ಪ್ರಸ್ತುತ ಸ್ಯಾಂಡಲ್‌ವುಡ್‌ನ ಬೇಡಿಕೆಯ ನಾಯಕನಟಿ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥ ನೆರವೇರಿದೆ. ಸುದ್ದಿಯನ್ನು ಸ್ಪಷ್ಟಪಡಿಸಿರುವ ನಟಿ ಕುಟುಂಬದವರು ನೋಡಿದ ಯಶಸ್‌ ತಮ್ಮ ಬಾಳಸಂಗಾತಿಯಾಗಲಿದ್ದಾರೆ ಎಂದಿದ್ದಾರೆ.

ನಟಿ ಅದಿತಿ ಪ್ರಭುದೇವ ನಿನ್ನೆ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಫೋಟೊವೊಂದನ್ನು ಶೇರ್‌ ಮಾಡಿ ಅಚ್ಚರಿ ಮೂಡಿಸಿದ್ದರು. ‘Dream Came True Like A Dream #engaged’ ಎಂದು ಫೋಟೊವೊಂದನ್ನು ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟನೆ ಕೊಟ್ಟಿರಲಿಲ್ಲ. ಈಗ ಬಂದಿರುವ ಸುದ್ದಿಯ ಪ್ರಕಾರ ಅವರನ್ನು ವಿವಾಹವಾಗುವ ಯುವಕ ಯಶಸ್‌ ಎಂದು ತಿಳಿದುಬಂದಿದೆ. ಮೂಲತಃ ಕೃಷಿಕ ಕುಟುಂಬದವರಾದ ಯಶಸ್‌ ಕಾಫಿ ತೋಟ ಹೊಂದಿದ್ದಾರೆ. ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಮದುವೆ ದಿನಾಂಕ ನಿಗದಿಯಾಗಲಿದೆ ಎಂದಿದ್ದಾರೆ ನಟಿ.

ಈ ಹಿಂದೆ ನಟಿ ಅದಿತಿ ಸಂದರ್ಶನಗಳಲ್ಲಿ, “ಕೃಷಿಕ ಕುಟುಂಬದ ಹುಡುಗನನ್ನು ಮದುವೆ ಆಗುತ್ತೇನೆ. ಮನೆಯವರೇ ನೋಡಿದ ಯುವಕನೊಂದಿಗೆ ಅರೇಂಜ್‌ ಮ್ಯಾರೇಜ್‌ ಆಗೋದು” ಎಂದಿದ್ದರು. ಕೊನೆಗೆ ಅವರ ಕನಸ ಕೈಗೂಡಿದ್ದು, “ಕನಸು ನನಸಾಯಿತು, ಕನಸಿನಂತೆಯೇ!” ಎಂದು ಹೇಳಿಕೊಂಡಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿದ್ದು ನಟಿ ಅದಿತಿ ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಇನ್ನು ಸಿನಿಮಾಗೆ ಸಂಬಂಧಿಸಿದಂತೆ ಅವರೀಗ ಸಂಪೂರ್ಣ ಬ್ಯುಸಿ. ‘ಓಲ್ಡ್‌ ಮಾಂಕ್‌’, ‘ಅದೊಂದಿತ್ತು ಕಾಲ’, ‘ಜಮಾಲಿ ಗುಡ್ಡ’ ಚಿತ್ರೀಕರಣದಲ್ಲಿರುವ ಅವರ ಸಿನಿಮಾಗಳು. ವಿಜಯಪ್ರಸಾದ್‌ ನಿರ್ದೇಶನದಲ್ಲಿಅವರು ನಟಿಸಿರುವ ‘ತೋತಾಪುರಿ’, ‘ಗಜಾನನ ಗ್ಯಾಂಗ್‌’ ತೆರೆಗೆ ಸಿದ್ಧವಾಗಿವೆ. ಮೊನ್ನೆಯಷ್ಟೇ ತೆರೆಕಂಡ ‘ಆನ’ ಅವರ ಪಾಲಿಗೆ ವಿಶೇಷ ಸಿನಿಮಾ. ಈ ಚಿತ್ರದ ಪಾತ್ರದ ಮೂಲಕ ಅವರು ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಎನಿಸಿಕೊಂಡರು.

LEAVE A REPLY

Connect with

Please enter your comment!
Please enter your name here