ಕಾಡುಮನೆ, ಅರಣ್ಯ, ಅಲ್ಲಿ ವಾಸಿಸುವ ಈ ಕುಟುಂಬ, ಕಪಿಗಳು, ಸಂರಕ್ಷಣೆಯ ಪ್ರತೀಕವಾಗಿ ನಿಯೋಜಿಸಿದ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ, ವಲಯಗಳು ಸೃಸ್ಟಿಸುವ ಪದರಗಳು ಒಂದು ಬಗೆಯ ಗ್ರಸ್ಥ ಮನಸ್ಸುಗಳ ಅಸಂಗತ ಚಿತ್ರಗಳಾಗಿಬಿಡುತ್ತವೆ. ಬಿಗಿಯಾದ ಚಿತ್ರಕಥೆ, ಸಂಯಮದ ಅಭಿನಯ, ವೈಭವೀಕರಿಸದ ದೃಶ್ಯ ಸಂಯೋಜನೆ, ಕೊಂಚ playful ಆದ ಸಂಕಲನ ಚಿತ್ರಕ್ಕೆ ಪೂರಕವಾಗಿವೆ. ‘ಕಿಷ್ಕಿಂದಾ ಕಾಂಡಂ’ ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮೀಸಲು ಅರಣ್ಯದ ಬದಿಗೇ ಹರಡಿಕೊಂಡ ಕಾಡುತೋಟ. ಎಲ್ಲೆಲ್ಲೂ ಕಪಿಗಳು. ಅಲ್ಲೇ ಅಪ್ಪುಪಿಳ್ಳೈ (ವಿಜಯರಾಘವನ್) ಮನೆ. ಅಪ್ಪುಪಿಳ್ಳೈ ಸೇನೆಯಿಂದ ನಿವೃತ್ತನಾಗಿ ಮಗ ಆದಿತ್ಯನೊಂದಿಗೆ (ಆಸಿಫ್ ಆಲಿ) ವಾಸ. ಅವನು ನಕ್ಸಲ್ ಎಂಬ ಗುಮಾನಿಯೂ ಇದೆ. ಆದಿತ್ಯನಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ. ಕಳೆದೆರಡು ವರ್ಷದ ಹಿಂದೆ ಆತನ ಹೆಂಡತಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾಳೆ. ಅವರಿಗೆ ಜನಿಸಿದ ಒಬ್ಬನೇ ಮಗ, ಏಳು ವರ್ಷದವ ಚಾಚು ಬಲು ತುಂಟ, ಎರಡು ವರ್ಷದ ಹಿಂದೆ ಕಾಣೆಯಾಗಿದ್ದಾನೆ.
ಕ್ಷೇತ್ರದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲೇ ಪರವಾನಗಿ ಪಡೆದ ವೈಯಕ್ತಿಕ ರಕ್ಷಣೆಗೆ ಬಳಸುವ ರಿವಾಲ್ವರ್/ಬಂದೂಕುಗಳನ್ನು ಪೊಲೀಸ್ ಠಾಣೆಗಳಲ್ಲಿ ಜಮಾವಣೆ ಮಾಡಲು ಆದೇಶ ಹೊರಟ ಹಿನ್ನೆಲೆಯಲ್ಲೇ ಸಿನಿಮಾ ಪ್ರಾರಂಭವಾಗುತ್ತೆ. ಆ ದಿನ ಆದಿತ್ಯ ತನ್ನ ಎರಡನೇ ಮದುವೆಗಾಗಿ ಅಪರ್ಣಾ ಜೊತೆ ನೋಂದಣಿ ಕಚೇರಿಗೆ ಬಂದಿದ್ದಾನೆ. ಇತ್ತ ತನ್ನ ಮರೆವಿನ ಖಾಯಿಲೆಯಿಂದಾಗಿ ತನ್ನ ಬಳಿಯಿದ್ದ ರಿವಾಲ್ವರ್ ಎಲ್ಲೋ ಕಾಣೆಯಾದುದನ್ನು ಕಂಡು ಅಪ್ಪುಪಿಳ್ಳೈ ಕಂಗಾಲಾಗುತ್ತಾನೆ. ಜಮಾವಣೆಗೊಳ್ಳದ ಶಸ್ತ್ರಾಸ್ತ್ರಗಳ ಬೆನ್ನಟ್ಟಿ ಪೊಲೀಸರು ಬರುತ್ತಾರೆ. ಇಡೀ ಮನೆಯನ್ನೆಲ್ಲಾ ಹುಡುಕಿ ರಿವಾಲ್ವರ್ ಕಾಣೆಯಾದುದನ್ನು ಅರಿತು ಅಪ್ಪುಪಿಳ್ಳೈ ಪೊಲೀಸರಿಗೆ ಉತ್ತರ ನೀಡಲು ಒದ್ದಾಡುತ್ತಾನೆ.
