ಈ ಚಿತ್ರದ ವಿಶೇಷ ಇರುವುದು ಇಲ್ಲಿ ಕ್ಯಾಮೆರಾ ಸರ್ವಾಂತರ್ಯಾಮಿ ಅಲ್ಲ. ಅದು ನಮ್ಮ ನಿಮ್ಮೆಲ್ಲರ ಕಣ್ಣು ಅಷ್ಟೇ. ಕೋರ್ಟಿನ ಒಳಗೆ ಮತ್ತು ಹೊರಗೆ ನಮಗೆಷ್ಟು ಗೊತ್ತೋ ಅದಕ್ಕೂ ಅಷ್ಟೇ ಗೊತ್ತು. ಇದು ಕಥೆ, ಚಿತ್ರ ಥೆ ಬರೆದಿರುವವರ ಮತ್ತು ನಿರ್ದೇಶಕ ಮತ್ತು ಲಿಸಾ ಪಾತ್ರಕ್ಕಿರುವ ದೊಡ್ಡ ಸವಾಲು. ಆ ಮಟ್ಟಿಗೆ ಫ್ರೆಂಚ್ ನಿರ್ದೇಶಕ ಮತ್ತು ಬರಹಗಾರರಾದ Stéphane Demoustier’s ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ‘The girl with a bracelet’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಚಿತ್ರ ಶುರುವಾಗುವುದು ಸುಖೀಕುಟುಂಬದಂತೆ ಕಾಣುವ ಕುಟುಂಬವೊಂದು ಬೀಚ್ ತಟವೊಂದರಲ್ಲಿ ಆಟವಾಡುತ್ತಿರುವ ದೃಶ್ಯದಿಂದ. ಗಂಡ-ಹೆಂಡತಿ-ಮಗಳು ಮತ್ತು ಪುಟ್ಟ ಮಗ. ಕ್ಯಾಮೆರಾದ ಫ್ರೇಂ ಆಚೆಯಿಂದ ನಿಧಾನವಾಗಿ ಕೆಲವರು ಬರುತ್ತಾರೆ. ಆ ಹುಡುಗಿಯ ಬಳಿ ಏನೋ ಮಾತನಾಡುತ್ತಾರೆ. ಅವರಲ್ಲಿಬ್ಬರು ಪೋಲಿಸರು. ಅಪ್ಪ ಏನೋ ಪ್ರಶ್ನೆ ಕೇಳುತ್ತಿರುತ್ತಾನೆ. ಹುಡುಗಿ ತಯಾರಾಗಿ ಅವರೊಂದಿಗೆ ಹೊರಡುತ್ತಾಳೆ. ಅಲ್ಲಿಂದ ಎರಡು ವರ್ಷಗಳ ನಂತರ ಕಥೆ ಶುರುವಾಗುತ್ತದೆ.

ಈ ಹುಡುಗಿ ಲಿಸಾ, ಅವಳ ಆಪ್ತ ಗೆಳತಿಯ ಕೊಲೆಯಾಗಿದೆ. ಕೊಲೆಯ ಹಿಂದಿನ ರಾತ್ರಿ ಆ ಹುಡುಗಿಯ ಮನೆಯಲ್ಲಿ ಪಾರ್ಟಿ ಆಗಿದೆ, ಲಿಸಾ ರಾತ್ರಿ ಅಲ್ಲೇ ಉಳಿದಿದ್ದಾಳೆ. ಮರುದಿನ ಆ ಹುಡುಗಿಯ ತಾಯಿ ಬಂದು ನೋಡುವಷ್ಟರಲ್ಲಿ ಅವಳ ಕೊಲೆ ಆಗಿದೆ. ಬೆಳಗ್ಗೆ ನಾನು ತಮ್ಮನನ್ನು ಶಾಲೆಯಿಂದ ಪಿಕ್ ಮಾಡಲು ಹೊರಡುವವರೆಗೂ ಎಲ್ಲವೂ ಮಾಮೂಲಾಗೇ ಇತ್ತು ಎನ್ನುವುದು ಲಿಸಾ ಹೇಳಿಕೆ. ಆದರೆ ಕೊಲೆಯ ಸಮಯದಲ್ಲಿ ಸಿಕ್ಕ ಸುಳಿವುಗಳ ಪ್ರಕಾರ ಪೋಲಿಸರ ಅನುಮಾನ ಲಿಸಾ ಮೇಲೆ. ಅದಕ್ಕಾಗಿ ಆಕೆಯನ್ನು ಬಂಧಿಸಿ ಆರು ತಿಂಗಳುಗಳ ಕಾಲ ರಿಮ್ಯಾಂಡ್ ಹೋಂನಲ್ಲಿ ಇರಿಸಲಾಗಿದೆ. ನಂತರ ಅವಳ ಚಲನವಲನದ ಮೇಲೆ ಕಣ್ಣಿಡುವಂತಹ ಒಂದು ಕಾಲ್ಗಡವನ್ನು ಅವಳಿಗೆ ತೊಡಿಸಿ ಅವಳನ್ನು ಮನೆಗೆ ಕಳಿಸಲಾಗಿದೆ.

