ಪ್ರಾಮಾಣಿಕತೆ – ದಾರ್ಷ್ಟ್ಯತನ, ಅಹಂಕಾರ – ಅನುಕಂಪ, ಅಧಿಕಾರ – ಪ್ರಭಾವ… ಇವುಗಳ ನಡುವಿನ ಹೋರಾಟದ ಕತೆಯ ‘ಅಯ್ಯಪ್ಪನುಂ ಕೋಶಿಯುಂ’ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಂ ಆಗುತ್ತಿದೆ.

ದ್ವೇಷದ ಕತೆಯನ್ನು ಸಿನಿಮಾದಲ್ಲಿ ಹೇಗೆ ಹೇಳಬಹುದು? ಮದ್ದು-ಗುಂಡು, ಮಚ್ಚು-ಲಾಂಗು, ಹೀರೋಗಾಗಿ ಸಾಯಲು ಸಿದ್ಧವಿರುವ ಫ್ರೆಂಡು? ಇಲ್ಲ, ಇಲ್ಲಿ ಅದಿಲ್ಲ. ದ್ವೇಷದ ಮೂಲವಿರುವುದು ಅಹಂಕಾರದ ಪರಾಕಾಷ್ಠೆಯಲ್ಲಿ, ಸ್ವಪ್ರತಿಷ್ಠೆಯ ತುತ್ತತುದಿಯಲ್ಲಿ. ವ್ಯಕ್ತಿತ್ವದ ಈ ಗುಣಗಳನ್ನು ಅನಾವರಣ ಮಾಡದ ದ್ವೇಷದ ಕತೆ ಮನಮುಟ್ಟುವುದಿಲ್ಲ. ಈ ಗುಣಗಳು ಕಂಡ ಮೇಲೆ ಚಿಮ್ಮುವ ರಕ್ತ ಕಾಣದಿದ್ದರೂ ತೀಕ್ಷ್ಣತೆ ಮನಸ್ಸಿಗೆ ತಾಗುತ್ತದೆ. ರಕ್ತದೋಕುಳಿಯಿಲ್ಲದೆ, ಅಹಂ, ಪ್ರತಿಷ್ಠೆ, ಅನಿವಾರ್ಯತೆಗಳ ತಿಕ್ಕಾಟ ಮತ್ತು ಜಗ್ಗಾಟವನ್ನೇ ಪರಿಕರವಾಗಿಸಿ ಕತೆ ಹೇಳುವ ಮಲಯಾಳಂ ಸಿನಿಮಾ ‘ಅಯ್ಯಪ್ಪನುಂ ಕೋಶಿಯುಂ’.

