ವಿಶಿಷ್ಟ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲೀ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಮಂಸೋರೆ ಮೊನ್ನೆಯಷ್ಟೇ ‘ದಿ ಕ್ರಿಟಿಕ್’ ಕಿರುಚಿತ್ರದ ಮೂಲಕ ಗಮನ ಸೆಳೆದಿದ್ದರು. ಇಂದು ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ನೈಜ ಘಟನೆಗಳನ್ನು ಆಧರಿಸಿ ಅವರು ‘19.20.21’ ಸಿನಿಮಾ ನಿರ್ದೇಶಿಸಲಿದ್ದಾರೆ.
ಹರಿವು, ನಾತಿಚರಾಮಿ, ಆಕ್ಟ್ 1978 ಚಿತ್ರಗಳ ನಂತರ ಮಂಸೋರೆ ‘ಅಬ್ಬಕ್ಕ’ ಐತಿಹಾಸಿಕ ಸಿನಿಮಾ ಘೋಷಿಸಿದ್ದರು. ಅದು ಅವರ ಬಹುವರ್ಷಗಳ ಕನಸು. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರು. ಕೊರೋನಾ ಕಾಲದ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಈ ಯೋಜನೆ ಮುಂದೂಡಲ್ಪಟ್ಟಿದೆ ಎನ್ನುವ ಅವರು ಇದೀಗ ‘19.20.21’ ಕೈಗೆತ್ತಿಕೊಂಡಿದ್ದಾರೆ. “ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು… ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ” ಎನ್ನುತ್ತಾರೆ ಮಂಸೋರೆ. ಈ ಹಿಂದಿನ ಅವರ ‘ಆಕ್ಟ್ 1978’ ಚಿತ್ರ ನಿರ್ಮಿಸಿದ್ದ ದೇವರಾಜ್ ಆರ್. ಅವರೇ ‘19.20.21’ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ವೀರು ಮಲ್ಲಣ್ಣ ಚಿತ್ರಕಥೆ ರಚನೆಯಲ್ಲಿ ಮಂಸೋರೆ ಅವರಿಗೆ ಜೊತೆಯಾಗಿದ್ದು, ಛಾಯಾಗ್ರಹಣದ ಹೊಣೆ ಸತ್ಯ ಹೆಗಡೆ ಅವರದ್ದು. ಮುಂದಿನ ದಿನಗಳಲ್ಲಿ ಸಿನಿಮಾದ ಪಾತ್ರವರ್ಗ ಮತ್ತು ಇತರೆ ತಾಂತ್ರಿಕ ವರ್ಗದ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.
‘19.20.21’ ಸತ್ಯಘಟನೆ ಆಧರಿಸಿದ ಸಿನಿಮಾ. ಕೊರೋನಾ ಕಾಲದಲ್ಲಿ ವರ್ಷಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಸಿದ್ಧವಾದ ಯೋಜನೆ. ಹಿಂದೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ಘಟನೆಗೆ ಈಗ ದೃಶ್ಯರೂಪ ಕೊಡಲು ಮಂಸೋರೆ ಸಿದ್ಧವಾಗಿದ್ದಾರೆ. “ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು. ಸಿನಿಮಾನೇ ನಮ್ಮ ಜೀವನ. ಈ ಕೊರೋನಾ ಕಾಲದ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು. ಅದರ ಫಲವೇ ‘19.20.21’. ಅತಿ ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದ್ದು, ಈ ವರ್ಷವೇ ಚಿತ್ರವನ್ನು ನಿಮ್ಮ ಮುಂದೆ ತರಲಿದ್ದೇವೆ” ಎನ್ನುತ್ತಾರೆ ಮಂಸೋರೆ.
ಇನ್ನು ಮೊನ್ನೆಯಷ್ಟೇ ಅವರ ನಿರ್ದೇಶನದ ‘ದಿ ಕ್ರಿಟಿಕ್’ ಕಿರುಚಿತ್ರ ಬಿಡುಗಡೆಯಾಗಿದೆ. ಮೂರು ಫೀಚರ್ ಸಿನಿಮಾಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಹೊಸ ಅನುಭವ. “ಎರಡೂವರೆ ಗಂಟೆ ಕತೆ ನಿರೂಪಿಸಿರುವ ನನಗೆ ಕಿರುಚಿತ್ರ ಒಂದು ರೀತಿ ಸವಾಲು. ತೀರಾ ಕಡಿಮೆ ಅವಧಿಯಲ್ಲಿ ವಿಷಯವನ್ನು ದಾಟಿಸುವುದು ನಿಜಕ್ಕೂ ಸವಾಲು. ಈ ಅವಕಾಶಕ್ಕೆ ಕಾರಣರಾದ ಸತ್ಯ ಹೆಗಡೆ ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ” ಎನ್ನುತ್ತಾರವರು. ಹನ್ನೊಂದು ನಿಮಿಷಗಳ ‘ದಿ ಕ್ರಿಟಿಕ್’ ಕಿರುಚಿತ್ರ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ. ನೂರಾರು ಸಂಖ್ಯೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನರು ಈ ಕಿರುಚಿತ್ರವನ್ನು ಹಂಚಿಕೊಂಡಿದ್ದಾರೆ.