ಇಲ್ಲಿ ಬ್ರೇಸ್ ಲೆಟ್ ಎಂದರೆ ಕೈಗಡಗವಲ್ಲ, ಕಾಲ್ಗಡಗ. ಈಗ ಆ ಕೇಸ್ ವಿಚಾರಣೆಗೆ ಸಿದ್ಧವಾಗಿದೆ. ಚಿತ್ರ ಶುರುವಾಗುವುದೇ ಕೊಲೆಯಾದ ಹುಡುಗಿಯ ತಾಯಿಯ ಸಾಕ್ಷ್ಯದಿಂದ. ಆ ತಾಯಿಯ ನೋವಿನ ಮಾತುಗಳು, ಕಂಬನಿ, ಕೊಲೆಯಾದ ಹುಡುಗಿಯ ಮೃತದೇಹದ ಫೋಟೋ, ಅದರ ಮೇಲಿನ ಇರಿತದ ಗುರುತುಗಳು ನೋಡುಗರ ಮನಸ್ಸನ್ನು ಚೂರಾಗಿಸಿಬಿಟ್ಟಿರುತ್ತವೆ. ನೋಡುಗರ ಕಣ್ಣುಗಳಲ್ಲಿ ಲಿಸಾ ಆಗಲೇ ಅಪರಾಧಿ ಆಗಿಬಿಟ್ಟಿರುತ್ತಾಳೆ. ಆ ನೆಲೆಯಿಂದಲೇ ನಾವೆಲ್ಲರೂ ಲಿಸಾಳನ್ನು ನೋಡುತ್ತಿರುತ್ತೇವೆ.

ಈ ಚಿತ್ರ ಮುಖ್ಯವಾಗಿ ಕೋರ್ಟ್ ರೂಂನ ವಾದವಿವಾದಗಳಿಗೆ ಸಂಬಂಧಿಸಿದ್ದು ಎನ್ನುವಂತೆ ಮೇಲ್ನೋಟಕ್ಕೆ ಕಂಡರೂ, ಅದರಾಚೆಗೆ ಇದು ಒಂದು ದುರ್ಘಟನೆ ಹೇಗೆ ಅದಕ್ಕೆ ಸಂಬಂಧಿಸಿದವರೆಲ್ಲರ ಜೀವನಗಳನ್ನೂ ಬುಡಮೇಲಾಗಿಸಿಬಿಡುತ್ತದೆ ಎಂದು ಕೂಡಾ ಹೇಳುತ್ತದೆ. ಎಷ್ಟೇ ಮುಂದುವೆರೆದಿದ್ದೇವೆ, ವಿಶಾಲವಾಗಿ ಆಲೋಚಿಸುತ್ತೇವೆ ಎಂದುಕೊಂಡರೂ ನಮ್ಮ ಮಕ್ಕಳ ವಿಷಯಕ್ಕೆ ಬಂದಾಗ ಅಷ್ಟೇನೂ ವಿಶಾಲವಾಗಿ ಉಳಿಯದ ನಮ್ಮ ಕಟ್ಟುಪಾಡುಗಳು, ತೆಗೆದಿರಿಸಲು ಕಷ್ಟವಾಗುವ ನಮ್ಮ ನೈತಿಕ ನಿಲುವುಗಳು ಇಲ್ಲಿ ನಮ್ಮ ಮುಂದೆ ಬರುತ್ತವೆ.