ಕೋಶಿ ಕುರಿಯನ್ ಓರ್ವ ಮಾಜಿ ಸೈನಿಕ. ದೊಡ್ಡ ಎಸ್ಟೇಟಿನ ಒಡೆಯ. ಹೀಗಿದ್ದಾಗ ಅಲ್ಪಮಟ್ಟಿನ ಗರ್ವ ಇರುವುದು ಸಹಜ. ಹಾಗೆಂದು ಯಾರಲ್ಲೂ ಜಗಳ ಕಾಯುವ ಉದ್ದೇಶ ಅವನಿಗಿಲ್ಲ. ರಾತ್ರಿ ಹೊತ್ತಲ್ಲಿ ಊಟಿಗೆ ಹೋಗುವಾಗ ಹತ್ತಿರದ ದಾರಿ ಎಂದು ಅಟ್ಟಪ್ಪಾಡಿ ಮೂಲಕ ಹೋಗುತ್ತಾನೆ. ಸಾರಥ್ಯಕ್ಕೆ ಚಾಲಕನಿದ್ದಾನೆ. ಹಾಗಾಗಿ ಕೋಶಿ ಮಿಲಿಟರಿ ರಮ್ ಕುಡಿದು ಹಿಂದಿನ ಸೀಟಲ್ಲಿ ಗಡದ್ದು ನಿದ್ದೆ‌ ಮಾಡುತ್ತಾನೆ. ಊಟಿಯಲ್ಲಿ ಸಿಗಲಿರುವ ಗೆಳೆಯರಿಗಾಗಿ ಒಂದಷ್ಟು ಬಾಟಲಿಗಳು ಸೀಟಿನ ಕೆಳೆಗೆ ಕಾದು ಕುಳಿತಿವೆ. ಆದರೆ ದಾರಿಯಲ್ಲಿ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ಜಂಟಿ ತಂಡವೂ ಕಾದು ಕುಳಿತಿದೆ. ಏಕೆಂದರೆ ಕೇರಳದ ಅಟ್ಟಪ್ಪಾಡಿ ಮದ್ಯ‌ ನಿಷೇಧಿತ ವಲಯ. ಯಾರ ಗ್ರಹಚಾರವೋ ಗೊತ್ತಿಲ್ಲ, ಕೋಶಿಯ ಕಾರನ್ನು ತಡೆದು ನಿಲ್ಲಿಸಲಾಗುತ್ತದೆ. ಮಾಜಿ ಸೈನಿಕ ಎಂದು ಗೊತ್ತಾಗಿದ್ದರೆ ಪಾಪ ಅವರೂ ಬಿಟ್ಟು ಕಳಿಸುತ್ತಿದ್ದರೇನೋ. ಆದರೆ ಕಾರು ಪರಿಶೀಲನೆ ಮಾಡುವ ಪೇದೆ ಬಾಗಿಲು ತೆಗೆದ ರಭಸಕ್ಕೆ ಕೋಶಿ ರಸ್ತೆಗೆ ಬೀಳಬೇಕಾಗುತ್ತದೆ. ಸೈನಿಕ ರೊಚ್ಚಿಗೇಳುತ್ತಾನೆ, ಆ ಭರದಲ್ಲಿ ಹೊಯ್ಕೈ ಆಗಿ ಪೊಲೀಸ್ ಜೀಪಿನ ಗಾಜೂ ಒಡೆಯುತ್ತದೆ‌. ಪೊಲೀಸರು ಹಿಡಿದು ಕೇಸು ಜಡಿದೇಬಿಡುತ್ತಾರೆ.

ಕೋಶಿಯ ಅಸಲೀಯತ್ತು ಗೊತ್ತಾಗುವುದು ಠಾಣೆಯಲ್ಲಿ ಪೊಲೀಸರು ಈತನ ಫೋನ್ ಪರಿಶೀಲಿಸುವಾಗಲೇ. ಕೋಶಿ ಮಾಜಿ ಸೈನಿಕ, ಭೂಮಾಲಿಕನಷ್ಟೇ ಅಲ್ಲ. ರಾಜಕೀಯದಲ್ಲಿ ಪರಿಚಿತರು, ಮಾಧ್ಯಮ ರಂಗದಲ್ಲೂ ಸ್ನೇಹಿತರನ್ನಿಟ್ಟುಕೊಂಡ ಪ್ರಭಾವಿ. ಪೊಲೀಸ್ ಕಮೀಷನರ್ ಮಾತ್ರವಲ್ಲ, ಮುಖ್ಯಮಂತ್ರಿಗೂ ನೇರ ಕರೆ ಮಾಡುವಷ್ಟು ಒಡನಾಟವಿದೆ ಎಂದು ಗೊತ್ತಾದಾಗ ಠಾಣೆಯ ಪೊಲೀಸರೂ ಮೆತ್ತಗಾಗುತ್ತಾರೆ. ಆದರೆ ಕೇಸು ಹಾಕಿದ್ದಾಗಿದೆ, ಅದನ್ನೀಗ ತಿದ್ದುವಂತಿಲ್ಲ. ಹಾಗಾಗಿ ಪ್ರಕರಣ ಕೋರ್ಟಿಗೆ ಹೋಗದೆ ಕೋಶಿಯನ್ನು ಬಿಟ್ಟು ಕಳಿಸುವ ಸ್ವಾತಂತ್ರ್ಯ ಎಸ್‌ಐ ಅಯ್ಯಪ್ಪನ್ ನಾಯರ್‌ಗೆ ಇಲ್ಲ. ಕೋರ್ಟು ಪ್ರಕ್ರಿಯೆಗಳೆಲ್ಲ ಮುಗಿಯುವಾಗ ಕೋಶಿಗೆ ಹನ್ನೆರಡು ದಿನ ಜೈಲೂಟ.

