ಮೊದಲ ವೀಕ್ಷಣೆಗೆ ಅರ್ಥವೇ ಆಗದ ಕತೆಯ ಕಡೆಗೆ ಗಮನ ನೀಡದೆ ತಾಂತ್ರಿಕ ಅಂಶಗಳನ್ನು ಪ್ರತ್ಯೇಕಿಸಿ ನೋಡಿದರೆ ‘ಕುತಿರೈವಾಲ್’ ಎರಡು ಮೂರು ಸಲ ನೋಡಬೇಕು ಅನಿಸುವ ಸಿನಿಮಾ. ಕತೆಯಲ್ಲಿ ಇನ್ನೇನಾಗುತ್ತದೆ ಎಂದು ನೋಡುತ್ತಾ ಕೂತರೆ ಒಮ್ಮೆ ನೋಡುವುದೂ ಕಷ್ಟವೆನಿಸಬಹುದು. ನಿಮ್ಮ ಸಿನಿಮಾ ವೀಕ್ಷಣೆಯಲ್ಲಿ ಏಕತಾನತೆ ಇದೆ‌ ಎಂದು ಅನಿಸಿದರೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ಈ ಸಿನಿಮಾ ನೋಡಬಹುದು.

ಆ‌ ಕಾಲ‌ ಒಂದಿತ್ತು, ಒಂದು ಕಡೆ ಕಮರ್ಷಿಯಲ್ ಇತ್ತು, ಆರ್ಟ್ ಇನ್ನೊಂದು ಕಡೆಗಿತ್ತು. ಆರ್ಟ್ ಹಾಗೂ ಕಮರ್ಷಿಯಲ್ ಎಂಬ ವರ್ಗೀಕರಣ ಸರಿಯಲ್ಲವೆಂಬ ವಾದವಿದೆ. ಅದಾಗಲೇ ಒಂದಷ್ಟು ಅಭಿಮಾನಿಗಳಿರುವ ನಟ-ನಟಿ, ಇನ್ನೊಂದು ಅರ್ಥದಲ್ಲಿ ಸಿದ್ಧ ಮಾರುಕಟ್ಟೆ ಇರುವ, ಥಿಯೇಟರ್‌ಗೆ ಬಂದು ಸಿನಿಮಾ ನೋಡುವ ವರ್ಗಕ್ಕೆ ಒಗ್ಗುವಂಥ ಕತೆಯಿಟ್ಟು, ಜನ ಇಷ್ಟಪಡುತ್ತಾರೆ ಎಂದು ಸಾಬೀತಾದ ಸೂತ್ರದಲ್ಲಿ ಚಿತ್ರಕತೆ‌ ಮಾಡಿಕೊಂಡು, ಸಮೂಹಕ್ಕೆ ಖುಷಿಕೊಡುವ ಸಂಭಾಷಣೆ ಹೆಣೆದು ನಿರ್ಮಿಸಲಾಗುವ ಚಿತ್ರ ಕಮರ್ಷಿಯಲ್. ಅಂದರೆ ವಾಣಿಜ್ಯ ‌ಆಯಾಮದ ಲೆಕ್ಕಾಚಾರ ಹಾಕಿ ನಿರ್ಮಾಣವಾಗುವ ಸಿನಿಮಾಗಳು, ಅವುಗಳ ಸಂಖ್ಯೆ‌ ಇಂದಿಗೂ ಹೇರಳ.

