‘ಪೆಬಲ್ಸ್’ ತಮಿಳು ಸಿನಿಮಾ ಭಾರತದಿಂದ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರದ ನಿರ್ಮಾಪಕರಾದ ವಿಘ್ನೇಶ್ ಶಿವನ್ ಮತ್ತು ನಯನತಾರಾ ಆಸ್ಕರ್ ಕ್ಯಾಂಪೇನ್‌ಗೆ ತೆರಳಿದ್ದಾರೆ. ಕೌಟುಂಬಿಕ ಹಿಂಸೆ ಸಿನಿಮಾದ ಎಳೆ. ಈ ಚಿತ್ರ ಆಸ್ಕರ್ ಗೆದ್ದು ಬೀಗಲಿ ಎಂದು ನಯನತಾರಾ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ತೊಂಬತ್ನಾಲ್ಕನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಪೆಬಲ್ಸ್’ (ಕೂಝಂಗಳ್) ತಮಿಳು ಸಿನಿಮಾ ನಾಮನಿರ್ದೇಶನಗೊಂಡಿದೆ. ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಟಿ ನಯನತಾರಾ ಜೋಡಿ ತಮ್ಮ ‘ರೌಡಿ ಪಿಕ್ಚರ್ಸ್’ ಬ್ಯಾನರ್ ಅಡಿ ನಿರ್ಮಿಸಿರುವ ಚಿತ್ರವಿದು. ಭಾರತದ ಹದಿನಾಲ್ಕು ಸಿನಿಮಾಗಳ ಪೈಕಿ ‘ಪೆಬಲ್ಸ್’ ಆಯ್ಕೆಯಾಗಿತ್ತು. ಕೌಟುಂಬಿಕ ಹಿಂಸೆ ಸಿನಿಮಾದ ಎಳೆ. ಪಿ.ಎಸ್.ವಿನೋದ್‌ರಾಜ್ ಚೊಚ್ಚಲ ನಿರ್ದೇಶನದ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ರಾಟರ್‌ಡ್ಯಾಮ್ ಸಿನಿಮೋತ್ಸವದಲ್ಲಿ ಟೈಗರ್ ಅವಾರ್ಡ್ ಪಡೆದಿರುವ ಸಿನಿಮಾ ಇದೀಗ ಅಸ್ಕರ್ ಹೊಸ್ತಿಲಲ್ಲಿದೆ.
ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಪಿ.ಎಸ್.ವಿನೋದ್‌ರಾಜ್. ಅವರ ಸಹೋದರಿಯ ಕುಟುಂಬದ ಕತೆ. ಪತಿಯ ದೌರ್ಜನ್ಯ ತಾಳಲಾರದೆ ಆಕೆ ರಾತ್ರೋರಾತ್ರಿ ತನ್ನ ಎರಡು ವರ್ಷದ ಮಗಳನ್ನು ಕರೆದುಕೊಂಡು ಹದಿನಾಲ್ಕು ಮೈಲು ಕಾಲ್ನಡಿಗೆಯಲ್ಲಿ ಕ್ರಮಿಸಿ ತವರು ಮನೆಗೆ ಬರುತ್ತಾರಂತೆ. ಇಲ್ಲಿ ಸಿನಿಮಾದಲ್ಲಿ ಪತಿ ತನ್ನ ಮಗನೊಂದಿಗೆ ಉರಿ ಬಿಸಿಲಿನಲ್ಲಿ ಪತ್ನಿ ಮತ್ತು ಪುತ್ರಿಯ ಹುಡುಕಾಟ ನಡೆಸುವ ಕತೆಯಿದೆ.