ಈ‌ ನಡುವೆ ಕೋಶಿ ಚಾಣಾಕ್ಷತೆ ‌ಮೆರೆದಿರುತ್ತಾನೆ. ತಾನೊಬ್ಬ ಮದ್ಯವ್ಯಸನಿ, ಹಾಗಾಗಿ ಅದಿಲ್ಲದಿದ್ದರೆ ತಲೆ ಸಿಡಿದಂತೆ ಆಗುತ್ತದೆ, ಒಂದೇ ಒಂದು ಪೆಗ್ ರಮ್ ಕೊಟ್ಟುಬಿಡಿ ಎಂದು ಸಬ್ ಇನ್ಸ್ಪೆಕ್ಟರ್ ಅಯ್ಯಪ್ಪನ್ ನಾಯರ್ ಬಳಿ ಗೋಗರೆಯುತ್ತಾನೆ. ‘ಅವನ ತಲೆಕೆಡದಂತೆ ಚೆನ್ನಾಗಿ ನೋಡಿಕೊಳ್ಳಿ’ ಎಂದು‌ ಮೇಲಾಧಿಕಾರಿ ಸೂಚನೆ ಬೇರೆ ಕೊಟ್ಟಿದ್ದಾರೆ. ಹಾಗಾಗಿ ಬೇರೆ ವಿಧಿಯಿಲ್ಲದೆ ಜಪ್ತಿ ಮಾಡಿದ ಶೀಶೆಯನ್ನೇ ತೆರೆದು ಸ್ವತಃ ರಮ್ ಹುಯ್ದು ಕೊಡುತ್ತಾನೆ ಅಯ್ಯಪ್ಪ. ಅದನ್ನು ಫೋನಲ್ಲಿ ಗುಪ್ತವಾಗಿ ರೆಕಾರ್ಡ್ ಮಾಡುವ ಕೋಶಿ ಜೈಲುವಾಸದಿಂದ ಬಂದವನೇ ಆ ವಿಡಿಯೋವನ್ನು ಮಾಧ್ಯಮಕ್ಕೆ ಹರಿಬಿಡುತ್ತಾನೆ. ಅಲ್ಲಿಂದ ಶುರುವಾಗುವುದೇ ಇಬ್ಬರ ನಡುವಿನ ಯುದ್ಧ. ಕತೆಯ ಈ ಅಡಿಪಾಯವನ್ನು ಮೊದಲ ಅರ್ಧ ಗಂಟೆಯಲ್ಲೇ ಹಾಕಿಬಿಡಲಾಗುತ್ತದೆ. ಏಕೆಂದರೆ ಸಿನಿಮಾದ ಮಜ ಇರುವುದೇ‌ ಇಲ್ಲಿಂದ ಮುಂದಕ್ಕೆ.

ಇಲ್ಲಿ ಕೋಶಿ ವಿನಾಕಾರಣ ತುಳಿತಕ್ಕೊಳಗಾದವ. ಆದ್ದರಿಂದ ಅವನ ಛಲ ಪ್ರದರ್ಶನ ತರ್ಕಬದ್ಧ, ಅವನ ಬುದ್ಧಿವಂತಿಕೆ ಖುಷಿ ಕೊಡುವಂಥದ್ದು. ಮಿಗಿಲಾಗಿ ಕೋಶಿ ಪಾತ್ರಧಾರಿ ನಲ್ಮೆಯ ನಟ ಪೃಥ್ವಿರಾಜ್‌. ಹಾಗಾಗಿ ಆತನಲ್ಲೊಬ್ಬ ಹೀರೋ ಕಣ್ಣಿಗೆ ಕಾಣುತ್ತಾನೆ. ಆದರೆ ಅಯ್ಯಪ್ಪನ ಪಾತ್ರ ಯಾವಾಗ ಪೂರ್ತಿ ತೆರೆದುಳ್ಳುತ್ತದೋ ಆಗ ಹೀರೋ ಆಗುವುದು ಬಿಜು ಮೆನನ್. ಅಲ್ಲಿಗೆ ಬರುವಾಗ ಕೋಶಿಯ ಛಲ ಒಣ‌ ಪ್ರತಿಷ್ಠೆಯಂತೆ ಕಾಣುತ್ತದೆ, ಬುದ್ಧಿವಂತಿಕೆ ಸಣ್ಣತನ ಅನಿಸುತ್ತದೆ. ಈ ರೀತಿಯಾಗಿ ಪ್ರೇಕ್ಷಕನ ಸಹಾನುಭೂತಿಯನ್ನು ಒಂದು ಪಾತ್ರದಿಂದ ಮತ್ತೊಂದಕ್ಕೆ ವರ್ಗಾಯಿಸುವುದು ಈ ಸಿನಿಮಾದ ಬಹುದೊಡ್ಡ ಶಕ್ತಿ.