ಯಾವುದೇ ಕಾಲವಾಗಿರಲಿ, ಹದಿಹರೆಯದವರ ಲೈಂಗಿಕತೆ ಅವರ ಹಿಂದಿನ ಜನಾಂಗದವರಿಗೆ ಅತಿಯಾಗಿಯೇ ಕಂಡುಬರುತ್ತದೆ. ಇಲ್ಲಿ ಲಿಸಾಳ ಅಪರಾಧದ ಸಾಧ್ಯತೆಯನ್ನು ನ್ಯಾಯಾಲಯದಲ್ಲಿರುವ ಬಹುಪಾಲು ಮಂದಿ, ಸ್ವಲ್ಪ ಮಟ್ಟಿಗೆ ಅವಳ ತಂದೆ ತಾಯಿ ಸಹ ಅವಳ ಲೈಂಗಿಕ ಜೀವನದ ಕಣ್ಣುಕಟ್ಟಿನಲ್ಲಿಯೇ ನೋಡುತ್ತಾರೆ. ಈ ಚಿತ್ರದ ಮುಖ್ಯ ಪಾತ್ರಧಾರಿ ಲಿಸಾ ಏಕಕಾಲದಲ್ಲಿ ಎರಡು ವಿಚಾರಣೆಗಳನ್ನು ಎದುರಿಸುತ್ತಿರುತ್ತಾಳೆ. ಒಂದು ಕೋರ್ಟಿನ ಒಳಗೆ ಮತ್ತು ಇನ್ನೊಂದು ಕೋರ್ಟಿನ ಹೊರಗೆ. ವಿಚಾರಣೆಯ ಒಂದು ಸಂದರ್ಭದಲ್ಲಿ ಅವಳ ತಂದೆ ತಾಯಿಯರೇ ಹೇಳುವ ಹಾಗೆ ಘಟನೆಗೆ ಮೊದಲು ಮತ್ತು ಘಟನೆಯ ನಂತರ ಲಿಸಾಳ ಬದುಕು ಸಂಪೂರ್ಣವಾಗಿ ಬದಲಾಗಿದೆ.

ಒಂದೊಮ್ಮೆ ಚಟುವಟಿಕೆಯ ಆಗರವಾಗಿದ್ದ, ಖುಷಿ ಸಂತಸ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ಲಿಸಾ ಈಗ ಅತಿ ಕಡಿಮೆ ಮಾತನಾಡುತ್ತಿದ್ದಾಳೆ. ಅವಳ ನಗು ಏನಿದ್ದರೂ ಅವಳ ತಮ್ಮನೊಡನೆ ಮಾತ್ರ. ಅವಳ ತಂದೆ ಕೆಲಸ ಬಿಟ್ಟು ಮಗಳನ್ನು ನೋಡಿಕೊಳ್ಳುವುದು, ಅವಳನ್ನು ಕೋರ್ಟಿಗೆ ಕರೆದುಕೊಂಡು ಹೋಗುವುದು, ವಕೀಲರ ಜೊತೆಯಲ್ಲಿ ಮಾತನಾಡುವುದು ಈ ಕೆಲಸಗಳನ್ನೇ ಮಾಡುತ್ತಿದ್ದಾನೆ. ಮಗಳ ಒಳಿತಿಗಾಗಿಯೇ ಎಂದುಕೊಂಡು ಹದಿಹರೆಯದ ಮಗಳ ಬದುಕಿನ ಎಲ್ಲಾ ಹೆಜ್ಜೆಗಳನ್ನೂ ಕಾಯುತ್ತಿರುತ್ತಾನೆ. ಈ ವಿಚಾರಣೆ ಮುಗಿದ ಮೇಲೆ ನಾನು ಹೇಗಿರಬೇಕು ಎಂದು ಶಾಸಿಸುವುದನ್ನು ಬಿಡುವೆಯಾ ಎಂದು ಒಂದು ಹಂತದಲ್ಲಿ ಲಿಸಾ ಕೇಳುತ್ತಾಳೆ. ತಾಯಿ ಸರ್ಜನ್, ಕೆಲಸಕ್ಕೆ ಹಿಂದಿರುಗಿದ್ದಾಳೆ. ಮನೆಯಿಂದ ಹೊರಗೆ ಹೋದರೆ ಮಾತ್ರ ನಾನು ಬದುಕುತ್ತೇನೆ ಅನ್ನಿಸಿಬಿಟ್ಟಿದೆ ಅವಳಿಗೆ.

