ಕಥಾವಿಷಯ ಚೆನ್ನಾಗಿದ್ದರೂ ನಿರೂಪಣೆ ಹಾಗೂ ಸಂಭಾಷಣೆಗಳ ಗುಣಮಟ್ಟ ಬಹಳವೇ ನಿರಾಸೆ ಮೂಡಿಸುತ್ತದೆ. ಇನ್ನೂ ಪರಿಣಾಮಕಾರಿಯಾಗಿ ಕತೆ ಕಟ್ಟಿಕೊಡಬಹುದಾಗಿತ್ತೇನೋ. ವಿವೇಚನೆ ಕಳೆದುಕೊಂಡಾಗ ಅದರಿಂದ ಅವಘಡಗಳೇ ಹೆಚ್ಚು ಎನ್ನುವ ಸಣ್ಣ ಎಚ್ಚರಿಕೆಯನ್ನು ನೀಡುತ್ತಲೇ ‘ಲಸ್ಟ್ ಸ್ಟೋರೀಸ್ 2’ ಮುಗಿಯುತ್ತದೆ. Netflixನಲ್ಲಿ ಸ್ಟ್ರೀಮ್ ಆಗುತ್ತಿದೆ anthology ಸಿನಿಮಾ.
‘ಲಸ್ಟ್ ಸ್ಟೋರೀಸ್ 1’ ನೆಟ್‌ಫ್ಲಿಕ್ಸ್‌ನ ಬಹುಜನಪ್ರಿಯ ಸರಣಿಗಳಲ್ಲೊಂದು. ಅದರ ಯಶಸ್ಸಿನ ನಂತರ ಈಗ ‘ಲಸ್ಟ್ ಸ್ಟೋರಿಸ್ 2’ ಬಿಡುಗಡೆಯಾಗಿದೆ. ಇದು ನಾಲ್ಕು ಸಣ್ಣ ಸಿನಿಮಾಗಳ anthology ಮಾದರಿಯ ಸಿನಿಮಾ ಅಥವಾ ಸಿನಿಮಾಗಳ ಸರಣಿ ಎನ್ನಬಹುದು. ಬಾಲ್ಕಿ, ಸುಜಯ್ ಘೋಷ್, ಕೊಂಕಣ ಸೇನ್ ಶರ್ಮ ಮತ್ತು ಅಮಿತ್ ರವೀಂದ್ರನಾಥ್ ಶರ್ಮ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಲ್ಕು ಕಿರುಚಿತ್ರಗಳ ಆಂಥಾಲಜಿಯ ಮುಖ್ಯ ವಸ್ತು ಕಾಮ. ಶೀರ್ಷಿಕೆಯೇ ಹೇಳುವಂತೆ ಮನುಷ್ಯರ ನಿತ್ಯದ ಬದುಕಿನಲ್ಲಿ, ನಾನಾ ಸಂಬಂಧಗಳ ನಡುವೆ ಏರ್ಪಡುವ ಕಾಮದ ಬೇರೆ ಬೇರೆ ಮಜಲುಗಳ ಚಿತ್ರಣವಿದೆ.
ಅರಿಷಡ್ವರ್ಗಗಳಲ್ಲಿ ಕಾಮಕ್ಕೆ ಮೊದಲ ಸ್ಥಾನ. ಕಾಮ ಎಷ್ಟು ಸಹಜವೋ ಅಷ್ಟೇ ಅಪಾಯಕಾರಿ ಕೂಡ. ಹಿಡಿತಕ್ಕೆ ಮೀರಿ ನಡೆದರೆ ನಮ್ಮನ್ನೇ ನುಂಗಿಬಿಡುವ ಶಕ್ತಿ ಕಾಮಕ್ಕೆ ಇದೆ. ಕಾಮ ಹೇಗೆ ಶಕ್ತಿಯೋ ಹಾಗೆಯೇ ದೌರ್ಬಲ್ಯವೂ ಕೂಡ. ಎಂಥ ಬಲಿಷ್ಠರನ್ನೂ ತನ್ನ ದಾಸನನ್ನಾಗಿ ಮಾಡಿಕೊಳ್ಳುವ ಶಕ್ತಿ ಕಾಮಕ್ಕೆ ಇದೆ. ಕಾಮದ ಬೇರೆ ಬೇರೆ ಮಜಲುಗಳನ್ನು ಈ ನಾಲ್ಕು ಕಿರುಚಿತ್ರಗಳಲ್ಲಿ ಕಾಣಬಹುದು.
