇಷ್ಟಾಗಿಯೂ ನಡು ವಯಸ್ಸಿನಲ್ಲಿ ಅಪ್ಪುವಿನ ಬಗ್ಗೆ ಅಭಿಮಾನ ಶುರುವಾಯ್ತು! ನನ್ನ ಹೆಂಡತಿ ಮತ್ತು ಮಗಳೂ ಅಪ್ಪುವಿನ ಅಭಿಮಾನಿಯಾದದ್ದು ಸಂಸಾರ ಸಮಾಗಮದಂತೆ ಕಾಣತೊಡಗಿತು. ತೀರಬಾರದ ವಯಸ್ಸಲ್ಲಿ ಅಪ್ಪು ತೀರಿರುವಾಗ, ಅಪ್ಪುವಿನ ಜೊತೆಗಿರುವ ಭಾವನಾತ್ಮಕ ಸಂಬಂಧದ ಬಗ್ಗೆ ವೇದನೆಯಲ್ಲಿ ಯೋಚಿಸುವಂತೆ ಮಾಡುತ್ತಿದೆ.

ಅಪ್ಪು ಬಾಲಕನಾಗಿರುವಾಗಲೇ, ಅಣ್ಣಾವ್ರ ಸಿನೆಮಾಗಳಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವ ಮೂಲಕ, ಅಣ್ಣಾವ್ರ ಮಗನಾಗಿ ಮನದಲ್ಲಿ ಛಾಪಾಗಿಬಿಟ್ಟಿದ್ದ. ಅಣ್ಣಾವ್ರು ಸಾಮಾಜಿಕವಾಗಿ ಪ್ರತಿನಿಧಿಸಿದ ಹಲವು ಆದರ್ಶಗಳು ಅಪ್ಪುವಿನಲ್ಲೂ ನಮಗೆ ಕಾಣತೊಡಗಿದ್ದೂ, ‘ಬೆಟ್ಟದ ಹೂ’ ಸಿನೆಮಾದ ಮೂಲಕ ಅದನ್ನು ಆತ ಸ್ವತಂತ್ರವಾಗಿ ಪ್ರಕಟಿಸಿ ಬೆರಗು ಹುಟ್ಟಿಸಿದ್ದೂ, ಮನದಾಳದಲ್ಲಿ ಬೇರು ಬಿಟ್ಟಿರಬೇಕು. ಯೌವನದ ಆತನ ಮೊದಲ ಸಿನೆಮಾಗಳು, ಅಷ್ಟೇನೂ ಆತನ ಬಾಲ್ಯದ ಪಾತ್ರ ಚಿತ್ರಗಳಿಗೆ ಹೊಂದಿದುತ್ತಿರಲಿಲ್ಲವಾಗಿ, ಅಭಿಮಾನ ಉಕ್ಕುತ್ತಿರಲಿಲ್ಲ. ಆದರೆ, 2005ರ ನಂತರ ಬಂದ ಆತನ ‘ಅರಸು’, ‘ಮಿಲನ’, ‘ಜಾಕಿ’, ‘ಪೃಥ್ವಿ’, ‘ಪರಮಾತ್ಮ’, ‘ಮೈತ್ರಿ’ ಸಿನೆಮಾಗಳ ಮೂಲಕ ಒಮ್ಮೆಲೇ ಆತ ತುಂಟಾಟ, ಹುಡುಗಾಟ, ಸಂಸಾರದ ಗೋಜಲು, ಮನುಷ್ಯ ಸಂಬಂಧಗಳ ತುಡಿತ ಪ್ರಕಟಿಸುವ ಯುವಕನಾಗಿ ಬೆಳೆದಿರುವ ಬಾಲಕ ಅಪ್ಪು ಕಾಣತೊಡಗಿದ. ‘ಅಯ್ಯೋ! ಇಷ್ಟು ದಿನ ಎಲ್ಲೋಗಿದ್ದೆ!’ ಎಂದು ಕೇಳುವಂತೆ ಮಾಡುವ ಭಾವನೆಗಳನ್ನು ನಮ್ಮಲ್ಲಿ ಚೋದಿಸತೊಡಗಿದ. ಆತನ ಮಾರಾಮಾರಿ ಸಿನೆಮಾಗಳಲ್ಲೂ, ತಮಾಷೆ ಹುಡುಗಾಟದಲ್ಲಿ ಹದಿನಾರು ಹಲ್ಲು ಕಾಣುವಂಥ ನಗುವಿನ ಮೂಲಕ ಬಾಲಕ ಅಪ್ಪು ನಮ್ಮ ಮನೆಯಲ್ಲೇ ಇದ್ದಾನೆ ಎನಿಸುವಂತೆ ಮಾಡತೊಡಗಿದ. 

