ಟ್ರೈನ್‌ನಲ್ಲಿ ಸಾಗುವ ಚಿತ್ರಕಥೆ ಇದು. ಹೀರೋ ಡಾರ್ಲಿಂಗ್ ಕೃಷ್ಣರ ಜೊತೆ ಎಸ್ತರ್ ನರೋನಾ ಮತ್ತು ಮೀನಾಕ್ಷಿ ದೀಕ್ಷಿತ್ ಇಬ್ಬರು ನಾಯಕಿಯರು ನಟಿಸಿದ್ದಾರೆ. ಏಪ್ರಿಲ್ 1ರಂದು ಸಿನಿಮಾ ತೆರೆಕಾಣಲಿದೆ.
ಕೊರೋನ ಪೂರ್ವದಲ್ಲಿ ಆರಂಭವಾಗಿದ್ದ ಸಿನಿಮಾ ‘ಲೋಕಲ್ ಟ್ರೈನ್’. ಕೋವಿಡ್ ತಾಪತ್ರಯಗಳಿಂದ ಬಿಡುಗಡೆ ಮುಂದೂಡಲ್ಪಟ್ಟಿದ್ದ ಸಿನಿಮಾ ಇದೇ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. “ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ ಸಾಕಷ್ಟು ಜನರು ದಿನವೂ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆ ರೈಲಿನಲ್ಲೇ ನಮ್ಮ ಚಿತ್ರದ ಕಥೆ ಸಾಗುತ್ತದೆ. ಭರ್ಜರಿ ಆಕ್ಷನ್ ಸನಿವೇಶಗಳು, ಸುಮಧುರ ಹಾಡುಗಳನ್ನೊಳಗೊಂಡಿರುವ ನಮ್ಮ ಚಿತ್ರ ಖಂಡಿತ ಎಲ್ಲರಿಗೂ ಹಿಡಿಸಲಿದೆ” ಎಂದರು ನಾಯಕ ಡಾರ್ಲಿಂಗ್ ಕೃಷ್ಣ.
ಚಿತ್ರದಲ್ಲಿ ಇಬ್ಬರು ನಾಯಕಿಯರು ಎಸ್ತರ್ ನರೋನಾ ಮತ್ತು ಮೀನಾಕ್ಷಿ ದೀಕ್ಷಿತ್. “ನನ್ನದು ಇದರಲ್ಲಿ ಈವರೆಗೂ ಮಾಡಿರದ ಪಾತ್ರ. ನನ್ನ ಅಭಿನಯದ ಹಾಡೊಂದು ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರ ಗೆಲುತ್ತದೆ ಎಂಬ ಭರವಸೆಯಿದೆ” ಎಂದರು ಎಸ್ತರ್ ನರೋನಾ. ‘ಭಜರಂಗಿ’ ಸಿನಿಮಾ ಖ್ಯಾತಿಯ ಲೋಕಿ ಅವರಿಗೆ ಚಿತ್ರದಲ್ಲಿ ನೆಗೆಟಿವ್ ಶೇಡ್‌ನ ಪಾತ್ರವಿದೆ. ಸುಬ್ರಾಯ ವಾಳ್ಕೆ ನಿರ್ಮಾಣದ ಚಿತ್ರಕ್ಕೆ ಪಿ.ಆರ್.ಸೌಂದರ್ ಸಂಕಲನ, ಅರ್ಜುನ್ ಜನ್ಯ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ, ರುದ್ರಮುನಿ ನಿರ್ದೇಶನವಿದೆ. ಸಾಧುಕೋಕಿಲ, ಟೆನ್ನಿಸ್ ಕೃಷ್ಣ ಚಿತ್ರದ ಇತರೆ ಪ್ರಮುಖ ಕಲಾವಿದರು.