ಮೊದಲನೇ ಕಥೆಯಾದ ‘ಮೇಡ್ ಫಾರ್ ಈಚ್ ಅದರ್’ ಕಥೆಯಲ್ಲಿ ದಾಂಪತ್ಯಕ್ಕೆ ಕಾಮದ ಅಗತ್ಯ ಮತ್ತು ದಾಂಪತ್ಯದಲ್ಲಿ ಕಾಮದ ಮಹತ್ವವನ್ನು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೇಲ್ನೋಟಕ್ಕೆ ಹಳೆಯ ಕಾಲದವಳಂತೆ ಕಾಣುವ ಆದರೆ ಪ್ರೋಗ್ರೆಸೀವ್ ಆದ ಅಜ್ಜಿಯ ಪಾತ್ರದಲ್ಲಿ ನೀನಾ ಗುಪ್ತ ಇಷ್ಟದ ಹುಡುಗನನ್ನು ಮದುವೆಯಾಗಲು ಹೊರಟಿರುವ ಮೊಮ್ಮಗಳಿಗೆ ಕಾಮದ ಮಹತ್ವವನ್ನು ತಿಳಿಸುತ್ತಾಳೆ. ಲೈಂಗಿಕ ಸಂಬಂಧದ ಬುನಾದಿ ಗಟ್ಟಿಯಾಗಿದ್ದಷ್ಟೂ ದಾಂಪತ್ಯದ ಕಟ್ಟಡ ದೀರ್ಘಕಾಲ ಬಾಳುತ್ತದೆ ಎನ್ನುವ ಗುಟ್ಟನ್ನು ಅಜ್ಜಿ ಮೊಮ್ಮಗಳಿಗೆ ತಿಳಿಹೇಳುತ್ತಾಳೆ. ಮಡಿವಂತಿಕೆಯ ಸಮಾಜದಲ್ಲಿ ಸೆಕ್ಸ್ ಪದವನ್ನು ಜೋರಾಗಿ ಹೇಳಲು ಹಿಂಜರಿಯುವ ಕಾಲದ ಅಜ್ಜಿಯಾಗಿ ಆಕೆಯ ವರ್ತನೆ ಮನೆಯ ಇತರರಿಗೆ cultural shock ಮಾದರಿಯಲ್ಲಿ ಧ್ವನಿಸುತ್ತದೆ.
ಕತೆಯ ಆಶಯ ಚೆನ್ನಾಗಿದ್ದರೂ ಅದರ ನಿರೂಪಣೆ ಮುಜುಗರ ಹುಟ್ಟಿಸುವಂತಿದೆ. ತುಸು ಕಳಪೆ ಎಂದೇ ಹೇಳಬಹುದು. ದಾಂಪತ್ಯದ ಮಹತ್ವವನ್ನು ಲೈಂಗಿಕ ಸಂಬಂಧಕ್ಕಷ್ಟೇ ಸೀಮಿತಗೊಳಿಸಲು ಹೊರಟಿದ್ದಾರೇನೋ ಎನಿಸಿ ಕತೆ ನಿರಾಸೆ ಹುಟ್ಟಿಸುತ್ತದೆ. ಸಂಭಾಷಣೆ ಮತ್ತು ಭಾಷೆಯ ಬಳಕೆ subtle ಆಗಿರಬೇಕಿತ್ತು. ಕಥೆಯಲ್ಲಿ depth ಸಾಲದು. ಮದುವೆ ಎಂದರೆ ಸೆಕ್ಸ್ ಅಷ್ಟೇ ಮುಖ್ಯ ಅನ್ನುವ ಸಂದೇಶ ಕೊಟ್ಟು ದಾಂಪತ್ಯದ ಅರ್ಥವನ್ನು ಬಹಳ ಸಂಕುಚಿತಗೊಳಿಸಿದ್ದಾರೆ ನಿರ್ದೇಶಕರು. ಬಹಳ ಬಾಲಿಶವಾದ ಪಾತ್ರಚಿತ್ರಣ ಈ ಚಿತ್ರದ ಮತ್ತೊಂದು ಹಿನ್ನಡೆ.