ಇನ್ನೊಂದೆಡೆ ಆರ್ಟ್ ಎಂಬ ವರ್ಗವಿತ್ತಲ್ಲ, ಅಲ್ಲಿಯೂ ದಶಕಗಳ ಕಾಲ ಸಿದ್ಧ ಸೂತ್ರವೇ ಕೆಲಸ ಮಾಡುತ್ತಿತ್ತು ಎಂಬುದು ಮಾತ್ರ ಮರೆಮಾಚಲಾದ ಸತ್ಯ. 1980 ರಿಂದ 2010ರ ವರೆಗಿನ ನಾಲ್ಕು ದಶಕಗಳಲ್ಲಿ ಬಂದ ಆರ್ಟ್ ಸಿನಿಮಾಗಳನ್ನು ಒಂದರ ಬೆನ್ನಿಗೆ ಒಂದು ನೋಡುತ್ತಾ ಹೋದರೆ ಅಲ್ಲಿಯೂ ಒಂದು ಸಿದ್ಧ ಸೂತ್ರವಿರುವುದು ಕಾಣುತ್ತದೆ. ಅದರಲ್ಲೂ ಸರಕಾರಿ ಪ್ರಶಸ್ತಿ ವಿಜೇತ ಸಿನಿಮಾಗಳಲ್ಲಿ ಐದೈದು ವರ್ಷಕ್ಕೊಮ್ಮೆ ಬದಲಾದ ಫಾರ್ಮುಲಾ ಕಾಣಸಿಗುತ್ತದೆ. ‘ಪ್ರಶಸ್ತಿ ವಿಜೇತ’ ಸಿನಿಮಾ ಅಂದ ಕೂಡಲೇ‌ ಅದಕ್ಕೊಂದು ಸಿದ್ಧ ಟಿವಿ‌ ಮಾರುಕಟ್ಟೆ ಒದಗುತ್ತಿತ್ತು. ಆ ನೆಲೆಯಲ್ಲಿ ಕಮರ್ಷಿಯಲ್-ಆರ್ಟ್ ಎಂಬ ವರ್ಗೀಕರಣ ಸರಿಯಲ್ಲ, ಎರಡೂ ಕಮರ್ಷಿಯಲ್ಲೇ. ಪ್ರಶಸ್ತಿ ನಿರ್ಣಯ ಮಂಡಳಿ ಪರಿಗಣಿಸುವುದು‌ ಕಷ್ಟ‌ವೆಂಬಂಥ ಕಥಾವಸ್ತು ಹಿಡಿದು ಆರ್ಟ್‌ ಸಿನಿಮಾ ನಿರ್ಮಾಣಕ್ಕೆ‌ ಇಳಿದವರೇ ಇಲ್ಲ. ಚಿತ್ರ ತನ್ನ ತಾಂತ್ರಿಕ ನೆಲೆಯಲ್ಲಿ ಎಷ್ಟೇ ಉತ್ತಮವಿದ್ದರೂ ಕಳ್ಳತನ, ಕೊಲೆ ಅಥವಾ ಭೂತಪ್ರೇತಗಳೇ ತೆರೆಯ ಮೇಲೆ ಬರುವ ಸಿನಿಮಾಕ್ಕೆ‌ ಪ್ರಶಸ್ತಿ ಬಂದದ್ದು ನನ್ನ ನೆನಪಿಗಂತೂ ಬರುತ್ತಿಲ್ಲ. ಪ್ರಶಸ್ತಿ ಇಲ್ಲದೆ ದೂರದರ್ಶನ ಹಕ್ಕು‌ ಕೊಳ್ಳುತ್ತಿರಲಿಲ್ಲ.

