ಸುದೀಪ್ ನಟನೆಯ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಮುಂಜಾನೆಯ ಶೋಗಳು ರದ್ದಾಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರು ಮತ್ತು ವಿತರಕರ ಮಧ್ಯೆಯ ಹಣಕಾಸಿನ ವ್ಯವಹಾರದಲ್ಲಿ ತೊಡಕು ಉಂಟಾಗಿದ್ದು, ಈ ಕಾರಣಕ್ಕೆ ಯುಎಫ್ಓ ಪರವಾನಗಿ ಸಿಗದಿದ್ದರಿಂದ ಹೀಗಾಗಿದೆ ಎನ್ನಲಾಗಿದೆ. ಈ ಅನಪೇಕ್ಷಿತ ಬೆಳವಣಿಗೆಗೆ ನಟ ಸುದೀಪ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಬೆಳಗಿನ ಶೋ ಕ್ಯಾನ್ಸಲ್ ಆಗಿದ್ದು, ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಬಹುದಿನಗಳ ನಂತರ ತೆರೆಕಾಣುತ್ತಿರುವ ತಮ್ಮ ಹೀರೋನ ಸಿನಿಮಾ ವೀಕ್ಷಿಸಿಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಶೋ ಇತ್ತು. ಈ ‘ಫ್ಯಾನ್’ ಶೋ ಕ್ಯಾನ್ಸಲ್ ಎಂದು ತಿಳಿಯುತ್ತಿದ್ದಂತೆ ಚಿತ್ರಮಂದಿರದ ಎದುರು ನೆರೆದಿದ್ದ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ನಲ್ಲಿ ಕೆಲವರು ಥಿಯೇಟರ್ ಒಳಗೆ ನುಗ್ಗಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದೂ ಆಗಿದೆ. ಇನ್ನು ಹಲವರ ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಪಕರ ವೃತ್ತಿಪರತೆಯನ್ನು ಪ್ರಶ್ನಿಸಿದ್ದಾರೆ. ಈ ಅನಪೇಕ್ಷಿತ ಬೆಳವಣಿಗೆಗೆ ನಟ ಸುದೀಪ್ ಅವರು ಟ್ವಿಟರ್ನಲ್ಲಿ ಸಂದೇಶ ಹಾಕಿ ಕ್ಷಮೆ ಕೋರಿದ್ದಾರೆ. “ಇದೊಂದು ಅನಿರೀಕ್ಷಿತ, ಅನಪೇಕ್ಷಿತ ಬೆಳವಣಿಗೆ. ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಯಾರು ಥಿಯೇಟರ್ಗಳ ಎದುರು ಗಲಾಟೆ ಮಾಡಬೇಡಿ. ಇದಕ್ಕೆ ಅವರು ಖಂಡಿತ ಹೊಣೆಗಾರರಲ್ಲ. ಅತಿ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಿಕೊಂಡು ಥಿಯೇಟರ್ನಲ್ಲಿ ನಿಮ್ಮೆದುರು ಬರುತ್ತೇವೆ” ಎಂದಿದ್ದಾರೆ ಸುದೀಪ್.
ನಿರ್ಮಾಪಕರು ಮತ್ತು ವಿತರಕರ ಮಧ್ಯೆಯ ಹಣಕಾಸಿನ ವ್ಯವಹಾರದಲ್ಲಿ ತೊಡಕು ಉಂಟಾಗಿದ್ದು, ಈ ಕಾರಣಕ್ಕೆ ಯುಎಫ್ಓ ಪರವಾನಗಿ ಸಿಗದಿದ್ದರಿಂದ ಹೀಗಾಗಿದೆ ಎನ್ನಲಾಗಿದೆ. ಮುಂಜಾನೆಯ ಶೋ ಸಾಧ್ಯವಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಥಿಯೇಟರ್ ಮಾಲೀಕರು ‘ಶೋ ಕ್ಯಾನ್ಸಲ್’ ಎನ್ನುವ ಬೋರ್ಡ್ ತೂಗು ಹಾಕಿದರು. ಅತ್ಯುತ್ಸಾಹದಿಂದ ಸಿನಿಮಾ ವೀಕ್ಷಣೆಗೆ ಬಂದಿದ್ದ ಅಭಿಮಾನಿಗಳು ಕೋಪಗೊಂಡು ನಿರ್ಮಾಪಕ, ವಿತರಕರಿಗೆ ಹಿಡಿಶಾಪ ಹಾಕಿದ್ದಾರೆ. ಮುಂಜಾನೆಯ ಶೋ ಕ್ಯಾನ್ಸಲ್ ಆದರೂ ಅಭಿಮಾನಿಗಳು 10.3೦ ಶೋ ಎದುರು ನೋಡುತ್ತಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಈ ಶೋ ಕೂಡ ನಡೆಯುವುದಿಲ್ಲ ಎನ್ನಲಾಯ್ತು. ಇದು ಸಿನಿಮಾ ಅಭಿಮಾನಿಗಳ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಗಾಂಧಿನಗರದಲ್ಲಿ ಬೇರೆಯದ್ದೇ ಚರ್ಚೆಗೆ ಗ್ರಾಸವಾಗಿದೆ. ಬೇಕೆಂದೇ ಹೀಗೆ ಮಾಡಲಾಗಿದೆ, ಯಾರದ್ದೋ ಕೈವಾಡವಿದೆ ಎನ್ನುವ ಅರ್ಥದ ಟ್ವೀಟ್ಗಳು ಅಭಿಮಾನಿಗಳ ಕಡೆಯಿಂದ ಬಂದಿವೆ. ಸದ್ಯ ಇಂದಿನ ಮೂರು ಶೋಗಳು ರದ್ದಾಗಿವೆ. ನಿರ್ಮಾಪಕರು ಮಾತ್ರ ‘ನಮ್ಮದಲ್ಲದ ತಪ್ಪಿಗೆ ತೊಂದರೆಯಾಗಿದೆ. ಎಲ್ಲವೂ ಸರಿಯಾಗಲಿದೆ” ಎಂದಿದ್ದಾರೆ.