ಕ್ರಿಕೆಟ್ ಟೀಂಗೆ ಆಯ್ಕೆಯಾಗುವುದು ಸುಲಭದ ವಿಷಯವಲ್ಲ. ಅಲ್ಲಿಯೂ ಜಾತಿ ತಾರತಮ್ಯವಿರುತ್ತದೆ. ಆಡುತ್ತಿರುವುದು ಗಲ್ಲಿ ಕ್ರಿಕೆಟ್ ಆಗಿದ್ದರೂ ಇಲ್ಲಿ ಇಬ್ಬರು ವ್ಯಕ್ತಿಗಳ ಅಹಂ ನಡುವಿನ ಸಂಘರ್ಷ ಅವರನ್ನು ಯಾವ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ತೋರಿಸುವ ಸಿನಿಮಾ ಇದು. ‘ಲಬ್ಬರ್ ಪಂದು’ ತಮಿಳು ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಲಬ್ಬರ್ ಪಂದು’ ಎಂಬ ಹೆಸರು ಕೇಳಿದ ಕೂಡಲೇ ರಬ್ಬರ್ ಬಾಲ್ ಕ್ರಿಕೆಟ್ ನೆನಪಾಗುತ್ತದೆ ತಾನೇ? ಈ ಸಿನಿಮಾ ಕೂಡಾ ಕ್ರಿಕೆಟ್‌ಗೆ ಸಂಬಂಧಪಟ್ಟಿದ್ದು. ಅಂದಹಾಗೆ ಈ ಸಿನಿಮಾ ಕ್ರಿಕೆಟ್ ಕ್ರೀಡಾಪಟುವಿನ ಜೀವನ ಕತೆ ಏನೂ ಅಲ್ಲ, ಇದು ಕ್ರಿಕೆಟ್ ಮತ್ತು ಪ್ರೇಮದ ಕತೆ. ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಸಂಘರ್ಷದೊಂದಿಗೆ ‘ಲಬ್ಬರ್ ಪಂದು’ ಆರಂಭವಾಗುತ್ತದೆ. ಪೂಮಾಲೈ ಎಂಬ ‘ಗೆತ್ತು’ (ಅಟ್ಟ ದಿನೇಶ್) ಅದ್ಬುತ ಆಟಗಾರ. ಆತ ಕ್ರೀಸಿಗೆ ಇಳಿದರೆ ರನ್ ಸುರಿಮಳೆ. ಮೊದಲ ಬಾಲ್ ದೇವರಿಗೆ, ನಂತರದ ಬಾಲ್ ಬೌಂಡರಿಯಿಂದಾಚೆ. ತಂಡವನ್ನು ಗೆಲ್ಲಿಸುವ ಈ ಬ್ಯಾಟರ್, ವಿಜಯ್ ಕಾಂತ್ ಅಭಿಮಾನಿ. ಈತ ಕ್ರೀಸಿಗಿಳಿಯುತ್ತಾನೆಂದರೆ ಸ್ಪೀಕರ್‌ನಲ್ಲಿ ವಿಜಯ್ ಕಾಂತ್ ಹಾಡು ಪ್ಲೇ ಆಗುತ್ತೆ. ಗೆತ್ತು ಬೌಂಡರಿ, ಸಿಕ್ಸರ್ ಬಾರಿಸಿ ಕ್ರೀಡಾ ಪ್ರೇಮಿಗಳನ್ನು ಮನರಂಜಿಸುತ್ತಾನೆ ನಿಜ. ಆದರೆ ಅವ ಪುಳಕಗೊಳ್ಳುವ ಕ್ಷಣ ಎಂದರೆ ಅವನ ವಿಕೆಟ್ ಬಿದ್ದಾಗ. ತನ್ನನ್ನು ಔಟ್ ಮಾಡಿದ ಬೌಲರ್ ಖುಷಿಯಿಂದ ಕುಣಿದಾಡಿದರೆ, ನಾನು most valuable player ಎಂದು ಗೆತ್ತು ಮನಸ್ಸಿನೊಳಗೇ ಸಂಭ್ರಮಿಸುತ್ತಾನೆ. ಅಂತಾ ಗತ್ತು, ಗೈರತ್ತು ಇರುವ ಮನುಷ್ಯ ಈ ಗೆತ್ತು.
