‘ಮಾನ್ಸೂನ್ ರಾಗ’, ‘ವೀರಂ’ ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಮಾನ್ಯ ಗೌಡ ‘ಬ್ಯಾಕ್ ಬೆಂಚರ್ಸ್’ ಸಿನಿಮಾದಲ್ಲಿ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಆಡಿಷನ್ ಮೂಲಕ ಅವರು ಈ ಪಾತ್ರಕ್ಕೆ ಆಯ್ಕೆಯಾಗಿದ್ದು. ನಿನ್ನೆ (ಜುಲೈ 19) ‘ಬ್ಯಾಕ್ ಬೆಂಚರ್ಸ್’ ತೆರೆಕಂಡಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಅವರು ಕಾತರರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡಿದ ಯೂಥ್‌ಫುಲ್ ಸಿನಿಮಾಗಳ ಪೈಕಿ ‘ಬ್ಯಾಕ್ ಬೆಂಚರ್ಸ್’ ಸಿನಿಮಾ ಕೂಡ ಒಂದು. ಈ ಚಿತ್ರದ ಮೂಲಕ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ ಪಿ, ಶಶಾಂಕ್ ಸಿಂಹ, ಕುಂಕುಮ್, ಅನುಷಾ ಸುರೇಶ್, ವಿಯೋಮಿ ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಈ ಪೈಕಿ ಮಾನ್ಯ ಗೌಡ ಸಹ ಒಬ್ಬರು. ‘ಮಾನ್ಸೂನ್ ರಾಗ’, ‘ವೀರಂ’ ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರಿಗೆ ಇಲ್ಲಿ ನಾಯಕಿಯಾಗಿ ಹೆಚ್ಚು ಸ್ಕ್ರೀನ್ ಸಿಕ್ಕಿದೆ. ಇಂಜಿನಿಯರಿಂಗ್ ಪದವೀಧರೆ ಮಾನ್ಯ ಚಿತ್ರದ ನಾಯಕಿಯರಲ್ಲೊಬ್ಬರು. ಚಿತ್ರದಲ್ಲಿ ಬಜಾರಿ ಹೆಣ್ಣುಮಗಳು ‘ಮಾಯ’ ಪಾತ್ರ ನಿರ್ವಹಿಸಿದ್ದಾರೆ. ನಿನ್ನೆ ಅವರ ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಅವರು ಕಾತರರಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, ‘ಮೂರು ವರ್ಷಗಳ ಹಿಂದೆ ನಾನು ಇಂಜಿನಿಯರಿಂಗ್ ಮುಗಿಸಿದೆ. ನನಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಶಾಸ್ತ್ರೀಯ ನೃತ್ಯ ಕಲಿಕೆ ಜೊತೆ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದೆ. ಹೀಗಿರುವಾಗಲೇ ಬ್ಯಾಕ್ ಬೆಂಚರ್ಸ್ ಚಿತ್ರದ ಆಡಿಷನ್ ವಿಷಯ ತಿಳಿಯಿತು. ಆಡಿಷನ್‌ನಲ್ಲಿ ಸುಮಾರು 700 ಯುವಕ-ಯುವತಿಯರು ಭಾಗವಹಿಸಿದ್ದರು. ನಿರ್ದೇಶಕರು ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ಅಭಿನಯಿಸಿ ತೋರಿಸಿದೆ. ಅಂತಿಮವಾಗಿ ಚಿತ್ರಕ್ಕೆ ಆಯ್ಕೆಯಾದ 30 ಜನರಲ್ಲಿ ನಾನು ಒಬ್ಬಳಾಗಿದ್ದೆ’ ಎನ್ನುತ್ತಾರೆ ಮಾನ್ಯ. ಆಡಿಷನ್ ಮುಗಿದ ಮೇಲೆ ನಟ ಸುಚೇಂದ್ರ ಪ್ರಸಾದ್, ಆಯ್ಕೆಯಾದ 30 ಯುವಕ – ಯುವತಿಯರಿಗಾಗಿ ಒಂದು ಕಾರ್ಯಾಗಾರ ಮಾಡಿದ್ದರಂತೆ. ಅಲ್ಲಿ ನಟನೆ ಕುರಿತು ಹಲವು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಆ ನಂತರ ಆರು ತಿಂಗಳ ಕಾಲ ಸಾಕಷ್ಟು ರಿಹರ್ಸಲ್ ಮಾಡಿ, ನಂತರ ಚಿತ್ರತಂಡವು ಚಿತ್ರೀಕರಣ ನಡೆಸಿದೆ.
ಮಾನ್ಯ ಚಿತ್ರೀಕರಣದಲ್ಲಷ್ಟೇ ಅಲ್ಲ, ಪೋಸ್ಟ್ ಪ್ರೊಡಕ್ಷನ್ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲೂ ಕೆಲಸ ಮಾಡಿದ್ದಾರೆ. ಈ ಮೂಲಕ ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ತಿಳಿವಳಿಕೆ ಪಡೆಯುವುದು ಅವರ ಉದ್ದೇಶವಾಗಿತ್ತು. ‘ನಮ್ಮ ನಿರ್ದೇಶಕ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ಚೆನ್ನಾಗಿ ಗೈಡ್ ಮಾಡಿದರು. ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದು ಅವಕಾಶಕ್ಕಾಗಿ ಧನ್ಯವಾದ ಹೇಳುತ್ತಾರವರು. ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳುವ ಅವರು, ‘ಚಿತ್ರದಲ್ಲಿ ನಾಲ್ಕು ಪ್ರಮುಖ ನಾಯಕಿಯರ ಪಾತ್ರಗಳಿವೆ. ರಿಹರ್ಸಲ್ ಸಮಯದಲ್ಲಿ ಈ ನಾಲ್ಕೂ ಪಾತ್ರಗಳನ್ನು ಮಾಡಿದ್ದೆ. ಅದರಲ್ಲಿ ನನಗೆ ಮಾಯ ಪಾತ್ರ ಬಹಳ ಇಷ್ಟವಾದ ಪಾತ್ರ. ಈ ಪಾತ್ರ ನನಗೆ ಸೂಟ್ ಆಗುತ್ತದೆ, ನಾನಿದನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರ ಕೊಟ್ಟಿದ್ದಾರೆ. ನಾನಿಲ್ಲಿ ಬಜಾರಿಯಾಗಿ ಕಾಣಿಸಿಕೊಂಡಿದ್ದೇನೆ. ನನಗಿಷ್ಟವಾದ ಪಾತ್ರ ಸಿಕ್ಕ ಖುಷಿ ಇದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರವರು. ‘ಬ್ಯಾಕ್ ಬೆಂಚರ್ಸ್’ ತಮ್ಮ ವೃತ್ತಿ ಬದುಕಿಗೆ ತಿರುವಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಮಾನ್ಯ. ಮುಂದಿನ ದಿನಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಬೇಕು ಎನ್ನುವುದು ಅವರ ಗುರಿ.