ಇನ್ನು ಎರಡನೇ ಕಥೆ ‘ಮಿರರ್ ಮುಂಬೈ’ನ ಮೆಟ್ರೋ ಪ್ರಪಂಚದ ಅತೃಪ್ತ ಹೆಣ್ಣೊಬ್ಬಳ ಕತೆ. ಜೀವನದಲ್ಲಿ ಎಲ್ಲಾ ಇದ್ದರೂ ಸಂಗಾತಿಯಿಲ್ಲದೇ, ಲೈಂಗಿಕವಾಗಿ ಹಾಗೂ ಭಾವನಾತ್ಮಕವಾಗಿ ಅತೃಪ್ತಳಾಗಿರುವ ಮಧ್ಯವಯಸ್ಸಿನ ಹೆಣ್ಣು ಆಕಸ್ಮಿಕವಾಗಿ ತನ್ನದೇ ಮನೆಯಲ್ಲಿ ತಾನಿಲ್ಲದೆ ಇರುವಾಗ ಕೆಲಸದಾಕೆ ಪುರುಷನೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸೋದನ್ನು ನೋಡಿ ದಿಗ್ಬ್ರಾಂತಳಾಗುತ್ತಾಳೆ. ಆದರೆ ಅದನ್ನು ತಡೆಯೋದರ ಬದಲು ನಿತ್ಯವೂ ಆ ಸಮಯಕ್ಕೆ ಮನೆಗೆ ಬಂದು ಕೆಲಸದಾಕೆಯ ಕೃತ್ಯವನ್ನು ಕದ್ದು ನೋಡುವ ಅಭ್ಯಾಸ ಮಾಡಿಕೊಳ್ಳುತ್ತಾಳೆ. ಅದರಿಂದ ತಾನು ಆನಂದವನ್ನು ಪಡೆಯುತ್ತಾಳೆ. ಇದು ಕೆಲಸದಾಕೆಗೂ ತಿಳಿದು ಆಟ ಮುಂದುವರೆಸುತ್ತಾಳೆ. ತೆರೆ ಸರಿದು ಆಟ ಮುಗಿಯುವ ವೇಳೆ ಇಬ್ಬರ ಕಳ್ಳಾಟವೂ ಪರಸ್ಪರ ತಿಳಿದು ಅವರವರ ಅಂತರಂಗ ಬತ್ತಲಾಗಿ ನಿಲ್ಲುತ್ತದೆ. ಮುಜುಗರ, ಕೋಪ, ಅಸಹ್ಯಗಳು ಕಾಮದ ಕೈಗೊಂಬೆಯಾಗಿರುವ ಇಬ್ಬರು ಹೆಂಗಸರ ನಡುವೆ ಮನೆಮಾಡಿ ಅವರವರ ಅಂತರಂಗದ ಕನ್ನಡಿ ಅವರವರಿಗೇ ದುರ್ಭರವಾಗುತ್ತದೆ. ಕೊನೆಗೆ ವಾಸ್ತವವನ್ನು ಒಪ್ಪಿಕೊಂಡು ರಾಜಿಯಾಗುತ್ತಾರೆ.
ತೆರೆ ಕಳಚಿ ಬಿದ್ದಾಗಲೇ ಕತೆ ಕೂಡ ಮುಗಿಸಿದ್ದರೆ ಕತೆಗೆ ಇನ್ನೂ ತೂಕ ಬರುತ್ತಿತ್ತು. ಕೊನೆಯ ಹತ್ತು ನಿಮಿಷಗಳು ಅನವಶ್ಯಕವಾಗಿ ಎಳೆದಿದ್ದಾರೆ ಎನಿಸಿತು.
