ಕೋವಿಡ್‌ ನಂತರದ ದಿನಗಳಲ್ಲಿ ಸಿನಿಮಾ ಥಿಯೇಟರ್‌ಗಳಿಗೆ ಜನರು ಬರುವುದು ಕಡಿಮೆಯಾಗಿರುವುದು ಹೌದು. ಹಾಗೆಂದು ಸಿನಿಮಾ ಮಾಡುವವರ ಉತ್ಸಾಹವೇನೂ ಕಡಿಮೆಯಾಗಿಲ್ಲ. ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರೈಂ ಥ್ರಿಲ್ಲರ್‌ ‘ಟೆನೆಂಟ್’.

ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಚ್ಚ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆಯುತ್ತಿರುವ ಚಿತ್ರತಂಡ ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ. ‘ಅನ್ ಲಾಕ್’ ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೀಧರ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿಯನ್ನು ಶ್ರೀಧರ್ ಶಾಸ್ತ್ರಿಯವರೇ ಹೊತ್ತುಕೊಂಡಿದ್ದಾರೆ.

ಬಹಳ ದಿನಗಳ ನಂತರ ಖಳನಟ ಕೀರ್ತಿ ರಾಜ್ ಅವರ ಪುತ್ರ ಧರ್ಮ ಕೀರ್ತಿ ರಾಜ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಕೀರ್ತಿರಾಜ್ ಅವರೊಂದಿಗೆ ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ನಡೆಯುವ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ಸಿನಿಮಾ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡುವೆ ನಡೆಯುವ ಕಥೆ ಚಿತ್ರದಲ್ಲಿದೆ. ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್‌ನಡಿ ಟಿ.ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

LEAVE A REPLY

Connect with

Please enter your comment!
Please enter your name here