ಆದರೆ ಒಟಿಟಿ ವೇದಿಕೆಗಳ ಕೃಪೆಯಿಂದ ಈಗಿನ ಕಾಲದ‌ ಕ್ರಿಯಾಶೀಲ ಮಂದಿ ಆರ್ಟು-ಕಮರ್ಷಿಯಲ್ಲು ಎಂಬ ಚೌಕಟ್ಟಿನ ಆಚೆಗೆ ನಿಂತು ನೋಡಲು ಸಾಧ್ಯವಾಗುತ್ತಿದೆ. ಕುರುತ್ತಿ ಮತ್ತು ಚುರುಳಿ ಎಂಬ ಮಲಯಾಳ ಸಿನಿಮಾಗಳು ಇತ್ತೀಚಿನ ಉದಾಹರಣೆಗಳು. ಆ ಪಟ್ಟಿಗೆ‌ ಹೊಸದಾಗಿ ಸೇರುವುದು ‘ಕುತಿರೈವಾಲ್’ (ಕುದುರೆ ಬಾಲ) ಹೆಸರಿನ ತಮಿಳು ಸಿನಿಮಾ. ಇದೊಂದು ಮನೋವೈಜ್ಞಾನಿಕ ಥ್ರಿಲ್ಲರ್. ತುಂಬಾ ಕೀಟಲೆ ಮಾಡುವ ಮಕ್ಕಳಿಗೆ ‘ನಿನ್ನ ಬಾಲ ಯಾಕೋ‌ ಉದ್ದ ಆಗ್ತಾ ಇದೆ’ ಅನ್ನುತ್ತೇವೆ. ‘ಬಾಲ ಬಿಚ್ಬೇಡ’ ಎಂದು ಹೇಳುತ್ತೇವೆ. ಹಾಗಾದರೆ ಬಾಲ ಎಲ್ಲಿದೆ? ಬಾಲ ಇಲ್ಲ, ಅದೊಂದು ಕಲ್ಪನೆ ಮಾತ್ರ, ಅದೊಂದು ಭ್ರಮೆ, ಅದು ಮಾಯಾ ಸಿದ್ಧಾಂತ ಎನ್ನುತ್ತದೆ ಪ್ರೊಫೆಸರ್‌ನ ಪಾತ್ರ. ಆ ಪಾತ್ರದ ಹೇಳಿಕೆಯಂತೆಯೇ ‘ಕುತಿರೈವಾಲ್’ ಮಾಯಾ ಸಿದ್ಧಾಂತದ‌ ಆಧಾರದ ಮೇಲೆ ನಿಲ್ಲುತ್ತದೆ.

ಕನಸು-ವಾಸ್ತವ-ಭ್ರಮೆ ಈ ಮೂರರಲ್ಲಿ ಯಾವುದು, ಯಾವಾಗ ಮತ್ತು ಎಲ್ಲಿ ಬಂದು ಹೋಗುತ್ತದೆ ಎಂದು ಹೇಳುವುದು ಕಷ್ಟ. ಇದರ ಚಿತ್ರಕತೆ ಇಂಗ್ಲೀಷಿನ ಮಾಡರ್ನ್ ಪೋಯೆಟ್ರಿ ಧಾಟಿಯದ್ದು. ಮನರಂಜನೆಗಾಗಿ ಓದಿದರೆ ಅದಕ್ಕಿಂತ ಕೆಟ್ಟ ಕವಿತೆ ಮತ್ತೊಂದಿಲ್ಲ, ಅದನ್ನು ಓದುವುದಕ್ಕೂ ಒಂದು ಪೂರ್ವಸಿದ್ಧತೆ ಬೇಕು. ಅದು ಭಾವಕ್ಕಿಂತ ಹೆಚ್ಚು ಬುದ್ಧಿಗೆ ಕೆಲಸ ಕೊಡಿವಂಥದ್ದು. ಅದೇ ಪಂಥಕ್ಕೆ ಸೇರುತ್ತದೆ ‘ಕುತಿರೈವಾಲ್’. ಸಿನಿಮಾ ಯಾವ ಭಾವವನ್ನು ಚಿತ್ರಿಸುತ್ತಿದೆ‌ ಎಂದು ತಿಳಿಯಲು ಮೊದಲಾಗಿ ಬುದ್ಧಿಗೆ ಕೆಲಸ ಕೊಡಬೇಕು. ಇಲ್ಲಿ ಒಂದೇ‌ ಫ್ರೇಮಿನ ಒಳಗೆ ಸೂರ್ಯನೂ‌ ಬರುತ್ತಾನೆ, ಚಂದ್ರನೂ ಕಾಣುತ್ತಾನೆ. ಪರದೆಯ ಒಂದು ಬದಿಯಲ್ಲಿ ಕೇಸರಿ ಸೂರ್ಯನಿರುವ ಇಳಿ ಸಂಜೆ ಕಂಡರೆ ಇನ್ನೊಂದು ಬದಿ ಬಿದಿಗೆ ಚಂದ್ರಮನಿರುವ‌ ನಸುಕು. ಒಂದೆಡೆ ಬಾಲವಿಲ್ಲದ ಕುದುರೆ, ಇನ್ನೊಂದೆಡೆ ಮಾಯಾಲೋಕದ ಬಾಲೆ. ಹಾಗಾದರೆ ಒಟ್ಟಾರೆಯಾಗಿ ಆ‌ ದೃಶ್ಯ ಏನನ್ನು ಹೇಳುತ್ತದೆ‌? ತಿಳಿಯಲು ಹಿಂದೆ-ಮುಂದಿನ ದೃಶ್ಯವನ್ನು ಅರ್ಥೈಸಿಕೊಂಡು, ಸಂಭಾಷಣೆಯ ಧಾಟಿ ಮತ್ತು ವಸ್ತುವನ್ನು ವಿಶ್ಲೇಷಿಸಿ ಅರ್ಥ ನೀವೇ ಮಾಡಿಕೊಳ್ಳಬೇಕು.