ಪೇಟಿಂಗ್ ಕೆಲಸ ಬಿಟ್ಟು ಆಗಾಗ ಗಲ್ಲಿ ಕ್ರಿಕೆಟ್ ಆಡಲು ಹೋಗುವುಕ್ಕೆ ಪತ್ನಿ ಯಶೋದೆ (ಸ್ವಾಸಿಕಾ) ಆಗಾಗ ಜಗಳವಾಡುತ್ತಿರುತ್ತಾಳೆ. ಗೆತ್ತುಗೆ ಕ್ರಿಕೆಟ್ ಎಂದರೆ ಎಷ್ಟು ಇಷ್ಟವೋ, ಯಶೋಧೆಗೆ ಕ್ರಿಕೆಟ್ ಅಂದರೆ ಕೋಪ. ತನ್ನ ಗಂಡ ಎಲ್ಲೇ ಕ್ರಿಕೆಟ್ ಆಡುತ್ತಿದ್ದರೂ ಅಲ್ಲಿಗೆ ಹೋಗಿ ಆತನನ್ನು ಬೈದು ವಾಪಸ್ ಕರೆದುಕೊಂಡು ಬರುವ ಜೋರಿನ ಹೆಂಗಸು ಈಕೆ. ಆಕೆಯ ಕಣ್ತಪ್ಪಿಸಿ ಆಟ ಆಡಲು ಹೋಗುವ ಗೆತ್ತುಗೆ ಒಬ್ಬಳೇ ಮಗಳು. ಆಕೆ ಹಾಸ್ಪಿಟಲ್‌ನಲ್ಲಿ ನರ್ಸ್. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗೆತ್ತು ತನ್ನ ಯೌವನದಲ್ಲಿ ಸಾಕಷ್ಟು ಕ್ರಿಕೆಟ್ ಮ್ಯಾಚ್‌ಗಳನ್ನು ಆಡಿ ಪಂದ್ಯ ಗೆಲ್ಲಿಸಿದ್ದ. ಈಗ ವಯಸ್ಸು 50ರ ಹತ್ತಿರ ಇದ್ದರೂ ಕ್ರಿಕೆಟ್ ಆಡುವ ಜೋಷ್ ಕಮ್ಮಿಯಂತೂ ಆಗಿಲ್ಲ.
ಅಲ್ಲೊಬ್ಬ ಹುಡುಗ, ಹೆಸರು ಅನ್ಬು (ಹರೀಶ್ ಕಲ್ಯಾಣ್). ಕ್ರಿಕೆಟ್ ಅಂದರೆ ಪಂಚಪ್ರಾಣ, ಉತ್ತಮ ಬೌಲರ್. ಊರಿನ ಬೆಸ್ಟ್ ಟೀಂ ‘ಜಾಲಿ ಫ್ರೆಂಡ್ಸ್’ ಟೀಂ ಜತೆ ಆಡಬೇಕು ಎಂಬುದು ಅವನ ಕನಸು. ಆದರೆ ಜಾತಿ ತಾರತಮ್ಯದಿಂದಾಗಿ ಟೀಂನಲ್ಲಿ ಅವನಿಗೆ ಸ್ಥಾನ ಸಿಗುವುದೇ ಇಲ್ಲ. ಹಾಗಾಗಿ ಅವನು ಊರಿನ ಎಲ್ಲ ಟೀಂನಲ್ಲೂ ಗೆಸ್ಟ್ ಪ್ಲೇಯರ್ ಆಗಿ ಬಿಡುತ್ತಾನೆ.
ಮದುವೆಯೊಂದರಲ್ಲಿ ಅನ್ಬು ಯುವತಿಯೊಬ್ಬಳನ್ನು ಕಂಡು ಮನಸೋಲುತ್ತಾನೆ. ಆಕೆಯ ಹೆಸರು ದುರ್ಗಾ. ಇಬ್ಬರೂ ಪರಿಚಿತರಾಗಿ ಈ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅನ್ಬುಗೆ ಗೆತ್ತು ಅವರ ಆಟ ನೋಡಿ, ಹೇಗಾದರೂ ಇವನ ವಿಕೆಟ್ ಕಬಳಿಸಬೇಕು ಎಂದಿರುತ್ತದೆ. ಗೆತ್ತುಗೆ ಅವನದ್ದೇ ಆದ ಅಭಿಮಾನಿ ಬಳಗವಿದೆ. ಆತ ಆಟವಾಡುತ್ತಿದ್ದರೆ ನಿಂತಲ್ಲೇ ಕಾಮೆಂಟರಿ ಹೇಳುವ ಆಪ್ತ ಗೆಳೆಯನಿದ್ದಾನೆ. ಹೀಗಿರುವಾಗ ಪಂದ್ಯವೊಂದರಲ್ಲಿ ಗೆತ್ತುವನ್ನು ಅನ್ಬು ಔಟ್ ಮಾಡುತ್ತಾನೆ. ಇದೊಂದು ಸಾದಾ ವಿಕೆಟ್ ಎಂಬಂತೆ ಅನ್ಬು ವರ್ತಿಸಿದ್ದನ್ನು ನೋಡಿ ಗೆತ್ತುಗೆ ಮೈ ಉರಿದುಬಿಡುತ್ತದೆ. ತನ್ನಂಥಾ ಹಿರಿಯ ಆಟಗಾರನನ್ನು ಮಗನ ವಯಸ್ಸಿನ ಹುಡುಗ ಸುಲಭವಾಗಿ ಔಟ್ ಮಾಡಿದ ಎಂಬುದು ಅವನ ನೋವು. ಇಲ್ಲಿ ನೋವು ಎಂಬುದಕ್ಕಿಂತ ಹೆಚ್ಚು Ego ಹರ್ಟ್ ಆಗಿರುತ್ತದೆ.