ಇನ್ನೇನು ಇಬ್ಬರ ವ್ಯಕ್ತಿತ್ವವೂ ಅನಾವರಣವಾಯಿತು ಅಂದುಕೊಳ್ಳುತ್ತಿರುವಾಗಲೇ ಕೋಶಿಯೆಂಬ ಹೀರೋವಿನ ಅಳುಕು ತೆರೆಯ ಮೇಲೆ ತೆರೆದುಕೊಳ್ಳಲು ಶುರು. ಇನ್ನೊಂದೆಡೆ ಅಯ್ಯಪ್ಪನ ತಾಕತ್ತು ಪರದೆ ತುಂಬಾ ಆವರಿಸುತ್ತದೆ. ಇಬ್ಬರೂ ಪರಸ್ಪರ ಕೈ ಮಿಲಾಯಿಸದೇ ನಡೆಯುವ ಹೋರಾಟವಿದು. ಸನ್ನಿವೇಶ ಹೀಗಿರುವಾಗ ಕೋಶಿಯ ಸಣ್ಣತನ ಮತ್ತು ಅಯ್ಯಪ್ಪನ ತಾಕತ್ತು ಎರಡನ್ನೂ ಏಕಕಾಲಕ್ಕೆ ತೋರಿಸಲು ನಿರ್ದೇಶಕ ಬುದ್ಧಿವಂತಿಕೆಯಿಂದ ಹೆಣದ ಪಾತ್ರ ಕುಟ್ಟಮಣಿ ಎಂಬ ಕಳ್ಳನದ್ದು. ಬಂದು ಹೋಗುವ ಆ ಸಣ್ಣ ಪಾತ್ರ ಬರುವಾಗ ಕೊಡುಗೆ ನೀಡುತ್ತದೆ, ಹೋಗುವಾಗ ಕತೆಗೆ ತಿರುವನ್ನಿಡುತ್ತದೆ.

ಅಯ್ಯಪ್ಪ ಮತ್ತು ಕೋಶಿಯ ಪಾತ್ರಗಳಿಲ್ಲಿ ಸುಲಿದಷ್ಟೂ ಮುಗಿಯದ ಈರುಳ್ಳಿ. ಇವೆರಡೂ ಪಾತ್ರಗಳು ಪ್ರತಿ ಪದರದಲ್ಲೂ ಒಂದೊಂದು ಆಯಾಮ ನೀಡುತ್ತಾ ಸಾಗಿದರೆ ಕಣ್ಣಿಗೆ ಕಾಣದ ಪ್ರಮುಖ ಪಾತ್ರ ಅಹಂ. ಒಂದು ಹಂತದಲ್ಲಿ ಎಲ್ಲವನ್ನೂ ಮರೆತು ಹಾಯಾಗಿರೋಣ ಎಂಬ ತೀರ್ಮಾನವನ್ನು ತಲೆಕೆಳಗೆ ಮಾಡುವುದು ಇಬ್ಬರೊಳಗೂ ಇರುವ ಅದೇ ಅಹಂ. ಅದರ ಪ್ರಬಲ ಪ್ರತಿಪಾದನೆಯ ಉದ್ದೇಶದಿಂದಲೇ ಸಿನಿಮಾವನ್ನು ಬಹುತೇಕ ಮೂರು ಗಂಟೆಯಷ್ಟು ಉದ್ದ ಎಳೆಯಲಾಗಿದೆ. ಹಾಗಾಗಿ ಅಹಂಭಾವ ಅತಿಯಾಯಿತು ಎಂದು ಕೊನೆಕೊನೆಗೆ ಅನಿಸುತ್ತದೆ. ಆದರೆ ಅಷ್ಟು ಹೊತ್ತಿಗೆ ಬಿಡಬೇಕಾದ ಅಹಂ ನಮ್ಮಲ್ಲೂ ಒಂದಷ್ಟಿದೆ ಎಂಬುದನ್ನು ಚಿತ್ರ ನೆನಪಿಸುತ್ತದೆ.