ಇಲ್ಲಿ‌‌ನ ಕತೆಯೇ‌ ಹಾಗಿದೆ. ಸರವಣನ್‌ ಓರ್ವ ಖಾಸಗಿ ಬ್ಯಾಂಕ್ ನೌಕರ. ಒಂದಿರುಳು ಕನಸಿನಲ್ಲಿ ಬಾಲವಿಲ್ಲದ ಕುದುರೆ ಕಾಣುತ್ತದೆ. ಬೆಳಗ್ಗೆ ಏಳುವಾಗ ಬಾಲ ಇವನಿಗೆ ಬಂದಿರುತ್ತದೆ. ಕುದುರೆಯ ಬಾಲ ಅತ್ತಿತ್ತ ಕುಣಿಯುವಂತೆಯೇ ಇವನ ಬಾಲವೂ ಕುಣಿಯುತ್ತದೆ. ಸಿನಿಮಾ ಪೂರ್ತಿ ಆ ಕನಸಿಗೆ ಅರ್ಥ ಹುಡುಕುವುದು ಹಾಗೂ ಆ ಬಾಲ‌ ತನ್ನ ಭ್ರಮೆಯೋ, ವಾಸ್ತವವೋ ಎಂದು ತಿಳಿಯುತ್ತಾ ಆತ ಕಳೆದುಹೋಗುವುದೇ‌ ‘ಕುತಿರೈವಾಲ್’. ಈ ಪ್ರಕ್ರಿಯೆಯಲ್ಲಿ ಆತ ಕನಸಿನ ಒಗಟು ಬಿಡಿಸುವ ಅಜ್ಜಿಯನ್ನು ಭೇಟಿಯಾಗುತ್ತಾನೆ. ಗಣಿತದ ಸೂತ್ರಗಳ ಮೂಲಕ ಬದುಕಿಗೇ ಅರ್ಥ ಹುಡುಕಬಹುದು ಎಂದು ನಂಬಿದ ಪ್ರೊಫೆಸರ್ ಬಳಿ ವಿಚಾರ‌ ವಿನಿಮಯ ಮಾಡುತ್ತಾನೆ. ಜೋಯಿಸನ ಬಳಿಯೂ ಹೋಗುತ್ತಾನೆ. ಎಲ್ಲಿಯೂ ಅವನಿಗೆ ಸಮಾಧಾನಕರ ಉತ್ತರ ಸಿಗುವುದಿಲ್ಲ, ಸಿಗುವ ಉತ್ತರ ಸಮಾಧಾನ ಆಗುವುದಿಲ್ಲ. ದ್ವಿತೀಯಾರ್ಧದಲ್ಲಿ ಕತೆ ಆತನ ಬಾಲ್ಯವನ್ನೆಲ್ಲ ಸ್ಪರ್ಶಿಸಿ, ಹಳ್ಳಿಯ ಜೀವನ ಶೈಲಿಯ ದರ್ಶನ ಮಾಡಿಸಿ ಕೊನೆಗೆ ಅಸಂಗತ ಧಾಟಿಯಲ್ಲಿ ಕೊನೆಗೊಳ್ಳುತ್ತದೆ.