ಪ್ರತಿದಿನ ಕೋರ್ಟಿಗೆ ಮಗಳ ಜೊತೆಗೆ ಬರುವುದು ತಂದೆ ಮಾತ್ರ. ಕಡೆಗೊಮ್ಮೆ ತಾಯಿ ಕೋರ್ಟಿಗೆ ಬಂದಾಗ ನ್ಯಾಯಾಲಯದಲ್ಲಿ ಅವಳ ಆ ನಡುವಳಿಕೆ ಸಹ ಪ್ರಶ್ನೆಗೊಳಪಡುತ್ತದೆ. ‘ಸ್ವಂತ ತಾಯಿಯಾಗಿದ್ದೂ’ ಅದು ಹೇಗೆ ನೀವು ಮಗಳೊಟ್ಟಿಗೆ ಬರದೆ ಉಳಿದಿರಿ? ಅಂದರೆ ನಿಮಗೂ ನಿಮ್ಮ ಮಗಳು ಅಪರಾಧಿ ಅನ್ನಿಸಿತ್ತಾ ಎಂದೆಲ್ಲಾ ಪ್ರಶ್ನಿಸಿ ಅವಳನ್ನು ಮುಜುಗುರಕ್ಕೆ, ನಾಚಿಕೆಗೆ ಒಳಪಡಿಸಲಾಗುತ್ತದೆ. ತಾಯಿ ಪ್ರಾಮಾಣಿಕವಾಗಿ ತನ್ನ ಮಿತಿಯನ್ನು ಒಪ್ಪಿಕೊಳ್ಳುತ್ತಾಳೆ. ಇಂತಹ ಸಂದರ್ಭದಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೂ ನನ್ನ ಗಂಡನ ಮೇಲೆಯೇ ಆಧಾರಪಟ್ಟೆವು ಎಂದು ಹೇಳಿಕೊಳ್ಳುತ್ತಾಳೆ. ಆದರೆ ಅವಳಿಗೆ ಜೊತೆಯಾಗಿ ನಿಲ್ಲುವುದು ಲಿಸಾ. ಅವಳು ಹೇಳುವ ಮಾತು, ‘ಇಲ್ಲಿ ಕಟಕಟೆಯಲ್ಲಿ ನಿಂತಿರುವುದು ನಾನು, ಇಲ್ಲಿ ವಚಾರಣೆಗೆ ಒಳಪಟ್ಟಿರುವವಳು ನಾನು. ನನ್ನ ತಾಯಿಯಲ್ಲ..’ ಸಮಾಜದ ಅಘೋಷಿತ ನಿಯಮಗಳು ಮತ್ತು ನಿರೀಕ್ಷೆಗಳನ್ನು ಆ ಹುಡುಗಿ ಪ್ರಶ್ನಿಸುತ್ತಾಳೆ. ತಂದೆ ಅವಳನ್ನು ಗೌರವದಿಂದ ನೋಡುವುದು, ಅವಳು ಬೆಳೆದಿದ್ದಾಳೆ ಎಂದು ಒಪ್ಪಿಕೊಳ್ಳುವುದು ನ್ಯಾಯಾಲಯದಲ್ಲಿ ಅವಳು ಅಮ್ಮನ ಪರವಾಗಿ ಎದ್ದು ನಿಂತ ನಂತರದ ದೃಶ್ಯಗಳಲ್ಲಿ.

ಇಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಕೊಲೆ ನಡೆಯುವ ಕೆಲವೇ ದಿನಗಳ ಮೊದಲು ಕೊಲೆಯಾದ ಹುಡುಗಿ ಲಿಸಾ ಇನ್ನೊಬ್ಬ ಹುಡುಗನೊಂದಿಗೆ ಲೈಂಗಿಕ ಕ್ರಿಯೆಯೊಂದರಲ್ಲಿ ನಿರತವಾಗಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುತ್ತಾಳೆ. ಅದನ್ನು ತೆಗೆ ಎಂದು ಲಿಸಾ ಕೇಳಿದರೂ ಹಾಗೆ ಮಾಡುವುದಿಲ್ಲ. ಸಿಟ್ಟಾಗಿ ಒಂದು ವಾಯ್ಸ್ ನೋಟ್ ಕಳಿಸುವ ಲಿಸಾ ಅದರಲ್ಲಿ, ‘ಮರ್ಯಾದೆಯಾಗಿ ಅದನ್ನು ತೆಗೆ, ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಡುತ್ತೇನೆ!’ ಎಂದು ಹೇಳಿರುತ್ತಾಳೆ. ನ್ಯಾಯಾಲಯದಲ್ಲಿ ಅದನ್ನು ಸಲ್ಲಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಅದನ್ನು ಕೊಲೆಗೆ ಮೋಟೀವ್ ಆಗಿ ಮಂಡಿಸುತ್ತಾಳೆ.