ಸಿನಿಮಾದ ಸಂಭಾಷಣೆ ಇಂಥದ್ದೊಂದು ಕತೆಗೆ ಹೇಗೆ ಬೇಕೋ ಹಾಗೆಯೇ ಇದೆ. ಪೃಥ್ವಿರಾಜ್ ಡೈಲಾಗ್ ಡೆಲಿವರಿ ಬಗ್ಗೆ ದೂಸ್ರ ಮಾತಿಲ್ಲ. ಸಂಭಾಷಣೆಯ ಆಚೆಗೂ ಸಿಟ್ಟಿನ ಪ್ರದರ್ಶನಕ್ಕೆ ಚಿತ್ರಕತೆ ಹಲವು ಪರಿಕರಗಳನ್ನು ಬಳಸಿದೆ. ಹೆಚ್ಚು ಮಾತಾಡದೇ ಅಭಿನಯಿಸುವ ಬಿಜು‌ ಮೆನನ್ ಸವಾಲಿನ ಅಯ್ಯಪ್ಪನ್ ನಾಯರ್ ಪಾತ್ರವನ್ನು ಸರಿದೂಗಿಸಿದ್ದಾರೆ. ಮಲಯಾಳ‌ ಸಿನಿ ಜಗತ್ತಲ್ಲಿ ಬ್ಯೂಟಿ‌ ಕ್ವೀನ್ ಎಂದು ಕರೆಸಿಕೊಳ್ಳುವ ಗೌರಿ ನಂದಾ ಇಲ್ಲಿ‌ ಪರಿವರ್ತನೆಗೊಂಡ ನಕ್ಸಲ್ ಮಹಿಳೆ. ಇರುವ ಬ್ಯೂಟಿಯನ್ನೂ ಮರೆಮಾಚಯವಂತೆ ಆಕೆ ಮುಖದ ಮೇಲೆ ಹೊತ್ತ ಸೆಡವು ಅತ್ಯುತ್ತಮ ನಟನೆಗೆ ಸಾಕ್ಷಿ.

ಇದೇ ಸಿನಿಮಾ ತೆಲುಗಿಗೆ ರೀಮೇಕ್ ಆಗಿ ‘ಭೀಮ್ಲಾ ನಾಯಕ್’ ಹೆಸರಲ್ಲಿ ಫ್ರೆಬ್ರವರಿ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ. ಇಲ್ಲಿ‌ ಅಯ್ಯಪ್ಪನ್ ನಾಯರ್ ಪಾತ್ರದಲ್ಲಿ ಪವನ್ ಕಲ್ಯಾಣ್ ಇದ್ದರೆ ಕೋಶಿ ಪಾತ್ರವನ್ನು ರಾಣಾ ದುಗ್ಗುಬಾತಿ ನರ್ವಹಿಸಿದ್ದಾರೆ. ಹೀರೋ ಮತ್ತು ವಿಲನ್ ಸ್ಥಾನಪಲ್ಲಟ ಮಾಡಬೇಕಾದ ಈ ಕತೆಯಲ್ಲಿ ತೆಲುಗು ನಟರು ಇಮೇಜ್ ಬದಿಗೊತ್ತಿ ನಟಿಸಿದರಷ್ಟೇ ಹೊಂದಿಕೆಯಾಗಬಹುದು.

ನಟನೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲದಕ್ಕೂ ಪ್ರಶಸ್ತಿ ಪಡೆದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು ಕೆ.ಆರ್. ಸಚ್ಚಿದಾನಂದನ್. ಸಿನಿಮಾ ಬಿಡುಗಡೆಯಾಗಿ ನಾಲ್ಕೇ ತಿಂಗಳಿಗೆ ಈ‌ ಪ್ರತಿಭೆ ಹೃದಯಾಘಾತದಿಂದ ದಿವಂಗತರಾದದ್ದು ಮಾತ್ರ ಎದೆ ಹಿಂಡುವ ವಿಚಾರ.

LEAVE A REPLY

Connect with

Please enter your comment!
Please enter your name here