ಪಕ್ಷದ ಕಛೇರಿ , ಖಾಲಿ ಕಟ್ಟಡವೂ ಅಲ್ಲಿ ಪಾತ್ರವಾಗುತ್ತದೆ. ಎಲ್ಲ ಮುಗಿದ ಮೇಲೆ ಇತಿಹಾಸದ ಕತೆ ಹೇಳಲು ಬಾಯಿ ಇರದ ಪಾಳು ಕಟ್ಟಡ ಇಲ್ಲಿ ಮಾತಾಡುತ್ತದೆ. ಅದು ದೃಶ್ಯ ಮಾಧ್ಯಮದ ಶಕ್ತಿ. ಮಣಿರತ್ನಂ ನಿರ್ದೇಶನದ ‘ಇರುವರ್’ ತೆರೆಕಂಡು ಈ ಹೊತ್ತಿಗೆ 25 ವರ್ಷ. ಪ್ರಸ್ತುತ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ಸಿನಿಮಾ.
ಎಷ್ಟೋ ದಿನಗಳಿಂದ ನೋಡಬೇಕೆಂದುಕೊಂಡಿದ್ದ ‘ಇರುವರ್’ ಸಿನಿಮಾವನ್ನು ನಿನ್ನೆ ನೋಡಿದೆ. ಕಾಕತಾಳೀಯವೆಂದರೆ ‘ಇರುವರ್’ ಸಿನೆಮಾ ಬಂದು ಇದೇ ಜನವರಿಗೆ 25 ವರ್ಷ! ತಮಿಳುನಾಡಿನ ರಾಜಕೀಯ ಘಟನಾವಳಿಗಳಲ್ಲಿಯೇ ಒಂದು ರೀತಿಯ ಸಿನಿಮೀಯತೆ ಇದೆ. ರೋಚಕ ತಿರುವುಗಳಿವೆ. ಏರುಪೇರುಗಳಿವೆ. ಜನರ ಅತಿಭಾವುಕತೆ ಇದೆ. ಪ್ರಖ್ಯಾತ ನಟ ಎಂ.ಜಿ.ರಾಮಚಂದ್ರನ್ ಮತ್ತು ಕರುಣಾನಿಧಿಯ ನಡುವಿನ ಸ್ನೇಹ, ಈಗೋಗಳ ಕಥಾನಕವೇ ತಮಿಳುನಾಡಿನ ರಾಜಕಾರಣದ ಕಥಾನಕವೂ ಆಗಿದೆ.
ಎಂ.ಜಿ.ಆರ್ ಪಾತ್ರದಲ್ಲಿ ಮೋಹನ್ ಲಾಲ್ ಎಂಬ ಅಮೋಘ ನಟನೂ, ಕರುಣಾನಿಧಿಯನ್ನು ಆವಾಹಿಸಿಕೊಂಡು ನಟಿಸಿರುವ ‘ನಮ್ಮ ಪ್ರಕಾಶ್ ರಾಜ್ , ಜಯಲಲಿತಾ ಪಾತ್ರದ ಐಶ್ವರ್ಯ ರೈ (ಇದು ಆಕೆಯ ಮೊದಲ ಚಿತ್ರವೂ ಹೌದು), ಗೌತಮಿ, ರೇವತಿ, ತಬು ಎಲ್ಲರೂ ಒಬ್ಬರಿಗಿಂತ ಒಬ್ಬರು ಚೆಂದ. ಅಷ್ಟು ಸ್ತ್ರೀಪಾತ್ರಗಳಿದ್ದರೂ ಒಂದನ್ನೊಂದು ಹೋಲದೇ ಭಿನ್ನವಾಗಿವೆ. ಸಿನಿಮಾದ ಬಹುದೊಡ್ಡ ಶಕ್ತಿ ಅದರ ಸಂಭಾಷಣೆ. ಮಣಿರತ್ನಂ ತಾರಾಪತ್ನಿ ಸುಹಾಸಿನಿ ಬರೆದ ಸಂಭಾಷಣೆಗಳು ಅದನ್ನು ತಮ್ಮ ಪ್ರತಿಭಾಶಕ್ತಿಯನ್ನೆಲ್ಲ ಒಗ್ಗೂಡಿಸಿದಂತೆ ಹೇಳುವ ಇಬ್ಬರು ಮಹಾನಟರು ಈ ಸಿನೆಮಾವನ್ನು ಮರೆಯಲಾರದಂತೆ ಮಾಡುತ್ತಾರೆ.