ಮುಂದಿನ ಮ್ಯಾಚ್‌ಗಳಲ್ಲಿ ಇಬ್ಬರ ನಡುವೆ ಪೈಪೋಟಿಗಿಂತ ಹೆಚ್ಚು ಅಹಂ ಸಂಘರ್ಷವೇ ಹೆಚ್ಚು.ಇತ್ತ ದುರ್ಗಾ, ತನ್ನನ್ನು ಮದುವೆಯಾಗಬೇಕಾದರೆ ಅಪ್ಪ ಒಪ್ಪಬೇಕು, ಮನೆಗೆ ಬಂದು ಹೆಣ್ಣು ಕೇಳಬೇಕು ಅಂತಾಳೆ. ಅಷ್ಟರಲ್ಲೇ ತಾನು ಯಾರ ಜತೆ ಗುದ್ದಾಡುತ್ತಿದ್ದೆನೋ ಆ ಗೆತ್ತುವಿನ ಮಗಳು ಆಕೆ ಎಂಬುದು ಅನ್ಬುಗೆ ಗೊತ್ತಾಗುತ್ತದೆ. ಆತ ಗೆತ್ತುನಲ್ಲಿ ಕ್ಷಮೆ ಕೇಳಲು ಹೋದರೂ ಗೆತ್ತು ತನ್ನ ಅಹಂ ಬಿಡುವುದಿಲ್ಲ. ಇತ್ತ ದುರ್ಗಾಳ ಅಮ್ಮ, ಕ್ರಿಕೆಟ್ ಆಡುವವನಿಗೆ ನಿನ್ನನ್ನು ಮದುವೆ ಮಾಡಿಕೊಡುವುದಿಲ್ಲ ಅಂತಾರೆ.
ಕ್ಲಬ್‌ನ 20ನೇ ವಾರ್ಷಿಕೋತ್ಸವಕ್ಕೆ ದೊಡ್ಡ ಮಟ್ಟದಲ್ಲೇ ಪಂದ್ಯ ಆಯೋಜನೆ ಆಗಿರುತ್ತದೆ. ಅನ್ಬುನನ್ನು ಕೂಡಾ ಟೀಂನಲ್ಲಿ ಸೇರಿಸಬೇಕು ಎಂಬ ಕರುಪ್ಪಯ್ಯ ಮನವಿ ಮಾಡಿದರೂ ‘ಜಾಲಿ ಫ್ರೆಂಡ್ಸ್’ ಒಪ್ಪುವುದಿಲ್ಲ. ಕ್ರಿಕೆಟ್ ಆಡಲೇ ಬೇಕು ಎಂದಿದ್ದರೆ ಆತ ಟೀಂ ಆಗಿ ಬರಲಿ ಅಂತಾರೆ. ಈ ಸವಾಲನ್ನು ಸ್ವೀಕರಿಸಿದ ಅನ್ಬು ತನ್ನದೇ ಆದ ತಂಡ ರೂಪಿಸಿದ್ದು, ಅದರಲ್ಲಿ ಗೆತ್ತುಗೆ ಸ್ಥಾನ ನೀಡಿರುತ್ತಾನೆ. ಅನ್ಬುವಿನ ತಂಡ ಚೆನ್ನಾಗಿ ಆಡಿ ಫೈನಲ್‌ವರೆಗೂ ತಲುಪುತ್ತದೆ.
