ಪೊಲೀಸರ ವೈಯಕ್ತಿಕ ಬದುಕು, ಅವರ ಭಾವನೆಗಳ ಸುತ್ತ ಹೆಣೆದ ಕಥಾನಕದ ಸಿನಿಮಾ ‘ಲಾಫಿಂಗ್‌ ಬುದ್ಧ’. ಈ ಸಿನಿಮಾದ ‘ಎಂಥಾ ಚಂದಾನೇ’ ಹಾಡು ಬಿಡುಗಡೆಯಾಗಿದೆ. ಕೆ ಕಲ್ಯಾಣ್‌ ರಚನೆಯ ಈ ಹಾಡಿಗೆ ವಿಷ್ಣು ವಿಜಯ ಸಂಗೀತ ಸಂಯೋಜಿಸಿದ್ದು, ಕಪಿಲ್‌ ಕಪಿಲನ್‌ ಹಾಡಿದ್ದಾರೆ. ರಿಷಭ್‌ ಶೆಟ್ಟಿ ನಿರ್ಮಾಣದ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಮೋದ್‌ ಶೆಟ್ಟಿ ಮತ್ತು ತೇಜು ಬೆಳವಾಡಿ ನಟಿಸಿದ್ದರೆ. ಭರತ್‌ ರಾಜ್‌ ಚಿತ್ರದ ನಿರ್ದೇಶಕ.

‘ಪೊಲೀಸ್ ಅವರ ಕುಟುಂಬ ಹಾಗು ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪೇದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ ‘ಲಾಫಿಂಗ್‌ ಬುದ್ಧ’ ಸಿನಿಮಾದ ನಿರ್ದೇಶಕ ಭರತ್‌ ರಾಜ್‌. ಈ ಹಿಂದೆ ರಿಷಭ್‌ ಶೆಟ್ಟಿ ಅವರಿಗೆ ‘ಹೀರೋ’ ಸಿನಿಮಾ ನಿರ್ದೇಶಿಸಿದ್ದ ಭರತ್‌ ರಾಜ್‌ ಅವರಿಗೆ ಇದು ಎರಡನೇ ಸಿನಿಮಾ. ರಿಷಭ್‌ ಶೆಟ್ಟಿ ಅವರೇ ಚಿತ್ರ ನಿರ್ಮಿಸಿದ್ದಾರೆ. ಖಳ, ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಪ್ರಮೋದ್‌ ಶೆಟ್ಟಿ ಅವರೇ ಸಿನಿಮಾದ ಪ್ರಮುಖ ಪಾತ್ರಧಾರಿ ಎನ್ನುವುದು ವಿಶೇಷ. ‘ಗಂಟು ಮೂಟೆ’ ಸಿನಿಮಾದಲ್ಲಿ ಹೆಸರು ಮಾಡಿದ್ದ ತೇಜು ಬೆಳವಾಡಿ ಚಿತ್ರದ ನಾಯಕನಟಿ. ಸದ್ಯ ಚಿತ್ರದ ‘ಎಂಥಾ ಚಂದಾನೇ’ ಸಾಂಗ್‌ ರಿಲೀಸ್‌ ಆಗಿದೆ. ಕೆ ಕಲ್ಯಾಣ್‌ ರಚನೆಯ ಈ ಹಾಡಿಗೆ ವಿಷ್ಣು ವಿಜಯ ಸಂಗೀತ ಸಂಯೋಜನೆಯಿದೆ.

ನಿರ್ಮಾಪಕ ರಿಷಭ್‌ ಶೆಟ್ಟಿ ಅವರು ಮಾತನಾಡಿ, ‘ನನ್ನ ಅಭಿನಯದ ‘ಹೀರೋ’ ಚಿತ್ರ ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ತುಂಬಾ ಹಿಡಿಸಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದ್ದೆ‌ವು. ಈಗ ನನ್ನಿಷ್ಟದ ಸಾಹಿತಿಗಳಲ್ಲಿ ಒಬ್ಬರಾದ ಕಲ್ಯಾಣ್ ಅವರು ಬರೆದಿರುವ ಹಾಡು ಬಿಡುಗಡೆಯಾಗಿದೆ. ಆಗಸ್ಟ್ 15ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಆಗಸ್ಟ್ 30 ರಂದು ಚಿತ್ರ ತೆರೆಗೆ ಬರಲಿದೆ‌’ ಎನ್ನುತ್ತಾರೆ. ‘ರಿಷಭ್ ಹಾಗೂ ಭರತ್ ರಾಜ್ ಈ ಚಿತ್ರದ ನಾಯಕ ನಾನೇ ಎಂದಾಗ ನನಗೆ ಆಶ್ಚರ್ಯವಾಯಿತು. ನಂತರ ಕಥೆ ಕೇಳಿ ಈ ಇಷ್ಟವಾಯಿತು. ಈ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ನಾನು ದಪ್ಪ ಆದ ತಕ್ಷಣ ಚಿತ್ರೀಕರಣ ಆರಂಭವಾಯಿತು. ಈ ಚಿತ್ರದ ನಂತರ ಇಪ್ಪತ್ಮೂರು ಕೆ‌ಜಿ ತೂಕ ಇಳಿಸಿಕೊಂಡಿದ್ದೇನೆ’ ಎನ್ನುವುದು ನಾಯಕನಟ ಪ್ರಮೋದ್‌ ಶೆಟ್ಟಿ ಅವರ ಮಾತು. ಚಿತ್ರದಲ್ಲಿ ರಿಷಭ್‌ ಶೆಟ್ಟಿ ವಿಶೇಷ ಪಾತ್ರವೊಂದರಲ್ಲಿ ನಟಿಸಬೇಕಿತ್ತು. ‘ಕಾಂತಾರ2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಿಷಭ್‌ ಜಾಗಕ್ಕೆ ದಿಗಂತ್‌ ಬಂದಿದ್ದಾರೆ. KRG Studios ಚಿತ್ರವನ್ನು ವಿತರಿಸುತ್ತಿದೆ.

LEAVE A REPLY

Connect with

Please enter your comment!
Please enter your name here