ಆಗ ಸಾಕ್ಷಿ ಹೇಳಲು ಬರುವ ಆ ಹುಡುಗ, ಒಂದು ಬೆಟ್‌ನಲ್ಲಿ ಸೋತಿದ್ದಕ್ಕಾಗಿ ಲಿಸಾ ಹಾಗೆ ಮಾಡಿದ್ದಾಗಿಯೂ, ತಾನು ಮತ್ತು ಕೊಲೆಯಾದ ಹುಡುಗಿ ಸಂಗಾತಿಗಳು ಎಂದೂ ಹೇಳುತ್ತಾನೆ. ಅಲ್ಲಿದ್ದ ನ್ಯಾಯಾಧೀಶರು ಅರ್ಥವಾಗದೆ, ಅಂದರೆ ಬೆಟ್‌ನಲ್ಲಿ ಸೋತಿದ್ದಕ್ಕೆ ಲಿಸಾ ನಿನ್ನೊಡನೆ ಲೈಂಗಿಕ ಕ್ರಿಯೆಯೊಂದಕ್ಕೆ ತೊಡಗಿರುವುದನ್ನು ನಿನ್ನ ಪ್ರೇಮಿಯೇ ಚಿತ್ರೀಕರಿಸಿ ಅದನ್ನು ಅಪ್ಲೋಡ್ ಮಾಡಿದಳೇ ಎಂದು ಕೇಳುತ್ತಾರೆ. ಅದಕ್ಕೆ ಒಪ್ಪಿಕೊಳ್ಳುವ ಆತ ಆ ಕ್ರಿಯೆಯೆ ಇಡೀ ಜವಾಬ್ದಾರಿಯನ್ನು ಲಿಸಾ ಮೇಲೆ ಹೊರೆಸುತ್ತಾನೆ. ಬೆಟ್ ಸೋತ ಮೇಲೆ ಆ ಕ್ರಿಯೆಗೆ ಅವಳು ಒಪ್ಪಿಕೊಳ್ಳುತ್ತಾಳೆ ಎಂದು ಕೊಂಡಿರಲಿಲ್ಲ. ಆಮೇಲೆ ಗೊತ್ತಾಯಿತು, ಅವಳಿಗೆ ಇನ್ನೂ ಹಲವರ ಜೊತೆ ಸಲಿಗೆ ಇತ್ತು ಎಂದು. ಅವಳೊಂದು ತರಹ ‘Easy’ ಎಂದು ಹೇಳುತ್ತಾನೆ.

ಪ್ರಾಸಿಕ್ಯೂಟರ್ ಆಗಿದ್ದ ಮಹಿಳೆ ಸಹ ಲಿಸಾಳನ್ನು ಅವಮಾನಗೊಳಿಸಿ ಅವಳನ್ನು ಮುರಿಯಬೇಕು ಎಂದು ಲಿಸಾಳಿಗೆ ಅದೇ ಪ್ರಶ್ನೆ ಕೇಳುತ್ತಾಳೆ. ‘ಹಾಗಾದರೆ ನೀನು ‘Easy’ ಎನ್ನುವುದು ನಿಜವೇ ಎಂದು ಕೇಳುತ್ತಾಳೆ. ಆಗ ತಣ್ಣನೆಯ ದನಿಯಲ್ಲಿ ಲಿಸಾ ಕೇಳುತ್ತಾಳೆ, ‘ಇದೇ ಪ್ರಶ್ನೆಯನ್ನು ನೀವು ಆ ಹುಡುಗನಿಗೆ ಯಾಕೆ ಕೇಳುತ್ತಿಲ್ಲ..? ಅವನೂ ಸಹ ‘Easy’ ಅಂತಾಗುವುದಿಲ್ಲವೆ?….ಅಲ್ಲಿ ಆ ದಿನ ಏನೇ ನಡೆದಿದ್ದರೂ ಅದು ಇಬ್ಬರ ಸಮ್ಮತಿ ಮತ್ತು ಸಹಮತದಿಂದಲೇ ನಡೆಯಿತು… ‘ ಆ ಸಂದರ್ಭದ ವೀಡಿಯೋ ಸಹ ಇದೇ ಮಾತನ್ನು ಪುಷ್ಟೀಕರಿಸುತ್ತದೆ. ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಮುಖ್ಯ ಪಾತ್ರಧಾರಿ Melissa Guers ಅಭಿನಯ. ಯಾವುದೇ ಕ್ಷಣದಲ್ಲೂ ನಿರ್ದೇಶಕನ ಕಣ್ಣೋಟದ ಅಭಿನಯವನ್ನು ಆಕೆ ಮೀರುವುದಿಲ್ಲ.