ಹುಡುಕಾಟ, ತನಿಖೆ, ದೃಶ್ಯ ವಿಸ್ತರಣೆ ಪಡೆದು ಒಂದೊಂದೇ ಸುಳಿವುಗಳು ಮೂರ್ತಗೊಳ್ಳುತ್ತಾ, ಇತ್ತ ಅರ್ಪಣಾಳ (ಅರ್ಪಣಾ) ಸಹಜ ಕುತೂಹಲಗಳು ಅಪ್ಪುಪಿಳ್ಳೈ ಮತ್ತೂ ಆದಿತ್ಯ ಕಟ್ಟಿಕೊಂಡ ವಲಯಗಳಲ್ಲಿ ಪ್ರವೇಶ ಪಡೆಯುತ್ತವೆ. ಮನೆಗೆ ಹೊಂದಿಕೊಂಡ ತೋಟದಲ್ಲಿ ರಿವಾಲ್ವರ್‌ಗಾಗಿ ಹುಡುಕಾಟ ಕೈಗೊಂಡಾಗ ಚಾಚುವಿನ ಗೊಂಬೆಗಳೂ, ಕಪಿಗಳು ಎತ್ತಿ ಒಯ್ದು ಮರಗಳ ಮೇಲಿಟ್ಟ ಇತರೆ ವಸ್ತುಗಳೂ ಕಾಣಸಿಕ್ಕುತ್ತವೆ. ಕಪಿಗಳ ಕೈಯಲ್ಲಿ ರಿವಾಲ್ವರ್ ಇರುವ ವಿಡಿಯೋ ಒಂದು ವೈರಲ್ ಆಗಿ ಪೊಲೀಸರೊಂದಿಗೆ ಅರಣ್ಯಾಧಿಕಾರಿಗಳೂ ತನಿಖೆ ತೀವ್ರಗೊಳಿಸುತ್ತಾರೆ. ಈ ಹಿನ್ನೆಲೆಯಲ್ಲೇ ಅಪ್ಪುಪಿಳ್ಳೈನಿಂದ ತೋಟದ ಭಾಗವನ್ನು ಖರೀದಿಸಿದ್ದ ಜಮೀನುದಾರ ಮನೆಗೆ ತಳಪಾಯ ತೋಡುವ ವೇಳೆ ಆಸ್ತಿಪಂಜರವೊಂದು ಸಿಗುತ್ತದೆ. ನಾನಾ ವಿಧದ ಊಹಾಪೋಹಗಳಿಗೆ ತೆರೆಬೀಳುವುದು ಫಾರೆನ್ಸಿಕ್ ಇಲಾಖೆಯಿಂದ ವರದಿ ಬಂದಾಗಲೇ. ಅದೊಂದು ಕಪಿಯೊಂದರ ಆಸ್ತಿಪಂಜರವೆಂದೂ, ಅದರ ಸಾವು ಗುಂಡೇಟಿನಿಂದ ಆದದ್ದು ಎಂಬುದನ್ನು ಅರಿತ ತನಿಖಾ ಸಿಬ್ಬಂದಿ ಅಪ್ಪುಪಿಳ್ಳೈ ಕುಟುಂಬದ ಬೆನ್ನು ಬೀಳುತ್ತಾರೆ.
