ಹಿಂದಿ ಚಿತ್ರಸಾಹಿತಿ, ಕವಯಿತ್ರಿ, ರಂಗಕರ್ಮಿ ಮಾಯಾ ಗೋವಿಂದ್ ಇಂದು ಅಗಲಿದ್ದಾರೆ. 1972ರಿಂದ ಸಿನಿಮಾಗಳಿಗೆ ಗೀತೆ ರಚಿಸಲು ಆರಂಭಿಸಿದ ಅವರು 350ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಗೀತೆಗಳನ್ನು ರಚಿಸಿದ್ದಾರೆ.
ಚಿತ್ರಸಾಹಿತಿ, ಕವಯಿತ್ರಿ, ರಂಗಕರ್ಮಿ ಮಾಯಾ ಗೋವಿಂದ್ (82 ವರ್ಷ) ಇನ್ನಿಲ್ಲ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬಯಿ ಜುಹೂನಲ್ಲಿನ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಂಗಕರ್ಮಿ, ಕವಯಿತ್ರಿ ಮಾಯಾ ಅವರು ಸಿನಿಮಾಗೆ ಬರೆಯಲು ಆರಂಭಿಸಿದ್ದು 1972ರಲ್ಲಿ. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಗೀತೆಗಳನ್ನು ರಚಿಸಿದ್ದಾರೆ. ಆರೋಪ್, ಜಲ್ತಾ ಬದನ್, ಸಾವನ್ ಕೋ ಆನೇ ದೋ, ಟಕ್ಕರ್, ಪಿಘಾಲ್ಟಾ ಆಸ್ಮಾನ್, ದಮನ್, ಮೈ ಖಿಲಾಡಿ ತು ಅನಾರಿ, ದಲಾಲ್, ಗಜ್ ಗಾಮಿನಿ, ಗಂಗಾ ಕಿ ಕಸಮ್, ರಝಿಯಾ ಸುಲ್ತಾನ, ಯಾರಾನಾ, ಜನ್ತಾ ಕಿ ಅದಾಲತ್, ಹಮ್ ತುಮ್ಹಾರೆ ಹೈ ಸನಂ ಅವರು ಗೀತೆ ರಚಿಸಿರುವ ಕೆಲವು ಸಿನಿಮಾಗಳು. ಖ್ಯಾತ ರಂಗಕರ್ಮಿ ವಿಜಯ್ ತೆಂಡೂಲ್ಕರ್ ಅವರ ‘ಖಾಮೋಷ್! ಅದಾಲತ್ ಜಾರಿ ಹೈ’ ನಾಟಕದ ಉತ್ತಮ ಅಭಿನಯಕ್ಕಾಗಿ ಮಾಯಾ ಅವರಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಅತ್ಯುತ್ತಮ ನಟಿ (1970) ಗೌರವ ಲಭಿಸಿದೆ.