ಹಲವು ವರ್ಷಗಳಿಂದ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿರುವ ನಟ ಕೆಂಪೇಗೌಡ ‘ಎನ್‌ಟಿಆರ್‌’ ಚಿತ್ರದೊಂದಿಗೆ ಹೀರೋ ಆಗುತ್ತಿದ್ದಾರೆ. ಇಲ್ಲಿ ‘ಎನ್‌ಟಿಆರ್‌’ ಅಂದರೆ ‘ನಮ್‌ ತಾಲ್ಲೂಕಿನ ರೂಲರ್‌’!

ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಹಾಸ್ಯನಟರಾಗಿ ನಟಿಸುತ್ತಾ ಕನ್ನಡಿಗರಿಗೆ ಪರಿಚಿತರಾಗಿರುವ ಕೆಂಪೇಗೌಡ ಅವರು ಹೀರೋ ಆಗಿ ಅಭಿನಯಿಸುತ್ತಿರುವ ‘ಎನ್‌ಟಿಆರ್‌’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ನಟ ಪ್ರಜ್ವಲ್ ದೇವರಾಜ್ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು. ಕನ್ನಡ ಚಿತ್ರರಂಗದ ಹಲವು ಗಣ್ಯರು ಸಮಾರಂಭದಲ್ಲಿ ಭಾಗಬಹಿಸಿದ್ದರು. ಇಲ್ಲಿ ‘ಎನ್‌ಟಿಆರ್‌’ ಅಂದರೆ ‘ನಮ್‌ ತಾಲ್ಲೂಕಿನ ರೂಲರ್‌’! ಭರತ್ ಗೌಡ ಮೂವೀಸ್ ಲಾಂಛನದಲ್ಲಿ ಭರತ್ ಗೌಡ ನಿರ್ಮಾಣ ಮಾಡುತ್ತಿರುವ ಚಿತ್ರವನ್ನು ಜಾಕಿ ನಿರ್ದೇಶಿಸುತ್ತಿದ್ದಾರೆ.

“ಕೆಂಪೇಗೌಡ ಅವರ ಜೊತೆ ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರು ಈಗ ನಾಯಕನಾಗುತ್ತಿದ್ದಾರೆ. ಕೆಂಪೇಗೌಡ ಅವರು ದೊಡ್ಡ ನಟರೊಬ್ಬರ ಹೆಸರಿನ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದು, ಅವರಷ್ಟೇ ಕೀರ್ತಿಶಾಲಿಯಾಗಲಿ” ಎಂದು ಪ್ರಜ್ವಲ್ ಹಾರೈಸಿದರು. “ನನ್ನ ನಿರ್ದೇಶನದ ಎರಡನೇ ಚಿತ್ರವಿದು. ಮೊದಲ ನಿರ್ದೇಶನದ ‘ಶೋಕಿವಾಲ’ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಆಗಲೇ ಈ ಚಿತ್ರ ನಿರ್ದೇಶನಕ್ಕೆ ಅವಕಾಶ ಸಿಕ್ಕಿದೆ” ಎಂದು ನಿರ್ದೇಶಕ ಜಾಕಿ ಅವರು ನಿರ್ಮಾಪಕ ಭರತ್ ಗೌಡ ಅವರಿಗೆ ಧನ್ಯವಾದ ಹೇಳಿದರು. “ಇದೊಂದು ಪಕ್ಕಾ ಹಳ್ಳಿ ಸೊಗಡಿರುವ ಮನೋರಂಜನಾ ಚಿತ್ರ. ಹಳ್ಳಿಯಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲಿನ ಕಥೆ. ಫೆಬ್ರವರಿ ಮೊದಲವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ” ಎಂದ ನಿರ್ದೇಶಕ ಜಾಕಿ, ಕಲಾವಿದ ಹಾಗೂ ತಾಂತ್ರಿಕವರ್ಗದ ಪರಿಚಯ ಮಾಡಿಸಿದರು.

ನಟ ಕೆಂಪೇಗೌಡ ಅವರಿಗೆ ಹೀರೋ ಆದ ಸಡಗರವಿತ್ತು. “ನನ್ನ ಮೇಲೆ ನಂಬಿಕೆಯಿಟ್ಟು ನಾಲ್ಕೈದು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸುತ್ತಿರುವ ಭರತ್ ಗೌಡ ಅವರಿಗೆ ಧನ್ಯವಾದ. ಇದೊಂದು ಪಕ್ಕ ಹಳ್ಳಿ ವಾತಾವರಣದ ಸಿನಿಮಾ. ‘ಅಧ್ಯಕ್ಷ’ , ‘ಕಿರಾತಕ’ ಚಿತ್ರಗಳ ಹಾಗೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಾಧುಕೋಕಿಲ, ರವಿಶಂಕರ್, ತಬಲನಾಣಿ, ರಾಜೇಶ್ ನಟರಂಗ ಮುಂತಾದ ಕಲಾವಿದರು ನಮ್ಮ ಸಿನಿಮಾದಲ್ಲಿ ನಟಿಸಲಿದ್ದಾರೆ. ನಾಯಕಿ ಯಾರೆಂಬುದು ಸದ್ಯದಲ್ಲೇ ತಿಳಿಯಲಿದೆ” ಎಂದರು. ಚೇತನ್ ಕುಮಾರ್ ಬರೆದಿರುವ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಪ್ರಶಾಂತ್ ಚಂದ್ರಶೇಖರ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಹಾಗೂ ರಘು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಧುಕೋಕಿಲ, ತಬಲಾನಾಣಿ, ಧರ್ಮಣ್ಣ, ರಾಜೇಶ್ ನಟರಂಗ, ಕಡ್ಡಿಪುಡಿ ಚಂದ್ರು, ಮಾಹಂತೇಶ್, ದೀಪಿಕ, ಚಂದನ ಜಾನಕಿ, ಸುಂದರ್, ಗಣೇಶ್ ರಾವ್, ಪಲ್ಲವಿ, ಮಿಮಿಕ್ರಿ ದಯಾನಂದ್ ರಮೇಶ್ ಭಟ್, ತರಂಗ ವಿಶ್ವ ಮತ್ತಿತರರು ಅಭಿನಯಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here