ಖ್ಯಾತ ಬಾಲಿವುಡ್‌ ನಿರ್ದೇಶಕ ವಿಧು ವಿನೋದ್‌ ಚೋಪ್ರಾ ನಿರ್ಮಾಣ, ನಿರ್ದೇಶನದ ’12th ಫೇಲ್‌’ ಹಿಂದಿ ಸಿನಿಮಾ ನಾಳೆ (ಅ. 27) ತೆರೆಕಾಣುತ್ತಿದೆ. ಕನ್ನಡ ಅವತರಣಿಕೆಯೂ ತೆರೆಕಾಣುತ್ತಿದ್ದು, ಕೆಆರ್‌ಜಿ ಸ್ಟುಡಿಯೋಸ್‌ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ. ಐಪಿಎಸ್ ಮನೋಜ್ ಕುಮಾರ್ ಶರ್ಮ ಜೀವನ ಆಧರಿಸಿದ ಕಥಾಹಂದರವಿದು.

ಬಾಲಿವುಡ್‌ನ ಜನಪ್ರಿಯ ಚಿತ್ರನಿರ್ದೇಶಕ ವಿಧು ವಿನೋದ್‌ ಚೋಪ್ರಾ ನಿರ್ಮಾಣ, ನಿರ್ದೇಶನದ ’12th ಫೇಲ್‌’ ಹಿಂದಿ ಸಿನಿಮಾ ನಾಳೆ ದೇಶದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದ ಕನ್ನಡ ಅವತರಣಿಕೆಯೂ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರನಿರ್ದೇಶಕ ರೋಹಿತ್‌ ಪದಕಿ ಅವರ ಸಾರಥ್ಯದಲ್ಲಿ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಲಾಗಿದೆ. ಕೆಆರ್‌ಜಿ ಸ್ಟುಡಿಯೋಸ್‌ನವರು ರಾಜ್ಯದ ಸುಮಾರು 100 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ’12th ಫೇಲ್‍’ ಚಿತ್ರ ಅನುರಾಗ್‍ ಪಾಠಕ್‍ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಜೀವನ ಆಧರಿಸಿದ ಚಿತ್ರವಿದು. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತೀಕ್‌ ಗೌಡ ಅವರು ಮಾತನಾಡಿ, ‘ಚಿಕ್ಕವಯಸ್ಸಿನಿಂದ ವಿಧು ವಿನೋದ್ ಚೋಪ್ರಾ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು ನಾನು. 12th ಫೇಲ್‌ ಚಿತ್ರ ಮನರಂಜನೆ ಜೊತೆ ಉತ್ತಮ ಸಂದೇಶ ಹೊದಿದೆ. ಈ ಚಿತ್ರವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡ ಅವತರಣಿಕೆಯ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಧು ವಿನೋದ್ ಚೋಪ್ರಾ ಅವರಿಗೆ ಧನ್ಯವಾದ. ಸದಭಿರುಚಿಯ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.

ವಿಕ್ರಾಂತ್‌ ಮಾಸ್ಸೆ ಈ ಸಿನಿಮಾದ ಪ್ರಮುಖ ಪಾತ್ರಧಾರಿ. ‘ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ವಿಧು ವಿನೋದ್ ಚೋಪ್ರಾ ಅವರು ಕರೆ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದಾಗ ತುಂಬಾ ಸಂತೋಷವಾಯಿತು. ಅಸಾಧ್ಯವನ್ನು ಸಾಧ್ಯವಾಗಿಸಿದ ಐಪಿಎಸ್ ಮನೋಜ್ ಕುಮಾರ್ ಶರ್ಮ ಅವರ ಜೀವನ ಆಧರಿಸಿದ ಈ ಚಿತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ತಂದಿದೆ’ ಎನ್ನುವುದು ವಿಕ್ರಾಂತ್‌ ಮಾಸ್ಸೆ ಅವರ ಮಾತು. ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮೇಧಾ ಶಂಕರ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ‌.

LEAVE A REPLY

Connect with

Please enter your comment!
Please enter your name here