ದುರ್ಗಾ ಮದುವೆಯಾಗುವುದಾದರೆ ಅನ್ಬುನನ್ನೇ ಎಂದು ಪಟ್ಟು ಹಿಡಿದಿರುತ್ತಾಳೆ. ಅದೊಂದು ನಿರ್ಣಾಯಕ ಪಂದ್ಯ. ನಿನ್ನ ಹುಡುಗ ಇಂದು ಬರದೇ ಹೋದರೆ ನೀನು ನಾನು ಹೇಳಿದವನನ್ನು ಮದುವೆ ಆಗಬೇಕು ಎಂದು ಯಶೋದಾ ಮಗಳಿಗೆ ಹೇಳಿರುತ್ತಾಳೆ. ಅವ ಬಂದೇ ಬರುತ್ತಾನೆ, ನನಗೆ ನನ್ನ ಪ್ರೀತಿ ಮೇಲೆ ನಂಬಿಕೆ ಇದೆ ಅಂತಾಳೆ ದುರ್ಗಾ. ಆ ಮ್ಯಾಚ್ ಶುರುವಾಗುವ ಮುನ್ನ ಅನ್ಬು, ದುರ್ಗಾ ಮನೆಗೆ ಬರುತ್ತಾನೆ. ಸರಿ, ನೀನು ಬಂದಿದ್ದೀಯಲ್ಲಾ, ಇಷ್ಟು ಸಾಕು. ನೀನು ಹೋಗಿ ಮ್ಯಾಚ್ ಆಡು ಎಂದು ದುರ್ಗಾ, ಅನ್ಬುನನ್ನು ಕಳಿಸಿಕೊಡುತ್ತಾಳೆ.
ಫೈನಲ್ ಪಂದ್ಯ ಜಾಲಿ ಫ್ರೆಂಡ್ಸ್ ವಿರುದ್ಧ. ಹೇಗಾದರೂ ಮಾಡಿ ಕಪ್ ಗೆಲ್ಲಲೇ ಬೇಕೆಂಬ ತವಕ ಜಾಲಿ ಫ್ರೆಂಡ್ಸ್‌ನದ್ದು. ಗೆತ್ತು ತನ್ನ ಅಹಂನ್ನು ಬದಿಗಿಟ್ಟು ಅನ್ಬು ಜತೆ ನಿಲ್ಲುತ್ತಾನೆ. ಕೊನೆಯ ಬಾಲ್ ನಿರ್ಣಾಯಕ. ಅನ್ಬು ಟೀಂ ಗೆಲ್ಲಬೇಕು, ಅದು ಗೆದ್ದೇ ಗೆಲ್ಲುತ್ತೆ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಂತೆ ಜಾಲಿ ಫ್ರೆಂಡ್ಸ್ ಪಂದ್ಯ ಗೆಲ್ಲುತ್ತಾರೆ. ಜಾಲಿ ಫ್ರೆಂಡ್ಸ್ ಗೆಲ್ಲುವಂತೆ ಮಾಡಿದ್ದೇಕೆ? ಎಂದು ಅನ್ಬುನಲ್ಲಿ ಕರುಪಯ್ಯ ಕೇಳಿದಾಗ, ಆ ಟೀಂನಲ್ಲಿ ಯುವ ಆಟಗಾರರು ಇದ್ದರು. ಅವರು ಚೆನ್ನಾಗಿಯೇ ಆಡಿದ್ದರು. ಒಂದು ವೇಳೆ ಈ ಮ್ಯಾಚ್ ಅವರು ಸೋತಿದ್ದರೆ ಆ ಯುವಕರಿಗೆ ಮತ್ತೆ ಅವಕಾಶ ಸಿಗುತ್ತಿರಲಿಲ್ಲ. ಯಾರೊಬ್ಬರೂ ಅವಕಾಶ ವಂಚಿತರು ಆಗಬಾರದು. ನಿಜವಾದ ಕ್ರೀಡಾ ಸ್ಫೂರ್ತಿ ಅಂದರೆ ಅದೇ ಅಲ್ಲವೇ ಅಂತಾನೆ.
ದುರ್ಗಾ ಮತ್ತು ಅನ್ಬು ಮದುವೆಯಾಗುತ್ತಾರೆ. ಮುನಿಸಿಕೊಂಡಿದ್ದ ಯಶೋದಾ ಗಂಡ ಗೆತ್ತು ಜತೆ ಒಂದಾಗುವಲ್ಲಿಗೆ ಕತೆ ಮುಗಿಯುತ್ತದೆ. ತಮಿಳರಸನ್ ಪಚಮುತ್ತು ಕತೆ, ನಿರ್ದೇಶನದ ‘ಲಬ್ಬರ್ ಪಂದು’ ಕ್ರಿಕೆಟ್ ಪಂದ್ಯದ ಮೂಲಕವೇ ಸಮಾಜದಲ್ಲಿನ ಜಾತಿ ತಾರತಮ್ಯದ ಬಗ್ಗೆಯೂ ಮಾತನಾಡುತ್ತದೆ. ಗಂಡ ಹೆಂಡತಿ ನಡುವಿನ ಪ್ರೀತಿ, ಪರಸ್ಪರ ಅರಿವು, ಕುಟುಂಬಗಳ ನಡುವಿನ ಸಂಬಂಧಗಳ ಬಗ್ಗೆ ಸರಳವಾಗಿ ಹೇಳುವ ‘ಲಬ್ಬರ್ ಪಂದು’ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.