ಇಂಥ ಕ್ಲಿಷ್ಟ ಕತೆಯಿರುವಾಗ ತಾಂತ್ರಿಕ ವಿಭಾಗ ಭಾರಿ ಗಟ್ಟಿ ಬೇಕು ಎಂಬುದನ್ನು‌ ಚೊಚ್ಚಲ ನಿರ್ದೇಶಕದ್ವಯರಾದ ಶ್ಯಾಮ್ ಹಾಗೂ ಮನೋಜ್ ಅರಿತಿದ್ದಾರೆ. ಮನುಷ್ಯನಿಗೆ ಅಂಟಿದ‌ ಕುದುರೆ ಬಾಲ ಅರೆ ಪ್ರಾಸ್ಥೆಟಿಕ್, ಇನ್ನರ್ಧ ವಿಎಫ್‌ಎಕ್ಸ್. ದೃಶ್ಯಗಳಿಗೆ ಅರ್ಥ ತಂದುಕೊಡುವಲ್ಲಿ ಕಲಾವಿಭಾಗ ಅತಿಹೆಚ್ಚು ಕೆಲಸ ಮಾಡಿದ್ದು ಎದ್ದು ಕಾಣುತ್ತದೆ. ಕ್ಯಾಮರಾ ಕೆಲಸ‌ ಅದಕ್ಕೆ ಪೂರಕವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಿರುವುದು ಧ್ವನಿ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತ.

ಮೊದಲ ವೀಕ್ಷಣೆಗೆ ಅರ್ಥವೇ ಆಗದ ಕತೆಯ ಕಡೆಗೆ ಗಮನ ನೀಡದೆ ತಾಂತ್ರಿಕ ಅಂಶಗಳನ್ನು ಪ್ರತ್ಯೇಕಿಸಿ ನೋಡಿದರೆ ‘ಕುತಿರೈವಾಲ್’ ಎರಡು ಮೂರು ಸಲ ನೋಡಬೇಕು ಅನಿಸುವ ಸಿನಿಮಾ. ತಂತ್ರಗಾರಿಕೆ ಬಿಟ್ಟು ಕತೆಯಲ್ಲಿ ಇನ್ನೇನಾಗುತ್ತದೆ ಎಂದು ನೋಡುತ್ತಾ ಕೂತರೆ ಒಂದು ಬಾರಿ ನೋಡುವುದೂ ಕಷ್ಟವೆನಿಸಬಹುದು. ಬಿಡಿ‌ ದೃಶ್ಯಗಳು ತನ್ನದೇ ಆದ ಸ್ವಾದದಿಂದ ಕೂಡಿದೆ. ಕನಸಿನ ದೃಶ್ಯಗಳು ನಾವು ಇದುವರೆಗೆ ಕಂಡ ಸಿದ್ಧ ಸೂತ್ರಗಳನ್ನೆಲ್ಲ ಮೀರಿದೆ. ತೆರೆಯ ಮೇಲೆ ಮೂಡುವ ಕನಸು ನಿಜ ಬದುಕಿನಲ್ಲಿ ಬರುವ ಕನಸಿನ ಸೂತ್ರಗಳನ್ನು‌ ಹೆಚ್ಚು ಆಶ್ರಯಿಸಿದೆ.

ಕೊನೆಯದಾಗಿ, ಇದು ಏನೋ ಮಾಡಲು ಹೊರಟು‌ ಕಡೆಗೆ ಮತ್ತೇನೋ ಆದ ಸಿನಿಮಾ ಇದಲ್ಲ. ಆರಂಭದಲ್ಲೇ ಮತ್ತೇನೋ ತೋರಿಸಲು ಅಣಿಯಾದ ಚಿತ್ರವಿದು. ನಿಮ್ಮ ಸಿನಿಮಾ ವೀಕ್ಷಣೆಯಲ್ಲಿ ಏಕತಾನತೆ ಇದೆ‌ ಎಂದು ಅನಿಸಿದರೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ಈ ಸಿನಿಮಾ ನೋಡಬಹುದು.

LEAVE A REPLY

Connect with

Please enter your comment!
Please enter your name here