ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. ಚಿತ್ರರಂಗದ ಸಮಸ್ಯೆಗಳನ್ನು ಪಟ್ಟಿ ಸಲ್ಲಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಕೋರಿದ್ದಾರೆ.

‘ತಮ್ಮ ಅವಧಿಯಲ್ಲಿ ಚಲನಚಿತ್ರೋದ್ಯಮದ ಬೆಳವಣಿಗೆಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದು, ಯಾವತ್ತೂ ಚಿತ್ರೋದ್ಯಮವು ತಮ್ಮನ್ನು ಗೌರವಿಸುತ್ತಾ ಬಂದಿರುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಚಲನಚಿತ್ರೋದ್ಯಮದ ಕೆಳಕಂಡ ಬೇಡಿಕೆಗಳನ್ನು ಈಡೇರಿಸಿಕೊಡುವ ಮೂಲಕ ಕನ್ನಡ ಚಿತ್ರರಂಗ ಉಳಿದು, ಬೆಳೆಯಲು ಸಹಕರಿಸಬೇಕು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅಧ್ಯಕ್ಷರೊಂದಿಗೆ ಮಂಡಳಿಯ ಪದಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ್‌, ಸುಂದರ್ ರಾಜ್, ಕುಶಾಲ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಕೆವಿ ಚಂದ್ರಶೇಖರ್ ಇದ್ದರು. KFCC ಸಲ್ಲಿಸಿದ ಮನವಿ ಪತ್ರದಲ್ಲಿ ಈ ಕೆಳಕಂಡ ಅಂಶಗಳಿವೆ…

  • ನಿರ್ಮಾಪಕರು ಚಿತ್ರ ತಯಾರಿಸಿ, ಪಕ್ಕದ ರಾಜ್ಯದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು, ಇಂದಿಗೂ ನಿರ್ಮಾಪಕರಿಗೆ ಕಷ್ಟಕರವಾಗಿದೆ. ವರ್ಷಕ್ಕೆ ಅಂದಾಜು 350 ಕನ್ನಡ ಚಲನಚಿತ್ರಗಳು ನಿರ್ಮಾಣಗೊಂಡು ಬಿಡುಗಡೆಗೊಳ್ಳುತ್ತಿವೆ. ಆದಕಾರಣ ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ’
  • ರಾಜ್ಯದ ಚಿತ್ರಮಂದಿರಗಳಲ್ಲಿನ ಪ್ರೊಜೆಕ್ಟರ್‌ಗಳು ವಿದೇಶದಿಂದ, ಅದರಲ್ಲೂ ಒಬ್ಬರು, ಇಬ್ಬರು ಸರ್ವೀಸ್ ಪ್ರೊವೈಡರ್‌ನಿಂದ ಪಡೆಯಬೇಕಾಗಿದೆ. ಈ ಕ್ರಮದಿಂದ ಚಿತ್ರಮಂದಿರಗಳು ಇಂದಿಗೂ ಬಾಡಿಗೆ ರೂಪದಲ್ಲಿ ಪಡೆದು ಪ್ರದರ್ಶನ ನಡೆಸುತ್ತಿದ್ದು, ಸ್ವಂತ ಪ್ರೊಜೆಕ್ಟರ್ ಖರೀದಿಸಲು 40-50 ಲಕ್ಷ ರೂ. ಬಂಡವಾಳ ಹೂಡಬೇಕಾಗುತ್ತದೆ. ಈ ರೀತಿಯ ಪ್ರೋತ್ಸಾಹಕ್ಕೆ ತಲಾ ಒಂದು ಪ್ರೊಜೆಕ್ಟರ್ ಖರೀದಿಗೆ 10 ರಿಂದ 15 ಲಕ್ಷ ರೂಪಾಯಿ ಸಹಾಯಧನ ನೀಡಿದರೆ ಪ್ರದರ್ಶಕರು ಸ್ವಾವಲಂಬಿಯಾಗಿ ಉದ್ಯಮವನ್ನು ಬೆಳೆಸಲು ಸಹಾಯವಾಗುತ್ತದೆ. ಆದಕಾರಣ ಪ್ರಾರಂಭಿಕ ಹಂತದಲ್ಲಿ 20 ಕೋಟಿ ರೂಪಾಯಿ ಹಣವನ್ನು ನಿಗದಿಪಡಿಸಿ ಕೊಡಬೇಕಾಗಿ ಕೋರುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ’ ಎಂದು ವಾಣಿಜ್ಯ ಮಂಡಳಿ ಅರ್ಜಿಯಲ್ಲಿ ತಿಳಿಸಿದೆ.

‘ಎಲ್ಲಾ ಸಮಸ್ಯೆಗಳಿಗೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸ್ಪಂದಿಸಿದ್ದಾರೆ. ಕಲಾಪ ಮುಗಿದ ಬಳಿಕ ವಾಣಿಜ್ಯ ಚಲನಚಿತ್ರ ಮಂಡಳಿಯಲ್ಲಿಯೇ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ’ ಎಂದು KFCC ಅಧ್ಯಕ್ಷ ಭಾ ಮ ಹರೀಶ್‌ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here