ಮೂರನೇ ಕಥೆ ‘ಸೆಕ್ಸ್ ವಿತ್ ಎಕ್ಸ್’. ಇದರಲ್ಲಿ ನಾಯಕ ಕಾಮವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡರೆ ನಾಯಕಿ ತನಗಾದ ಮೋಸವನ್ನು ಮೋಸಗಾರ ತಾನೇ ಒಪ್ಪಿಕೊಳ್ಳುವಂತೆ ಮಾಡಲು ಬಳಸಿಕೊಳ್ಳುತ್ತಾಳೆ. ಕೊನೆಯಲ್ಲಿ ಒಂದು ತಿರುವಿನೊಂದಿಗೆ ಗೆಲ್ಲೋದು ವಿಧಿ. ಕಾಮ ಹೇಗೆ ಮನುಷ್ಯನ ಜೀವನದ ದಿಕ್ಕನ್ನು ತಪ್ಪಿಸುತ್ತದೆ ಎಂದು ಇಲ್ಲಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಈ ಕತೆಯಲ್ಲಿ ಬರುವ ಪೋಲೀಸ್ ಆಫೀಸರಿನ ಪಾತ್ರ ಅನಗತ್ಯ ಎನಿಸಿ ತುಸು ಗೊಂದಲ ಹುಟ್ಟಿಸುತ್ತದೆ.
ಕೊನೆಯ ಕತೆ ‘ತಿಲ್ಚಟ್ಟ’ದಲ್ಲಿ abusive ಸಂಬಂಧದಲ್ಲಿ ಬಂಧಿಯಾದ ಹೆಣ್ಣೊಬ್ಬಳು ಹೇಗೆ ತನ್ನ ಗಂಡನ ದೌರ್ಬಲ್ಯವಾದ ಕಾಮವನ್ನು ಬಳಸಿಕೊಂಡು ಅವನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಮತ್ತು ಅದರಲ್ಲಿ ಅವಳು ನಿರೀಕ್ಷಿಸಿದ ಪರಿಹಾರ ಸಿಗುತ್ತದೆಯೇ ಎಂಬುದರ ಚಿತ್ರಣವಿದೆ. ಕೊನೆಯಲ್ಲಿ ಒಂದು ತಿರುವಿನೊಡನೆ ಅಂತ್ಯವಾಗುತ್ತದೆ. ಇಲ್ಲಿ ಒಂದಷ್ಟು ಗೊಂದಲಮಯ ನಿರೂಪಣೆಯಿಂದಾಗಿ ಏನು ನಡೆಯುತ್ತಿದೆ ಎನ್ನುವುದರ ಸ್ಪಷ್ಟತೆ ಸಿಗುವಷ್ಟರಲ್ಲಿ ಕತೆಯೇ ಮುಗಿದುಹೋಗುತ್ತದೆ. ಈ ಕಥೆಯಲ್ಲಿ ಕತ್ತಲನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ ಕಥಾವಿಷಯ ಚೆನ್ನಾಗಿದ್ದರೂ ನಿರೂಪಣೆ ಹಾಗೂ ಸಂಭಾಷಣೆಗಳ ಗುಣಮಟ್ಟ ಬಹಳವೇ ನಿರಾಸೆ ಮೂಡಿಸುತ್ತದೆ. ಇನ್ನೂ ಪರಿಣಾಮಕಾರಿಯಾಗಿ ಕತೆ ಕಟ್ಟಿಕೊಡಬಹುದಾಗಿತ್ತೇನೋ. ಕಾಮ ಎಷ್ಟು ಅಗತ್ಯವೋ ಅಷ್ಟೇ ಅಪಾಯಕಾರಿ. ವಿವೇಚನೆ ಕಳೆದುಕೊಂಡಾಗ ಅದರಿಂದ ಅವಘಡಗಳೇ ಹೆಚ್ಚು ಎನ್ನುವ ಸಣ್ಣ ಎಚ್ಚರಿಕೆಯನ್ನು ನೀಡುತ್ತಲೇ ‘ಲಸ್ಟ್ ಸ್ಟೋರೀಸ್ 2’ ಮುಗಿಯುತ್ತದೆ. ಮೂರನೇ ಭಾಗ ಬರುತ್ತಾದಾ ನೋಡಬೇಕಿದೆ.