ನ್ಯಾಯಾಲಯದಲ್ಲಿ ಇವೆಲ್ಲಾ ನಡೆಯುತ್ತಿರುತ್ತದೆ. ನಮಗೆ ಒಮ್ಮೆ ಲಿಸಾ ಅಪರಾಧಿ ಇರಬೇಕು ಅನ್ನಿಸಿದರೆ ಮತ್ತೊಮ್ಮೆ ಇಲ್ಲ ಅನ್ನಿಸುತ್ತಿರುತ್ತದೆ. ಲಿಸಾ ಹೇಳುವ ಮಾತುಗಳು ಮುಗ್ಧತೆಯವಾ ಅಥವಾ ಅತೀ ಬುದ್ಧಿವಂತಿಕೆಯವಾ ಎನ್ನುವ ಪ್ರಶ್ನೆ ಮೂಡುತ್ತಿರುತ್ತದೆ. ಇಡೀ ಚಿತ್ರದಲ್ಲಿ ಅವಳು ಎಲ್ಲೂ, ಯಾರನ್ನೂ ನಂಬಿಸಲು ಪ್ರಯತ್ನಿಸುವುದಿಲ್ಲ, ಭಾವುಕತೆಯನ್ನು ಪ್ರದರ್ಶಿಸುವುದಿಲ್ಲ. ಭಾವರಾಹಿತ್ಯವೇ ಮೈವೆತ್ತಂತೆ ನಿಲ್ಲುವ, ಮಾತನಾಡುವ ಲಿಸಾ ಭಾವೋತ್ಕಟತೆಯಲ್ಲಿ ಸಿಡಿಯುವುದು ಒಮ್ಮೆ ಮಾತ್ರ. ಅದೂ ಇನ್ನೇನು ತೀರ್ಪಿಗೆ ಮೊದಲು.

ಕೊಲೆಯಾದ ಗೆಳತಿಯ ತಾಯಿಯನ್ನು ಉದ್ದೇಶಿಸಿ ಮಾತಾಡುವ ಆಕೆ, ‘ಈ ವಿಚಾರಣೆ ಶುರುವಾದ ಮೊದಲ ದಿನ ರಾತ್ರಿ ನಾನು ನಿಮ್ಮ ಮನೆಯ ಬಳಿ ಬಂದಿದ್ದೆ. ಈ ಮೊದಲೇ ನಾನು ನಿಮ್ಮನ್ನು ಮಾತನಾಡಿಸಬೇಕಿತ್ತು, ಅದಾಗದಿದ್ದರೆ ಕನಿಷ್ಠ ಬರೆಯಬೇಕಾಗಿತ್ತು. ಆದರೆ…. ನನ್ನನ್ನು ನಂಬಿ ಮತ್ತೊಮ್ಮೆ ನಾನು ಆದಿನ, ಆ ಕ್ಷಣಕ್ಕೆ ಹೋಗುವುದು ಸಾಧ್ಯವಾಗುವುದಿದ್ದರೆ ಅಂದು ನಾನು ಅವಳನ್ನು ಬಿಟ್ಟು ಹೋಗುತ್ತಿರಲಿಲ್ಲ.. ನನ್ನನ್ನು ನಂಬಿ’ ಎಂದು ಕಣ್ಣೀರು ಹರಿಸುತ್ತಾಳೆ. ನಮ್ಮ ಎದೆ ತೇವವಾಗುವ ಘಳಿಗೆಯಲ್ಲಿ ಮತ್ತೆ ಪ್ರಶ್ನೆ, ತೀರ್ಪಿನ ಮೊದಲ ಕ್ಷಣದಲ್ಲಿ ಇವಳು ಹೀಗೆ ಮಾತನಾಡುವ ಉದ್ದೇಶವಾದರೂ ಏನು? ಇದು ಆಕೆಯ ಮಾನುಪ್ಯುಲೇಶನ್ ಇರಬಹುದೆ? ಏಕೆಂದರೆ ಅವಳ ಬಾಯಿಂದ ಮಾತುಗಳನ್ನು ಹೊರಡಿಸಲು ಪ್ರಾಸಿಕ್ಯೂಟರ್ ಪಡುವ ಪಾಡು ಅಷ್ಟಿಷ್ಟಲ್ಲ.