ಕಿರುತೆರೆಯ ರಿಯಾಲಿಟಿ ಷೋಗಳಲ್ಲಿ, ಯಶಸ್ವಿ ನಾಯಕನ ಗತ್ತು ಗಾಂಭಿರ್ಯವಿಲ್ಲದೆ, ಎದುಗಿರುವ ಸಾಮಾನ್ಯ ಜನರ ಜೊತೆ ಆತ ಅಗಾಧವಾದ ಕುತೂಹಲ, ತುಂಟತನ ಮತ್ತು ಬಿಚ್ಚು ಹೃದಯದಿಂದ ಮಾತನಾಡುವ ಪರಿ ಕಂಡಾಗ, ಅದು ರಂಗಿನಲೋಕದ ಕಪಟ ಅನಿಸದಂತಹ ಆಕೃತಿಯಾಗಿ ಆತ ನಮ್ಮಲ್ಲಿ ಬೆಳೆಯತೊಡಗಿದ. ‘ಅದೆಲ್ಲಾ ಹಣ ಗಳಿಸುವ ಜಾಹಿರಾತು ತೋರಿಕೆ’ ಎಂದು ಕಟುವಾಡಿದರೆ, ‘ನಾವೇ ಹೊಟ್ಟೆಪಾಡಿಗೆ ಲೋಕಜೀತ ಮಾಡೋರು! ಈ ನಮ್ಮ ಹುಡ್ಗನ ಬಗ್ಗೆ ಯಾಕೆ ಕಟುವಾಡಬೇಕು?’ ಎಂದು ಹೊಟ್ಟೆಗೆ ಹಾಕಿಕೊಳ್ಳುವಷ್ಟು ಭಾವನಾತ್ಮಕ ಸಖ್ಯವನ್ನು, ನಾವು ಎಂದು ಕಾಣದ, ಮೈಮುಟ್ಟದ, ತೆರೆಯ ಬಿಂಬ ಕಟ್ಟಿಕೊಡತೊಡಗಿತು. ಆತ ಮಾಡಿದ ಸಮಾಜ ಸೇವೆ, ತೋರಿದ ಸಾಮಾಜಿಕ ಬದ್ಧತೆಗಳ ಬಗ್ಗೆ ಏನೂ ಗೊತ್ತಿರದೆಯೂ, ನಾವು ತೆರೆಯ ಮೇಲಿನ ಬಿಂಬದ ಜೊತೆ ಭಾವನಾತ್ಮಕ ಗುರುತು ಹಚ್ಚಿಕೊಳ್ಳೋದು, ನಮ್ಮ ಮನದ ಉಗ್ರಾಣದಲ್ಲಿ ಹುದುಗಿರುವ ಅಭಿಲಾಷೆಗಳ ತುಡಿತವಾಗಿದ್ದರೆ, ಅಪ್ಪು ನಮ್ಮನ್ನು ಹಾಗೇ ತಟ್ಟಿ ನಿರ್ಗಮಿಸಿರುವನು. ಅವನನ್ನು ಕಳೆದುಕೊಂಡು ನಿಜಕ್ಕೂ ದುಃಖವಾಗಿದೆ ಎಂದರೆ, ಆ ಮಟ್ಟಿಗೆ ಅಪ್ಪು ನಮ್ಮ ಸ್ಥಿತಿಗತಿಯನ್ನು ತಟ್ಟಿ ತೋರಿ ಹೋಗಿರುವನು. ಮಿಸ್ಸ್ ಯು ಅಪ್ಪು

LEAVE A REPLY

Connect with

Please enter your comment!
Please enter your name here