ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ರಿಲೀಸ್‌ ಆದ ‘ಯುವ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವರಾಜಕುಮಾರ್‌ ಹಾಗೂ ಸಪ್ತಮಿಗೌಡ ಅಭಿನಯದ ಸಿನಿಮಾ ಈಗ ಸದ್ದಿಲ್ಲದೆ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆದರೆ ನೀವು ಉಚಿತವಾಗಿ ಸಿನಿಮಾ ನೋಡೋಕಾಗೋದಿಲ್ಲ.

ದೊಡ್ಮನೆ ಪ್ರತಿಭೆ ಯುವರಾಜಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾ ಅದಾಗಲೇ ಒಟಿಟಿಗೆ ಬಂದಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ಮಾರ್ಚ್‌ 29ರಂದು ತೆರೆಕಂಡ ಚಿತ್ರಕ್ಕೆ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗುತ್ತಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿದೆ. ಸದ್ದಿಲ್ಲದೆ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೀವೇನಾದರೂ ಪ್ರೈಂ ಚಂದಾರರಾಗಿದ್ದರೆ ಸಿನಿಮಾ ಈಗಲೇ ಉಚಿತವಾಗಿ ನೋಡಬಹುದು ಎಂದುಕೊಂಡರೆ ನಿರಾಶೆಯಾಗೋದು ಖಂಡಿತ. ಅಮೇಜಾನ್ ಪ್ರೈಂನಲ್ಲಿ ಯುವ ಸಿನಿಮಾ ಸದ್ಯಕ್ಕೆ ಬಾಡಿಗೆ ಪದ್ಧತಿಯಲ್ಲಿ ವೀಕ್ಷಿಸಲು ಲಭ್ಯವಿದೆ. ಯುವ ಸಿನಿಮಾ ನೋಡಲು 349 ರೂಪಾಯಿ ಕೊಡಬೇಕಿದೆ.

ಯುವರಾಜಕುಮಾರ್‌ ಅವರನ್ನು ನಾಯಕನಾಗಿ ಚಂದನವನಕ್ಕೆ ಪರಿಚಯಿಸಿದ ಚಿತ್ರವಿದು. ಆ ಕಾರಣಕ್ಕೆ ಸಿನಿಮಾವನ್ನು ರಿಲೀಸ್‌ ಮಾಡಲು ದೊಡ್ಡ ಮಟ್ಟದಲ್ಲೇ ತಯಾರಿ ನಡೆಸಲಾಗಿತ್ತು. ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಾಗಿತ್ತು. ಹೊಸಪೇಟೆಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಕೂಡ ನಡೆದಿತ್ತು. ಇನ್ನು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವ ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗಿತ್ತು. ಸಾಕಷ್ಟು ಪ್ರಚಾರದೊಂದಿಗೆ ತೆರೆಕಂಡ ಸಿನಿಮಾ ಮೂರು ವಾರಗಳಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಸಪ್ತಮಿ ಗೌಡ ಚಿತ್ರದ ನಾಯಕಿಯಾಗಿ ನಟಿಸಿದ್ದು, ಅಚ್ಯುತ್‌ಕುಮಾರ್‌, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್‌, ಸುಧಾರಾಣಿ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ‘ಯುವ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಯುವರಾಜಕುಮಾರ್‌ ಅವರ ಮುಂದಿನ ಪ್ರಾಜೆಕ್ಟ್‌ ಯಾವುದಿರಬೇಕೆಂದು ಅಭಿಮಾನಿಗಳು ಕಾಯುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here