ಸಂಕಥನ ತನ್ನ ಮೆರಗು ಸಾಧಿಸುವುದು ಇಲ್ಲೇ. ಸಂಘರ್ಷಗಳ ಮುಖಾಮುಖಿಗೆ ಈಡಾದ ಆದಿತ್ಯ ಬಿಚ್ಚಿಕೊಳ್ಳುತ್ತಾ ಹೋದರೆ, ಮರೆವಿನ ಖಾಯಿಲೆಯ ತೀವ್ರತೆಗೆ ಸಿಕ್ಕ ಅಪ್ಪುಪಿಳ್ಳೈ , ಹಿಂದಿನ ಘಟನೆಗಳ ಕೊಂಡಿಯನ್ನು ಹಿಡಿಯಲು, ತನ್ನ ನೆನಪಿನಲ್ಲಿ ಮರು ಕಟ್ಟಿಕೊಳ್ಳಲು ಪಡುವ ಪರಿ, ದಾಖಲೆಗಳ ಹುಡುಕಾಟ, ತನ್ನ ಪರಿಚಿತ ಸ್ಥಳ ಹಾಗೂ ವ್ಯಕ್ತಿಗಳ ಮುಖಾಮುಖಿ, ಪ್ರತಿ ಗ್ರಹಿಕೆಗೆ ಸಿಕ್ಕ ವಾಸ್ತವ, ಜೋಡಿಸಿಕೊಂಡು ಹುಟ್ಟುವ ಮತ್ತಷ್ಟು ಪ್ರಶ್ನೆಗಳಿಗೆ ಬೆಂಕಿ ಇಟ್ಟು, ಮತ್ತೆ ಮರೆವಿಗೆ ಜಾರಿ, ಹೀಗೆ ದಿನಚರಿ ಪುನರಾವರ್ತನೆಗೊಳ್ಳುತ್ತಾ, ಒಂದು ಬಗೆಯ ನಿಗೂಢ ಅನ್ವೇಷಣೆಯ ಸಂಚಾರ ಸ್ವರೂಪವನ್ನು ಪಡೆಯುತ್ತಾ, ಅಸಂಗತ ಚಿತ್ರಗಳ ವರ್ತುಲವನ್ನು ಸೃಷ್ಟಿಸುತ್ತದೆ. ಅಪರ್ಣಾಳೊಂದಿಗೆ ನಮ್ಮನ್ನು ತೊಡಗಿಸಿಕೊಂಡು, ಅಲ್ಲಲ್ಲಿ ಕಂಡ ಸುಳಿವುಗಳು ನಮ್ಮನ್ನು ಬೇಕಾಬಿಟ್ಟಿ ವಂಚಿಸದೇ (ಕೆಲವು ಇವೆ, ಆದರೆ ಕಡಿಮೆ) ಒಂದು ಓಘದಲ್ಲಿ ದಾಟಿಸುತ್ತಾ ಕೊನೆಗೆ ಮುಖಾಮುಖಿಯಾಗುತ್ತವೆ. ಕತೆ, ಚಿತ್ರಕಥೆ, ಸಂಭಾಷಣೆ ಮತ್ತು ಛಾಯಾಗ್ರಹಣದ ಸೂತ್ರ ಹಿಡಿದ ಬಾಬುಲ್ ರಮೇಶ್, ನಿರ್ದೇಶಕನನ್ನು ಸಮರ್ಥವಾಗಿ ಹಿಡಿದಿದ್ದಾರೆ.
ಕಾಡುಮನೆ, ಅರಣ್ಯ, ಅಲ್ಲಿ ವಾಸಿಸುವ ಈ ಕುಟುಂಬ, ಕಪಿಗಳು, ಸಂರಕ್ಷಣೆಯ ಪ್ರತೀಕವಾಗಿ ನಿಯೋಜಿಸಿದ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ, ವಲಯಗಳು ಸೃಸ್ಟಿಸುವ ಪದರಗಳು ಒಂದು ಬಗೆಯ ಗ್ರಸ್ಥ ಮನಸ್ಸುಗಳ ಅಸಂಗತ ಚಿತ್ರಗಳಾಗಿಬಿಡುತ್ತವೆ. ಮರೆವು ನುಂಗಿಬಿಟ್ಟ ಅಪ್ಪುಪಿಳ್ಳೈ ಅರೆಪ್ರಜ್ಞೆಯೂ, ಆದಿತ್ಯನ ಪ್ರಜ್ಞಾಮೌನವೂ, ಸತ್ಯ ಬೆನ್ನಟ್ಟಿ ಹೊರಟ ಅಪರ್ಣಾಳ ಅನ್ವೇಷಣೆಯೂ ಒಂದು ಕಪಿಚೇಷ್ಟೆಯ ದಾರುಣ ಕಥೆಯನ್ನು ಪದರ ಪದರಗಳಲ್ಲಿ ಬಿಡಿಸಿ ಹೇಳುತ್ತವೆ. ಬಿಗಿಯಾದ ಚಿತ್ರಕಥೆ, ಸಂಯಮದ ಅಭಿನಯ, ವೈಭವೀಕರಿಸದ ದೃಶ್ಯ ಸಂಯೋಜನೆ, ಕೊಂಚ playful ಆದ ಸಂಕಲನ ಚಿತ್ರಕ್ಕೆ ಪೂರಕವಾಗಿವೆ. ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.