ದ್ರಾವಿಡ ಚಳವಳಿಯ ಹುಟ್ಟುನಾಡೆನ್ನಬಹುದಾದ ತಮಿಳುನಾಡಿನಲ್ಲಿ ಅಣ್ಣಾದೊರೈ ಇದ್ದ ಕಾಲ. ಆ ಪಕ್ಷ ಸಮಬಲದ ಶಿಷ್ಯರಿಬ್ಬರಿಂದ ಮುಂದೆ ಪಡೆದ ತಿರುವು ಎಲ್ಲವೂ ರಾಜಕೀಯ ಇತಿಹಾಸದ ದಾಖಲೆಯಂತಾ ಚಿತ್ರಣ. ಇಬ್ಬರಲ್ಲಿ ಯಾರು ತಪ್ಪು, ಯಾರು ಸರಿ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬೆಲ್ಲ ಪ್ರಶ್ನೆಗಳನ್ನಿಟ್ಟು ಸಿನಿಮಾ ನೋಡಲು ಕೂತರೆ ಕಡೆಗೆ ಸಿಗುವುದು ಒಂದು ವಿಷಾದ ಮಾತ್ರ. ಅದು ಮಣಿರತ್ನಂ ಕತೆ ಹೇಳುವ ರೀತಿ. ಪಕ್ಷದ ಕಛೇರಿ , ಖಾಲಿ ಕಟ್ಟಡವೂ ಅಲ್ಲಿ ಪಾತ್ರವಾಗುತ್ತದೆ. ಎಲ್ಲ ಮುಗಿದ ಮೇಲೆ ಇತಿಹಾಸದ ಕತೆ ಹೇಳಲು ಬಾಯಿ ಇರದ ಪಾಳು ಕಟ್ಟಡ ಇಲ್ಲಿ ಮಾತಾಡುತ್ತದೆ. ಅದು ದೃಶ್ಯ ಮಾಧ್ಯಮದ ಶಕ್ತಿ.
ನಮ್ಮ ದಕ್ಷಿಣ ಭಾರತ ಎಂತೆಂತಹ ಪ್ರತಿಭಾವಂತ ನಟರಿಂದ ಸಮೃದ್ಧವಾಗಿದೆಯಪ್ಪ ಅನಿಸುತ್ತದೆ. ಈಚೆಗೆ ಸಿದ್ದಾಂತ, ರಾಜಕೀಯ ಅಂತೆಲ್ಲ ಪ್ರಕಾಶ್ ರಾಜ್ ಬಗ್ಗೆ ಏನೆಲ್ಲಾ ಆಡಿದವರುಂಟು. ಅದು ಬೇರೆ. ಆದರೆ ಪ್ರಕಾಶ್ ರಾಜ್ ಅವರನ್ನು ನಟನೆಯ ವಿಷಯದಲ್ಲಿ ಮಾತ್ರ ವಿರೋಧಿಗಳೂ ಹೆಮ್ಮೆಯಿಂದ ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳಬೇಕೆನಿಸುತ್ತದೆ. ಇಡಿಯ ಸಿನಿಮಾದ್ದು ಒಂದು ತೂಕವಾದರೆ ಆರಂಭದ ಮೋಹನ್ ಲಾಲ್ ದೃಶ್ಯಗಳು ಮತ್ತು ಕ್ಲೈಮ್ಯಾಕ್ಸಿನ ಪ್ರಕಾಶ್ ಅಭಿನಯದ್ದೇ ಒಂದು ತೂಕ. ಮೇಕಿಂಗ್ ನೋಡಿದರೆ ನಿಜಕ್ಕೂ 25 ವರ್ಷ ಹಳೆಯದಾ ಅನಿಸುತ್ತದೆ. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ವೀಕ್ಷಿಸಿ.