‘ಜೈ ಭೀಮ್‌’ ಸಿನಿಮಾ ವೀಕ್ಷಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಚಿತ್ರದ ನಟ, ನಿರ್ಮಾಪಕ ಸೂರ್ಯ ಅವರನ್ನು ಅಭಿನಂದಿಸಿದ್ದಾರೆ. ಇಂತಹ ಚಿತ್ರಗಳು ಸಾಮಾಜಿಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಶಂಸಿದ್ದಾರೆ.

ಸೂರ್ಯ ನಟಿಸಿ, ನಿರ್ಮಿಸಿರುವ ‘ಜೈ ಭೀಮ್‌’ ತಮಿಳು ಸಿನಿಮಾ ನಾಳೆ ನವೆಂಬರ್‌ 2ರಂದು ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮ್ ಆಗಿದೆ. ಪೂರ್ವಭಾವಿ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ನಟ ಸೂರ್ಯ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. “ಉತ್ತಮ ಕಲೆ ಸಮಾಜದ ಮೇಲೆ ಪರಿಣಾಮ ಬೀರುವುದಲ್ಲದೆ, ಸಕಾರಾತ್ಮಕ ಬದಲಾವಣೆಗೂ ಕಾರಣವಾಗುತ್ತದೆ. ಸ್ನೇಹಿತ ಸೂರ್ಯ ಅಭಿನಯದ ‘ಜೈ ಭೀಮ್‌’ ಸಿನಿಮಾ ವೀಕ್ಷಿಸಿದೆ. ಅವರು ‘ಲಾಯರ್ ಚಂದ್ರು’ ಪಾತ್ರವನ್ನು ಜೀವಿಸಿದ್ದಾರೆ. ಇದು ನನ್ನನ್ನು ತುಂಬಾ ಪ್ರಭಾವಿಸಿತು. ಸೂರ್ಯ ಅವರು ಬುಡಕಟ್ಟು ಜನರ ಸಮಸ್ಯೆಗಳ ಕುರಿತಾಗಿ ಚಿತ್ರವನ್ನಷ್ಟೇ ನಿರ್ಮಿಸಿಲ್ಲ. ಅವರ ಏಳ್ಗೆಗೆ ಶ್ರಮಿಸುವ ಸಂಸ್ಥೆಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ” ಎಂದು ಟ್ವಿಟರ್‌ನಲ್ಲಿ ಬರೆದಿರುವ ಪತ್ರದಲ್ಲಿ ಅವರು ಪ್ರಸ್ತಾಪಿಸಿದ್ದಾರೆ.

ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಪ್ರಯೋಗ ತೊಂಬತ್ತರ ದಶಕದ ನೈಜ ಘಟನೆಯೊಂದರ ಪ್ರೇರಣೆಯಿಂದ ತಯಾರಾಗಿರುವ ಸಿನಿಮಾ. ಬುಡಕಟ್ಟು ಜನರ ಸಾಮಾಜಿಕ ಹಕ್ಕುಗಳಿಗಾಗಿ ವಕೀಲನೊಬ್ಬ ದಿಟ್ಟತನದಿಂದ ಹೋರಾಟ ನಡೆಸಿದ ವಸ್ತುವೇ ಸಿನಿಮಾದ ಕತೆ. ಈ ವಕೀಲನ ಪಾತ್ರವನ್ನು ಸೂರ್ಯ ನಿಭಾಯಿಸಿದ್ದಾರೆ. ಸ್ಟಾಲಿನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೂರ್ಯ, “ಚಿತ್ರದ ಬಗೆಗಿನ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಮೆಚ್ಚುಗೆ ನನ್ನನ್ನು ಮೂಕನಾಗಿಸಿದೆ. ಅವರ ಪ್ರಶಂಸೆ ನಮ್ಮ ಚಿತ್ರದ ಉದ್ದೇಶವನ್ನು ಸಾಕಾರಗೊಳಿಸಿದಂತಾಗಿದೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here