ಈ ಹುಡುಗಿ ಅಗತ್ಯ ಮೀರಿ ಒಂದೂ ಮಾತಾಡುವುದಿಲ್ಲ, ತಾನು ಮಾತನಾಡಲೇಬೇಕು ಅನ್ನುವ ವಿಷಯಗಳನ್ನು ಬಿಟ್ಟು ಮತ್ತೇನೂ ಮಾತನಾಡುವುದಿಲ್ಲ. ಅದರ ಕಾನೂನಾತ್ಮಕ ಪರಿಣಾಮಗಳ ಸಂಪೂರ್ಣ ಅರಿವು ಅವಳಿಗಿದೆ ಅನ್ನಿಸುತ್ತಿರುತ್ತದೆ. ಆಕೆಯ ಕೇಸ್ ವಾದಿಸುವ ವಕೀಲೆ ಸಹ ಅಷ್ಟೇ, ಹೆಚ್ಚಿಗೆ ಮಾತಾಡುವುದಿಲ್ಲ, ಎಮೋಶನಲ್ ಕಾರ್ಡ್ ಪ್ಲೇ ಮಾಡುವುದಿಲ್ಲ. ಕಡೆಯ ಮಾತಾಗಿ, ಇಲ್ಲಿ ನಿರ್ಧಾರವಾಗಬೇಕಾಗಿರುವುದು ಸಂಶಯಕ್ಕೆ ಎಡೆಯಿರದಂತೆ ಅವಳು ಕೊಲೆಗಾರ್ತಿ ಹೌದಾ ಅಥವಾ ಇಲ್ಲವಾ ಎನ್ನುವುದಷ್ಟೇ ಹೊರತು, ಅವಳ ಲೈಂಗಿಕ ಜೀವನವಲ್ಲ ಎಂದು ಒತ್ತಿ ಹೇಳುತ್ತಾ ಪ್ರಾಸಿಕ್ಯೂಟರ್ ಪ್ರಯತ್ನಗಳನ್ನು ಮಣ್ಣು ಪಾಲಾಗಿಸುತ್ತಾಳೆ.

ಇನ್ನು ಈ ಚಿತ್ರದ ವಿಶೇಷ ಇರುವುದು ಇಲ್ಲಿ ಕ್ಯಾಮೆರಾ ಸರ್ವಾಂತರ್ಯಾಮಿ ಅಲ್ಲ. ಅದು ನಮ್ಮ ನಿಮ್ಮೆಲ್ಲರ ಕಣ್ಣು ಅಷ್ಟೇ. ಕೋರ್ಟಿನ ಒಳಗೆ ಮತ್ತು ಹೊರಗೆ ನಮಗೆಷ್ಟು ಗೊತ್ತೋ ಅದಕ್ಕೂ ಅಷ್ಟೇ ಗೊತ್ತು. ಇದು ಕಥೆ, ಚಿತ್ರ ಥೆ ಬರೆದಿರುವವರ ಮತ್ತು ನಿರ್ದೇಶಕ ಮತ್ತು ಲಿಸಾ ಪಾತ್ರಕ್ಕಿರುವ ದೊಡ್ಡ ಸವಾಲು. ಆ ಮಟ್ಟಿಗೆ ಫ್ರೆಂಚ್ ನಿರ್ದೇಶಕ ಮತ್ತು ಬರಹಗಾರರಾದ Stéphane Demoustier’s ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಇಲ್ಲಿ ಲಿಸಾ ಪಾತ್ರಧಾರಿ ಯಾವುದೇ ಹಂತದಲ್ಲಿ, ಯಾವುದೇ ಮಾತಿನಲ್ಲಿ ಅಥವಾ ಮುಖದ ಭಾವದಲ್ಲಿ ಅವರು ಆ ಬಗ್ಗೆ ಏನೂ ಕಾಣಿಸದಂತೆ ಎಚ್ಚರವಾಗಿರಬೇಕು. ಅದು ಇಲ್ಲಿ ಅತ್ಯಂತ ಸಮರ್ಪಕವಾಗಿ ಜಾರಿಯಾಗಿದೆ.

