ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ನಟನೆಯ ಸ್ತ್ರೀಪ್ರಧಾನ ಸಿನಿಮಾ ‘ಗುಡ್‌ಲಕ್ ಸಖಿ’ ಮುಂದಿನ ತಿಂಗಳು ತೆರೆಕಾಣಲಿದೆ. ನಟಿಯ ಹುಟ್ಟುಹಬ್ಬದ ದಿನದಂದು ಚಿತ್ರತಂಡ ಈ ಮಾಹಿತಿ ಹೊರಹಾಕಿದೆ. ಟಾಲಿವುಡ್‌ನ ಹಲವರು ನಟಿ ಕೀರ್ತಿಗೆ ಟ್ವೀಟ್‌ಗಳ ಮೂಲಕ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.

‘ಮಹಾನಟಿ’ ತೆಲುಗು ಚಿತ್ರದ ಶ್ರೇಷ್ಠ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್‌ ಪಾತ್ರಗಳ ಆಯ್ಕೆಯಲ್ಲಿ ತೀರಾ ಎಚ್ಚರಿಕೆ ವಹಿಸುತ್ತಿದ್ದಾರೆ. ತಾವು ನಟಿಸುತ್ತಿರುವ ಸ್ತ್ರೀಕೇಂದ್ರಿತ ಸಿನಿಮಾ ‘ಗುಡ್‌ಲಕ್‌ ಸಖಿ’ ಚಿತ್ರದ ಬಗ್ಗೆ ಅವರು ಆಗಿಂದಾಗ್ಗೆ ಹೇಳುತ್ತಲೇ ಬಂದಿದ್ದಾರೆ. ಟಾಲಿವುಡ್‌ನಲ್ಲಿ ನಾಯಕಿಪ್ರಧಾನ ಚಿತ್ರಗಳು ಕಡಿಮೆ. ಹಾಗಾಗಿ ಕೀರ್ತಿ ಸುರೇಶ್‌ ಸಿನಿಮಾ ಬಗ್ಗೆ ಉದ್ಯಮದಲ್ಲಿ ಕುತೂಹಲವಂತೂ ಇದ್ದೇ ಇದೆ. ಈ ಸಿನಿಮಾ ನೇರವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಥಿಯೇಟರ್‌ನ ದೊಡ್ಡ ಪರದೆಯಲ್ಲಿ ತಮ್ಮ ಸಿನಿಮಾ ಬಿಡುಗಡೆಯಾಗಬೇಕು ಎಂದೆಣಿಸಿದ್ದ ಕೀರ್ತಿ ನಿರ್ಮಾಪಕರ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದರು. ಇದೀಗ ನಟಿಯ ಆಸೆಯಂತೆ ಸಿನಿಮಾ ಮುಂದಿನ ತಿಂಗಳು ಥಿಯೇಟರ್‌ನಲ್ಲಿ ತೆರೆಕಾಣಲಿದೆ. ನಿನ್ನೆ ನಟಿಯ ಹುಟ್ಟುಹಬ್ಬದ ದಿನದಂದು ಚಿತ್ರದ ನಿರ್ಮಾಪಕರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಇದು ಕ್ರೀಡಾಪ್ರಧಾನ ರೊಮ್ಯಾಂಟಿಕ್‌ ಡ್ರಾಮಾ ಸಿನಿಮಾ ಎನ್ನಲಾಗಿದ್ದು, ಆದಿ ಪಿನಿಸೆಟ್ಟಿ ಮತ್ತು ಜಗಪತಿ ಬಾಬು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯ ಯುವತಿಯೊಬ್ಬಳು ಶೂಟರ್‌ ಆಗುವ ಕಥಾನಕ. ತೆರೆಯ ಮೇಲೆ ಜಗಪತಿ ಬಾಬು ನಾಯಕನಟಿಗೆ ಮೆಂಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ನಾಗೇಶ್ ಕುಕುನೂರ್‌ ಈ ಚಿತ್ರ ನಿರ್ದೇಶಿಸಿದ್ದಾರೆ ಎನ್ನುವುದು ವಿಶೇಷ. ಮತ್ತೊಂದೆಡೆ ಕೀರ್ತಿ ಸುರೇಶ್‌ ‘ಸರ್ಕಾರು ವಾರಿ ಪಾಟ’ ತೆಲುಗು ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ 2022ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ನಿನ್ನೆ ಹುಟ್ಟುಹಬ್ಬದಂದು ಟಾಲಿವುಡ್‌ನ ಹಲವರು ಕೀರ್ತಿಗೆ ಟ್ವೀಟ್‌ಗಳ ಮೂಲಕ ಶುಭ ಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here