ಇದೆಲ್ಲಾ ಮಾಡುವಾಗ ಗಮನಿಸಬೇಕಾದ ಒಂದು ವಿಷಯ ಎಂದರೆ ಚಿತ್ರದ ಹಿನ್ನೆಲೆ ಸಂಗೀತ. ಏಕೆಂದರೆ ಅದು ಸನ್ನಿವೇಶದ ಭಾವವನ್ನು ಹೇಳುತ್ತಾ, ನಮಗೇ ಗೊತ್ತಿಲ್ಲದಂತೆ ನಾವು ಯಾವ ರೀತಿಯಲ್ಲಿ ಆ ಸನ್ನಿವೇಶವನ್ನು ಗ್ರಹಿಸಬೇಕು ಎನ್ನುವುದನ್ನೂ ಹೇಳುತ್ತಿರುತ್ತದೆ. ಬಹುಶಃ ಅದೇ ಕಾರಣಕ್ಕಿರಬೇಕು, ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಅತ್ಯಂತ ಕಡಿಮೆ ಬಳಸಲಾಗಿದೆ. ನಮ್ಮ ಜೀವನದ ಕ್ಷಣಗಳಲ್ಲಿ ಹೇಗೆ ಹಿನ್ನೆಲೆ ಸಂಗೀತ ಇರುವುದಿಲ್ಲವೋ ಹಾಗೆ ಇಲ್ಲಿನ ಪ್ರಮುಖ ದೃಶ್ಯಗಳಲ್ಲಿ ಮಾತು ಮತ್ತು ಮೌನ ಮಾತ್ರ ಕೆಲಸ ಮಾಡುತ್ತದೆ. ಅದು ಸಹ ಈ ಚಿತ್ರದ ವಿಶೇಷ. ಇಡೀ ಚಿತ್ರದ ಬಹುಪಾಲು ದೃಶ್ಯಗಳು ಇಕ್ಕಟ್ಟಿನಲ್ಲಿಯೇ ಚಿತ್ರೀಕರಣಗೊಂಡಿವೆ. ಒಂದು ನಿಗದಿತ ಅಗೋಚರ ವೃತ್ತವನ್ನು ದಾಟದಂತೆ ದಿನದ 24 ಗಂಟೆಗಳೂ ಕಾಲ್ಗಡಗದ ಸಂಕಲೆಯನ್ನು ಧರಿಸಿದ ಲಿಸಾ ಬದುಕಿಗೆ ಅದು ಕನ್ನಡಿ ಹಿಡಿಯುತ್ತದೆ. ನೆರಳು ಬೆಳಕಿನ ಸಂಯೋಜನೆ ಸೊಗಸಾಗಿ ಕಥೆ ಹೇಳುತ್ತದೆ.

‘ದ ಅಕ್ಯೂಸ್ಡ್’ – ಎಂದು ಅರ್ಜೆಂಟೈನಾದಲ್ಲಿ ಬಂದ ಚಿತ್ರವನ್ನು ಇಲ್ಲಿ ಫ್ರೆಂಚ್‌ನಲ್ಲಿ ಮರುನಿರ್ಮಿಸಲಾಗಿದೆ. ಚಿತ್ರ ನೋಡುವುದಕ್ಕೆ ವಿಶೇಷವಾಗಿರುವುದಂತೂ ಹೌದು, ಜೊತೆಯಲ್ಲಿ ಈ ಜಾನರ್‌ನ ಚಿತ್ರಗಳ ಅಧ್ಯಯನಕ್ಕೆ ಕೂಡಾ ಒದಗಿಬರುತ್ತದೆ.

Previous articleಡಾರ್ಲಿಂಗ್‌ ಕೃಷ್ಣರ ‘ಲೋಕಲ್ ಟ್ರೈನ್’ ಏಪ್ರಿಲ್‌ 1ರಿಂದ
Next articleಲೂಸ್ ಮಾದ ಈಗ ‘ಕಿರಿಕ್ ಶಂಕರ್’; ಹೊಸ ಹುಡುಗಿ ಅದ್ವಿಕ ಹಿರೋಯಿನ್‌

LEAVE A REPLY

Connect with

Please enter your comment!
Please enter your name here